ಸಾರಾಂಶ
ಕೊಪ್ಪಳ:
ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೆಚ್ಚು ಅಪಘಾತ ಆಗುತ್ತಿರುವುದರಿಂದ ವಾಹನಗಳ ವೇಗ ನಿಯಂತ್ರಿಸಲು ಮತ್ತು ವಾಹನಗಳ ಮೇಲೆ ನಿಗಾ ಇರಿಸಲು ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ರಸ್ತೆ-೫೦ರಲ್ಲಿ ₹ ೨.೫ ಕೋಟಿ ವೆಚ್ಚದಲ್ಲಿ ನಾಲ್ಕು ಸ್ಥಳದಲ್ಲಿ ಉತ್ತಮ ತಂತ್ರಜ್ಞಾನದ ಸಿಸಿ ಕ್ಯಾಮೆರಾ ಅಳವಡಿಸಿದ್ದು ಸೇತುವೆ ಬಳಿ ವಿದ್ಯುತ್ ದೀಪ ಅಳವಡಿಸಿದೆ. ಹೆದ್ದಾರಿಯಲ್ಲಿ ಪ್ರತಿ ವರ್ಷ ೧೦೦ ಅಪಘಾತ ನಡೆದರೆ, ೫೦ ಜನ ಸಾವನ್ನಪ್ಪುತ್ತಿದ್ದಾರೆ. ಇದೆಲ್ಲವೂ ಮಿತಿಮೀರಿದ ವೇಗದಿಂದಾಗಿಯೇ ಆಗುತ್ತಿವೆ. ಅಪಘಾತ ನಂತರ ತಪ್ಪಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ಮೇಲೆ ನಿಗಾ ಇರಿಸಲು ಸಿಸಿ ಕ್ಯಾಮೆರಾ ಅಳವಡಿಸಿ, ಕಣ್ಗಾವಲು ಇಡಲಾಗುತ್ತದೆ ಎಂದರು.
ಸಿಸಿ ಕ್ಯಾಮೆರಾ ವಣಬಳ್ಳಾರಿ, ಬೂದಗುಂಪಾ ಕ್ರಾಸ್, ಅಮರೇಶ್ವರ ದೇವಸ್ಥಾನ ಸಮೀಪ, ತುಂಗಭದ್ರಾ ನದಿ ಸೇತುವೆ-೧ರಲ್ಲಿ ಅಳವಡಿಕೆ ಮಾಡಿದೆ. ಇಲ್ಲಿನ ಪ್ರತಿಯೊಂದು ಸಿಸಿ ಕ್ಯಾಮೆರಾ ರೆಕಾರ್ಡ್ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನೋಡಬಹುದಾಗಿದೆ ಮತ್ತು ಸಂಗ್ರಹವೂ ಆಗುತ್ತದೆ ಎಂದರು.ವಾಹನದ ನಂಬರ್ ಪ್ಲೇಟ್ ಹಾಗೂ ಚಾಲಕನ ಮುಖ ಚಹರೆಯನ್ನೂ ಸೆರೆ ಹಿಡಿಯುವಷ್ಟು ಗುಣಮಟ್ಟದ್ದಾಗಿವೆ ಎಂದ ಅವರು, ತುಂಗಭದ್ರಾ ನದಿ ಸೇತುವೆ-೧, ಸೇತುವೆ-೨, ಅಮರೇಶ್ವರ ದೇವಸ್ಥಾನ, ವಣಬಸಳ್ಳಾರಿ, ಬೇವೂರು ಕ್ರಾಸ್‌ನಲ್ಲಿ ವಿದ್ಯುತ್ ದೀಪ ಅಳವಡಿಕೆ ಮಾಡಿದ್ದೇವೆ ಎಂದು ತಿಳಿಸಿದರು.
ನೀರಾವರಿಗೆ ಆದ್ಯತೆ:ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಜಾರಿಯಾಗಿರುವ ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ನೀರಾವರಿ ಕಲ್ಪಿಸಲು ಮಧ್ಯಪ್ರದೇಶ ಮಾದರಿ ಅಳವಡಿಸಲಾಗುತ್ತದೆ ಎಂದ ಸಂಸದರು, ಈಗಾಗಲೇ ರೈತು ವೀಂಡ್ ಪವರ್ ಮತ್ತು ಸೋಲಾರ್ ಪ್ಲಾಂಟ್‌ಗಳ 7000 ಎಕರೆ ನೀಡಿದ್ದು, ಅದನ್ನು ಹೊರತುಪಡಿಸಿ ನೀರಾವರಿ ಯೋಜನೆ ಜಾರಿ ಮಾಡಲಾಗುವುದು ಎಂದರು.
ಕೈಗಾರಿಕೆಗೆ ಅವಕಾಶ ನೀಡಲ್ಲ:ಅಭಿವೃದ್ಧಿಗೆ ಕೈಗಾರಿಕೆಗಳು ಬೇಕು. ಆದರೆ, ಜನವಸತಿ ಪ್ರದೇಶದ ಬಳಿ ಕೈಗಾರಿಕೆಗೆ ಅವಕಾಶ ನೀಡುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದ್ದು, ಅವಕಾಶ ನೀಡುವುದಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಎಸ್‌ಪಿಎಲ್ ಸ್ಥಾಪನೆಗೆ ನಮ್ಮ ವಿರೋಧವಿದೆ. ಅದರಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಭಿವೃದ್ಧಿಗೆ ಕೈಗಾರಿಕೆಗಳು ಬೇಕೇಬೇಕು ಎನ್ನುವುದು ನಮಗೂ ಗೊತ್ತಿದೆ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಜನರಿಗೆ ತೊಂದರೆಯಾಗುವ ಸ್ಥಳಗಲ್ಲಿ ಬೇಡ ಎನ್ನುವ ಕಾರಣಕ್ಕಾಗಿಯೇ ನಗರಕ್ಕೆ ಹೊಂದಿಕೊಂಡು ಬಂದಿರುವ ಬಿಎಸ್ ಪಿಎಲ್ ಕಾರ್ಖಾನೆ ವಿರೋಧಿಸಿರುವುದು ಎಂದರು. ಕನಕಾಪುರ ಬಳಿ ಮತ್ತೊಂದು ಕೈಗಾರಿಕೆ ಬರುವ ಕುರಿತು ನನಗೆ ಮಾಹಿತಿ ಇಲ್ಲ ಎಂದರು.