ಸಾರಾಂಶ
ವಿವಿಧ ಯೋಜನೆಗಳ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ, ಸ್ವತಃ ಸ್ಥಳ ಭೇಟಿ ನೀಡಿ, ಅಲ್ಲಿನ ಸ್ಥಳೀಯ ಪರಿಸ್ಥಿತಿಗಳನ್ನು ಜನರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು.
ಕಾರವಾರ: ಸರ್ಕಾರದಿಂದ ನೂತನವಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳು ಸೇವಾ ಮನೋಭಾವದಿಂದ ಮತ್ತು ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುವಂತಾಗಬೇಕು ಎಂದು ಜಿಲ್ಲೆಗೆ ನೂತನವಾಗಿ ಆಯ್ಕೆಯಾಗಿರುವ ಎಂಜಿನಿಯರ್‌ಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ತಿಳಿಸಿದರು.
ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗ ಹಾಗೂ ಉಪ ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲ ಸಹಾಯಕ, ಕಿರಿಯ ಎಂಜಿನಿಯರ್ ಅವರಿಗಾಗಿ ಹಮ್ಮಿಕೊಂಡ ಜೆಜೆಎಂ ಯೋಜನೆಯಡಿ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ವಿವಿಧ ಯೋಜನೆಗಳ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ, ಸ್ವತಃ ಸ್ಥಳ ಭೇಟಿ ನೀಡಿ, ಅಲ್ಲಿನ ಸ್ಥಳೀಯ ಪರಿಸ್ಥಿತಿಗಳನ್ನು ಜನರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.ತರಬೇತಿ ಕಾರ್ಯಾಗಾರದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೀವ್ ಪಿ. ನಾಯಕ ಕ್ಷೇತ್ರ ಭೇಟಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.ಸಹಾಯಕ ಎಂಜಿನಿಯರ್(ಮುಂಡಗೋಡ) ಪ್ರದೀಪ್ ಭಟ್ ತಾಂತ್ರಿಕ ವಿಭಾಗಕ್ಕೆಸಂಬಂಧಿಸಿದಂತೆ ಮಾಹಿತಿ ನೀಡಿದರು. ನುರಿತ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರ ಜೋಸೆಪ್ ಜಿ.ಎಂ. ರೆಬೆಲ್ಲೋ, ಜಲಸಂಪನ್ಮೂಲ, ಜಲಕ್ಷಾಮ, ನೀರಿನ ಶುದ್ಧತೆ ಮತ್ತಿತರ ವಿಷಯಗಳ ಕುರಿತು ತರಬೇತಿ ನೀಡಿದರು.ಜಿಪಂ ಅಭಿವೃದ್ಧಿ ಶಾಖೆಯ ಉಪಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ಯೋಜನಾ ನಿರ್ದೇಶಕ ಖರೀಮ್ ಹಸದಿ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ ಮತ್ತಿತರರು ಇದ್ದರು.