ಸಾರಾಂಶ
ಬೆಂಗಳೂರು : ಹಾಸನ ಗಣೇಶೋತ್ಸವ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿ ನುಗ್ಗಿ 10 ಜನರ ಬಲಿಯಾದ ಭೀಕರ ಅಪಘಾತ ಬೆನ್ನಲ್ಲೇ ರಾಜಧಾನಿಯಲ್ಲಿ ಶನಿವಾರ ಕಂಟೈನರ್‌ವೊಂದರಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ತಂದೆ, ಮಗಳು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮಾದೇಶ್ವರ ನಗರದ ನಿವಾಸಿಗಳಾದ ಏಸು (44) ಹಾಗೂ ಅವರ ಪುತ್ರಿ ಮರಿಯಾ ಜೆನಿಫರ್ (24) ಮೃತ ದುರ್ದೈವಿಗಳು. ಈ ಘಟನೆಯಲ್ಲಿ ಬೈಕ್ ಸವಾರ ಸಂದೀಪ್ ಮೆಹ್ತಾ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ. ಘಟನೆಯಲ್ಲಿ ಲಾರಿ, ಬೈಕ್ ಹಾಗೂ ಕಾರು ಜಖಂಗೊಂಡಿವೆ. ಕಾಮಾಕ್ಷಿಪಾಳ್ಯದಿಂದ ಸುಮನಹಳ್ಳಿ ಕಡೆಗೆ ತೆರಳುತ್ತಿದ್ದ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಚಲಿಸಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಘಟನೆ ಬಳಿಕ ತಪ್ಪಿಸಿಕೊಂಡಿರುವ ಚಾಲಕನ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಗಳ ಮದುವೆ ಫಿಕ್ಸ್ ಆಗಿತ್ತು:
ಮೃತ ಆಟೋ ಚಾಲಕ ಏಸು ಹೇರೋಹಳ್ಳಿ ಸಮೀಪದ ಮಾದೇಶ್ವರ ನಗರದಲ್ಲಿ ನೆಲೆಸಿದ್ದರು. ಅವರ ಪತ್ನಿ ಗಾರ್ಮೆಂಟ್ಸ್‌ನಲ್ಲಿ ನೌಕರಿಯಲ್ಲಿದ್ದಾರೆ. ಮಗಳು ಜೆನಿಫರ್ ಮದುವೆ ನಿಶ್ಚಯವಾಗಿದ್ದು ಈ ಹಿನ್ನೆಲೆಯಲ್ಲಿ ತಂದೆಯೊಂದಿಗೆ ಹೆಣ್ಣೂರು ಸಮೀಪದ ಚರ್ಚ್‌ಗೆ ಶನಿವಾರ ಬೆಳಗ್ಗೆ 7.20ರಲ್ಲಿ ಆಟೋದಲ್ಲಿ ತೆರಳುತ್ತಿದ್ದರು. ಇತ್ತ ಕಾಮಾಕ್ಷಿಪಾಳ್ಯ ಕೈಗಾರಿಕಾ ಪ್ರದೇಶದಲ್ಲಿನ ಸಂದೀಪ್ ಪ್ಲಾಸ್ಟಿಕ್ ಕೈಗಾರಿಕೆಗೆ ಬಂದಿದ್ದ ಕಂಟೈನರ್ ಚಾಲಕ, ಅಲ್ಲಿ ಬುಕ್ಕಿಂಗ್ ರದ್ದುಗೊಂಡ ಕಾರಣಕ್ಕೆ ಮರಳುತ್ತಿದ್ದ.
ಆಗ ಪೂಜಾ ಕಲ್ಯಾಣ ಮಂಟಪದಿಂದ ಸುಮನಹಳ್ಳಿ ಕಡೆಗೆ ಹೋಗುವ ಇಳಿಜಾರಿನಲ್ಲಿ ಎಡಕ್ಕೆ ಕಂಟೈನರ್ ಚಾಲಕ ತಿರುವು ತೆಗೆದುಕೊಳ್ಳುತ್ತಿದ್ದಾಗ ನಿಯಂತ್ರಣ ತಪ್ಪಿದೆ. ಇದರಿಂದ ಕಂಟೈನರ್ ಏಕಾಏಕಿ ಅತಿವೇಗದಿಂದ ಬಲ ಬದಿಗೆ ನುಗ್ಗಿದೆ. ಅದೇ ಸಮಯಕ್ಕೆ ಸುಮನಹಳ್ಳಿ ಕಡೆಯಿಂದ ಕಾಮಾಕ್ಷಿಪಾಳ್ಯ ಕಡೆಗೆ ಹೋಗುತ್ತಿದ್ದ ಆಟೋ ಹಾಗೂ ಕಾರಿಗೆ ಗುದ್ದಿ ಬಳಿಕ ರಸ್ತೆ ಬದಿಗೆ ನುಗ್ಗಿ ಕಂಟೈನರ್ ನಿಂತಿದೆ. ಕಂಟೈನರ್ ಡಿಕ್ಕಿಯಾದ ರಭಸಕ್ಕೆ ನಿಯಂತ್ರಣ ತಪ್ಪಿ ಮುಂದೆ ಇದ್ದ ಬೈಕ್‌ಗೆ ಕಾರು ಅಪ್ಪಳಿಸಿದೆ. ಈ ಘಟನೆಯಲ್ಲಿ ಆಟೋದಲ್ಲಿದ್ದ ಚಾಲಕ ಏಸುದಾಸ್ ಹಾಗೂ ಅವರ ಪುತ್ರಿ ಜೆನಿಫರ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಬೈಕ್ ಸವಾರನ ಕಾಲಿಗೆ ಸಣ್ಣ ಪ್ರಮಾಣದ ಪೆಟ್ಟಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಕಾರಲ್ಲಿದ್ದ ಗರ್ಭಿಣಿ ಪಾರು
ಈ ಸರಣಿ ಅಪಘಾತದಲ್ಲಿ ಕಾರಿನಲ್ಲಿ ಪಯಣಿಸುತ್ತಿದ್ದ ಗರ್ಭಿಣಿ ಪಾರಾಗಿದ್ದಾರೆ. ಸುಮನಹಳ್ಳಿ ಕಡೆಯಿಂದ ಕಾಮಾಕ್ಷಿಪಾಳ್ಯಕ್ಕೆ ತಮ್ಮ ಕುಟುಂಬದ ಜತೆ ಕಾರಿನಲ್ಲಿ ಅವರು ತೆರಳುತ್ತಿದ್ದರು. ಆದರೆ ಕಾರು ಅಲ್ಪ ಪ್ರಮಾಣದಲ್ಲಿ ಜಖಂ ಆಗಿದ್ದು, ವಾಹನದಲ್ಲಿದ್ದವರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))