ಸಾರ್ವಜನಿಕರಿಗೆ ಪ್ರತ್ಯೇಕ ರಸ್ತೆ, ವಾಹನ ನಿಲುಗಡೆಗೆ ಅವಕಾಶ: ಸಚಿವ ಮಂಕಾಳ ವೈದ್ಯ

| Published : Aug 19 2024, 12:51 AM IST

ಸಾರಾಂಶ

ವಸತಿಗೃಹದ ಸುತ್ತ ಕಾಂಪೌಂಡ್ ನಿರ್ಮಿಸಿಕೊಡುವ ಭರವಸೆ ನೀಡಿದರು. ಪೊಲೀಸ್ ವಸತಿಗೃಹ ಸುತ್ತ ಕಾಂಪೌಂಡ್ ನಿರ್ಮಿಸಿ ಮೈದಾನವನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲು ಡಿವೈಎಸ್ಪಿ ಮಹೇಶ ಅವರಿಗೆ ಸಚಿವರು ಸೂಚಿಸಿದರು.

ಭಟ್ಕಳ: ಇಲ್ಲಿನ ಸಾಗರ ರಸ್ತೆಯ ಪೊಲೀಸ್ ವಸತಿಗೃಹ ಮತ್ತು ಮೈದಾನಕ್ಕೆ ತೆರಳುವ ರಸ್ತೆಗೆ ಪೊಲೀಸರು ಸಾರ್ವಜನಿಕರ ವಾಹನ ಓಡಾಟಕ್ಕೆ ಬ್ಯಾರಿಕೇಡ್ ಹಾಕಿ ನಿರ್ಬಂಧ ಹೇರಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಶನಿವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಇಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು.

ಸಚಿವರು ಸಾರ್ವಜನಿಕರಿಗೆ ಪೊಲೀಸ್ ವಸತಿಗೃಹದ ಹಿಂಬದಿಗೆ ಸಾರ್ವಜನಿಕರಿಗೆ ಓಡಾಡಲು ಪ್ರತ್ಯೇಕ ರಸ್ತೆ ನಿರ್ಮಾಣ ಮತ್ತು ಸುಧೀಂದ್ರ ಕಾಲೇಜಿನ ಹಿಂಬದಿಗಿರುವ ರಸ್ತೆ ಎತ್ತರಿಸಿ ಕಾಂಕ್ರೀಟ್ ರಸ್ತೆ ಮಾಡಿಕೊಡುವ ಭರವಸೆ ನೀಡಿದರು. ಆಗ ಡಿವೈಎಸ್ಪಿ ಮಹೇಶ ಅವರಿಗೆ ಸಾರ್ವಜನಿಕರಿಗೆ ಓಡಾಟಕ್ಕೆ ಅನುಕೂಲವಾಗುವಂತೆ ಬ್ಯಾರಿಕೇಡ್ ತೆರವುಗೊಳಿಸಿ. ಒಂದು ತಿಂಗಳಲ್ಲಿ ಇಲ್ಲಿನ ಎಲ್ಲ ಸಮಸ್ಯೆ ಬಗೆಹರಿಸಿಕೊಡುತ್ತೇನೆಂದರು.

ಸಾರ್ವಜನಿಕರು ಇಷ್ಟು ದಿನ ಮೈದಾನದ ಒಂದು ಬದಿಯಲ್ಲಿ ವಾಹನ ನಿಲ್ಲಿಸುತ್ತಿದ್ದರು. ಈ ಪ್ರದೇಶದಲ್ಲಿ ಕೆಲವು ಮನೆಗಳಿಗೆ ರಸ್ತೆಗಳಿಲ್ಲ. ಕಿರುದಾರಿಯಲ್ಲೇ ಹೋಗಬೇಕು. ಆದರೆ ಪೊಲೀಸರು ಕೆಲವು ತಿಂಗಳಿನಿಂದ ಇಲ್ಲಿ ವಾಹನ ನಿಲುಗಡೆಗೂ ಅವಕಾಶ ಕೊಡುತ್ತಿಲ್ಲ. ಇದರಿಂದ ಸಮಸ್ಯೆ ಆಗಿದೆ ಎಂದರು.

ಇದಕ್ಕೆ ಸಚಿವರು, ವಾಹನ ನಿಲುಗಡೆ ಸ್ಥಳವಕಾಶ ಮಾಡಿಕೊಡುವ ಭರವಸೆ ನೀಡಿದರು. ಪೊಲೀಸ್ ವಸತಿಗೃಹದ ಸುತ್ತಮುತ್ತ ಗಿಡಕಂಟೆಗಳು ಬೆಳೆದಿರುವುದನ್ನು ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಪುರಸಭೆಯ ಆರೋಗ್ಯ ನಿರೀಕ್ಷಕಿ ಸುಜಿಯಾ ಅವರಿಗೆ ಕೂಡಲೇ ಗಿಡಕಂಟೆಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.

ಪೊಲೀಸ್ ವಸತಿಗೃಹದಿಂದ ಹೊರಹೋಗುವ ಒಳಚರಂಡಿ ನೀರು ಮನೆಗ ನುಗ್ಗಿ ಹಾನಿಯಾಗುತ್ತಿದೆ ಎಂದು ಸ್ಥಳೀಯ ಮಹಿಳೆಯೋರ್ವಳು ಸಚಿವರ ಬಳಿ ಅಲವತ್ತುಕೊಂಡಾಗ ಅವರ ಮನೆಗೆ ಹೋಗಿ ಪರಿಶೀಲನೆ ನಡೆಸಿದ ಸಚಿವರು, ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯ ಅಭಿಯಂತರರನ್ನು ಸ್ಥಳಕ್ಕೆ ಕರೆಯಿಸಿ ಪೊಲೀಸ್ ವಸತಿಗೃಹದ ತನಕ ಹೊಸದಾಗಿ ಒಳಚರಂಡಿ ಚೇಂಬರ್ ನಿರ್ಮಿಸಿ ವಸತಿಗೃಹದ ಪ್ರತಿ ಮನೆಯ ಒಳಚರಂಡಿ ಸಂಪರ್ಕವನ್ನು ಬೇಂಬರ್‌ಗೆ ನೀಡುವಂತೆ ಸೂಚಿಸಿದರು.

ವಸತಿಗೃಹದ ಸುತ್ತ ಕಾಂಪೌಂಡ್ ನಿರ್ಮಿಸಿಕೊಡುವ ಭರವಸೆ ನೀಡಿದರು. ಪೊಲೀಸ್ ವಸತಿಗೃಹ ಸುತ್ತ ಕಾಂಪೌಂಡ್ ನಿರ್ಮಿಸಿ ಮೈದಾನವನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲು ಡಿವೈಎಸ್ಪಿ ಮಹೇಶ ಅವರಿಗೆ ಸಚಿವರು ಸೂಚಿಸಿದರು. ಸಹಾಯಕ ಆಯುಕ್ತೆ ಡಾ. ನಯನಾ, ಎಸಿಎಫ್‌ ಗಿರೀಶ, ಜಾಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ನಾಯ್ಕ, ಶಾಹೀನ್ ಶೇಖ, ಸ್ಥಳೀಯರಾದ ಸಚಿನ್ ನಾಯ್ಕ, ಮಂಜಪ್ಪ ನಾಯ್ಕ, ಶ್ರೀಧರ ಶೆಟ್ಟಿ ಮುಂತಾದವರಿದ್ದರು.