ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಘದಿಂದ ಜಯರಾಮ್ ರಾಯಪುರ ನಾಟಕಗಳ ಕುರಿತ ಚರಿತ್ರೆ ವರ್ತಮಾನವಾಗು ಪರಿ ವಿಚಾರ ಸಂಕಿರಣವನ್ನು ಜು.೪ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜು ವಹಿಸುವರು. ನಾಟಕಕಾರ ಮತ್ತು ಆಂಧ್ರಪ್ರದೇಶ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಜಯರಾಮ್ ರಾಯಪುರ ಗೌರವ ಉಪಸ್ಥಿತರಿರುವರು. ಜಯರಾಮ್ ರಾಯಪುರ ನಾಟಕಗಳು ರಂಗಪ್ರಯೋಗದ ಸಾಧ್ಯತೆಗಳ ಕುರಿತು ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್, ಜಯರಾಮ್ ರಾಯಪುರ ನಾಟಕಗಳು ಸಾಹಿತ್ಯಿಕ ಒಳನೋಟ ಕುರಿತು ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ವಿಚಾರ ಮಂಡಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಟಕಕಾರರ ಜೊತೆ ಒಂದು ಸುತ್ತು ಮಾತು-ಕಥೆಯನ್ನು ರಂಗಕರ್ಮಿ ಶಶಿಧರ ಭಾರಿಘಾಟ್ ಸಮನ್ವಯಗೊಳಿಸುವರು. ರತ್ನಶ್ರೀ, ಫಣಿಮಾಲ, ಡಾ.ಎಂ.ಕೆಂಪಮ್ಮ, ಡಾ.ಎಂ.ಎಸ್.ಅನಿತಾ, ಡಾ.ಎನ್.ಎಸ್.ದೇವಿಕಾ, ಭವಾನಿ, ಡಾ.ರಮ್ಯಾ, ಅರವಿಂದ ಪ್ರಭು, ಶಶಿ ಅಪೂರ್ವ, ರೋಹನ್ ಅವರು ಪಾಲ್ಗೊಳ್ಳುವರು ಎಂದರು.

ಜಯರಾಮ್ ರಾಯಪುರ ಅವರ ನಾಟಕಗಳ ಆಯ್ದ ಭಾಗಗಳನ್ನು ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕಲಾವಿದರು, ಕರ್ನಾಟಕ ಸಂಘದ ಕಲಾವಿದರು ಸಾಂದರ್ಭಿಕವಾಗಿ ಪ್ರಸ್ತುತಪಡಿಸುವರು ಎಂದು ನುಡಿದರು.


ಗೋಷ್ಠಿಯಲ್ಲಿ ಎಚ್.ಡಿ.ಸೋಮಶೇಖರ್, ಮಂಜುಳಾ ಇದ್ದರು.

ಶಾಲಾ ಸಂಸತ್ ಚುನಾವಣೆ: ಬಿ.ಎಸ್.ಲಿಖಿತ್ ಮುಖ್ಯಮಂತ್ರಿಯಾಗಿ ಆಯ್ಕೆ

ಹಲಗೂರು:ಮಾರಗೌಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಬಿ.ಎಸ್.ಲಿಖಿತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ, ಉಪ ಮುಖ್ಯಮಂತ್ರಿಯಾಗಿ ಎಂ.ಎಸ್.ಲಿಖಿತ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಕುಂತಲಾ ಘೋಷಣೆ ಮಾಡಿದರು.

ಕನ್ನಡ ಹಾಗೂ ಆಂಗ್ಲ ಮಾಧ್ಯಮದ 50 ವಿದ್ಯಾರ್ಥಿನಿಯರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, 24 ವಿದ್ಯಾರ್ಥಿನಿಯರು ವಿಜೇತರಾಗಿ ನಾಲ್ವರನ್ನು ನಾಮನಿರ್ದೇಶನ ಮಾಡಿದ್ದಾರೆ. ಒಟ್ಟು 28 ಜನರು ಮಂತ್ರಿ ಮಂಡಲದಲ್ಲಿದ್ದಾರೆ. ಎಲ್ಲರಿಗೂ ವಿವಿಧ ಖಾತೆಗಳನ್ನು ಹಂಚಲಾಗಿದೆ. ಚುನಾವಣಾ ಅಧಿಕಾರಿಯಾಗಿದ್ದ ಮುಖ್ಯೋಪಾಧ್ಯಾಯನಿ ಶಕುಂತಲಾ ಎಲ್ಲರಿಗೂ ದೇವರ ಹೆಸರಿನಲ್ಲಿ ಪ್ರಮಾಣವಚನ ಬೋಧಿಸಿದರು.ಗ್ರಾಪಂನಿಂದ ಲೋಕಸಭೆ ಚುನಾವಣೆಯವರೆಗೂ ಎಲ್ಲಾ ವಿಧದ ಚುನಾವಣೆಗಳು, ವಿವಿಧ ಆಯೋಗಗಳು ಹೇಗೆ ನಡೆಸುತ್ತದೆ ಎಂಬ ಮಾಹಿತಿಯನ್ನು ಶಾಲಾ ಸಂಸತ್ ಚುನಾವಣೆ ಮೂಲಕ ಮಕ್ಕಳಿಗೆ ಅರಿವು ಮೂಡಿಸಲು ಈ ಚುನಾವಣೆ ನಡೆಸಲಾಗುತ್ತದೆ ಎಂದು ಮುಖ್ಯ ಶಿಕ್ಷಕರು ಹೇಳಿದರು.

ಈ ವೇಳೆ ಜಿ.ಸಿ.ಅರ್ಚನಾ, ಕೆ.ಸತೀಶ್ ಕುಮಾರ್, ಹನುಮಯ್ಯ ಎನ್.ಡಿ, ದಿವ್ಯ ಎನ್.ಆರ್. ಇದ್ದರು.