ಸಾರಾಂಶ
ಮನುಷ್ಯನ ಕುಗ್ಗುವಿಕೆಗೆ ಹಣ, ಆಸ್ತಿ ಕಾರಣವಾಗಲಿದೆ. ದಾನ, ಧರ್ಮ ಮಾಡಿ ಸಮಾಜದ ಒಗ್ಗಟ್ಟಿಗೆ ಶ್ರಮಿಸುವ ಕಾಯಕ ರೂಢಿಸಿಕೊಳ್ಳಬೇಕಿದೆ.
ಕನಕಗಿರಿ:
ದ್ವೇಷ, ಅಸೂಹೆಯಿಂದ ನಮಗೇನು ಸಿಗುವುದಿಲ್ಲ. ನಿಸ್ವಾರ್ಥ ಸೇವೆ, ಕಾಯಕ ತತ್ವ ತಿಳಿದು ಮುಕ್ತರಾಗೋಣ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪ್ರವಚನಕಾರ ಪುಟ್ಟರಾಜ ಶಾಸ್ತ್ರಿಗಳು ಹೇಳಿದರು.ಪಟ್ಟಣದ ಸುವರ್ಣಗಿರಿ ಸಂಸ್ಥಾನ ಮಠದಲ್ಲಿ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಪರಿಪೂರ್ಣದೆಡೆಗೆ ಪ್ರವಚನದಲ್ಲಿ ಭಾನುವಾರ ಮಾತನಾಡಿದರು.
ಇಲ್ಲಿ ಯಾವುದು ಶಾಶ್ವತವಲ್ಲ. ನಾವು ಏನೂ ತಂದಿಲ್ಲ, ತೆಗೆದುಕೊಂಡು ಹೋಗುವುದಂತೂ ಇಲ್ಲ. ಇರುವ ಮೂರು ದಿನಗಳಲ್ಲಿ ದ್ವೇಷ, ಅಸೂಹೆ ಬಿಟ್ಟು ಎಲ್ಲರೊಟ್ಟಿಗೆ ಸಂತೋಷದಿಂದ ಇದ್ದು ಹೋಗುವುದನ್ನು ಕಲಿತಾಗ ಮಾತ್ರ ಈ ಕಾಯಕ್ಕೊಂದು ಅರ್ಥ ಬರಲಿದೆ ಎಂದರು.ಮನುಷ್ಯನ ಕುಗ್ಗುವಿಕೆಗೆ ಹಣ, ಆಸ್ತಿ ಕಾರಣವಾಗಲಿದೆ. ದಾನ, ಧರ್ಮ ಮಾಡಿ ಸಮಾಜದ ಒಗ್ಗಟ್ಟಿಗೆ ಶ್ರಮಿಸುವ ಕಾಯಕ ರೂಢಿಸಿಕೊಳ್ಳಬೇಕಿದೆ. ಬಸವಣ್ಣನವರ ಹಾದಿಯಾಗಿ ಅನೇಕ ವಚನಕಾರರ ಆಶಯದಡಿ ಬದುಕು ಕಟ್ಟಿಕೊಳ್ಳೋಣ ಎಂದು ತಿಳಿಸಿದರು.
ಇದಕ್ಕೂ ಮೊದಲು ಜೀರಾಳ ಮತ್ತು ಕೇಸರಹಟ್ಟಿ ಗ್ರಾಮದ ಭಕ್ತರು ರೊಟ್ಟಿ, ಕರ್ಚಿಕಾಯಿ ಸೇರಿದಂತೆ ನಾನಾ ಸಿಹಿ ಖಾದ್ಯ ತಯಾರಿಸಿಕೊಂಡು ಬಸವ ಬುತ್ತಿ ಕಾರ್ಯಕ್ರಮದಡಿ ಪಟ್ಟಣದ ರಾಜಬೀದಿಯಲ್ಲಿ ಭಜನೆಯೊಂದಿಗೆ ಮೆರವಣಿಗೆ ಮಾಡುವ ಮೂಲಕ ಶ್ರೀಮಠಕ್ಕೆ ಅರ್ಪಿಸಿದರು. ಪ್ರವಚನ ಮುಕ್ತಾಯದ ನಂತರ ಭಕ್ತರು ಪ್ರಸಾದ ಸ್ವೀಕರಿಸಿದರು.ಸುವರ್ಣಗಿರಿ ಸಂಸ್ಥಾನ ಮಠ ಪೀಠಾಧಿಪತಿ ಡಾ. ಚನ್ನಮಲ್ಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಬಸವರಾಜ ಗುಗ್ಗಳಶೆಟ್ರ, ವಾಗೀಶ ಹಿರೇಮಠ, ಪ್ರಶಾಂತ ಪ್ರಭುಶೆಟ್ಟರ, ವೀರಭದ್ರಪ್ಪ ಕುಂಬಾರ, ವೀರೇಶ ವಸ್ತ್ರದ ಸೇರಿದಂತೆ ಶ್ರೀಮಠದ ಶಿಕ್ಷಣ ಸಂಸ್ಥೆಯ ಶಿಕ್ಷಕ ಬಳಗದವರು ಇದ್ದರು.