ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಿ: ನ್ಯಾಯಾಧೀಶ ಟಿ.ಸಿ ಶ್ರೀಕಾಂತ್

| Published : Nov 20 2024, 12:34 AM IST

ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಿ: ನ್ಯಾಯಾಧೀಶ ಟಿ.ಸಿ ಶ್ರೀಕಾಂತ್
Share this Article
  • FB
  • TW
  • Linkdin
  • Email

ಸಾರಾಂಶ

ಕಕ್ಷಿದಾರರು ಲೋಕ ಅದಾಲತ್‌ನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದು ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ಹೇಳಿದರು. ಕೊಳ್ಳೇಗಾಲದಲ್ಲಿ ನಡೆದ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಲೋಕ ಅದಾಲತ್‌ನಲ್ಲಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಕಕ್ಷಿದಾರರ ಅಮೂಲ್ಯ ಸಮಯ ಉಳಿಯುತ್ತದೆ. ಜತೆಗೆ ಉತ್ತಮ ಬಾಂಧವ್ಯ ನೆಲೆಗೊಳ್ಳಲು ಸಹಕಾರಿಯಾಗುವ ಜೊತೆಗೆ ನ್ಯಾಯಾಲಯ ಶುಲ್ಕವನ್ನು ಸಹ ಹಿಂಪಡೆಯುವ ಅವಕಾಶ ಇದೆ. ಕಕ್ಷಿದಾರರು ಲೋಕ ಅದಾಲತ್‌ನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದು ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ಹೇಳಿದರು.ಇಲ್ಲಿನ ವಕೀಲರ ಸಭಾಂಗಣದಲ್ಲಿ ಮಂಗಳವಾರ ನಡೆದ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳುವಲ್ಲಿ ಲೋಕ ಅದಾಲತ್ ಮಹತ್ವಪೂರ್ಣ ವೇದಿಕೆಯಾಗಿದೆ. ಹಾಗಾಗಿ ಎಲ್ಲರೂ ಇದರ ಬಳಕೆ ಮಾಡಿಕೊಳ್ಳಬೇಕು. ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾದ ಎಲ್ಲಾ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳುವಂತೆ ಕಕ್ಷಿದಾರರ ಮನವೊಲಿಕೆ ಅಗತ್ಯ, ಈ ನಿಟ್ಟಿನಲ್ಲಿ ವಕೀಲರು ಮುಂದಾಗಿ ಕಕ್ಷಿದಾರರಿಗೆ ತಿಳಿವಳಿಕೆ ನೀಡಿ ಎಂದರು.ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸುನಿತಾ ಮಾತನಾಡಿ, ವಕೀಲರು ಮತ್ತು ಕಕ್ಷಿದಾರ ನಡುವೆ ಉತ್ತಮ ಸಂಬಂಧ ಇದೆ. ವಕೀಲರು ಕಕ್ಷಿದಾರರಿಗೆ ಸೂಕ್ತ ತಿಳಿವಳಿಕೆ ನೀಡುವ ಮೂಲಕ ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಮನವೊಲಿಸಬೇಕು ಎಂದರು.

ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು ಈ ಅದಾಲತ್‌ನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳ್ಳುವಂತೆ ಮಾಡುವಲ್ಲಿ ವಕೀಲರ ಪಾತ್ರ ಮಹತ್ವವಾಗಿರುವುದರಿಂದ ವಕೀಲರು ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಸಿ ರವಿ ಲೋಕ ಅದಾಲತ್ ಯಶಸ್ವಿಗೆ ಒಲವು ತೋರಬೇಕು ಮತ್ತು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಹಿರಿಯ ವಕೀಲ ಮಾದಪ್ಪ, ಬಸವರಾಜು ಚೆಕ್ ಬೌನ್ಸ್ ಮತ್ತು ಮಿಸ್ ಪ್ರಕರಣಗಳಲ್ಲಿ ಪೊಲೀಸರಿಂದ ಸಮರ್ಪಕವಾಗಿ ಜಾರಿಯಾದಲ್ಲಿ ಹೆಚ್ಚಿನ ಪ್ರಕಟಣೆಗಳು ಇತ್ಯರ್ಥಗೊಳ್ಳಲು ಸಾಧ್ಯತೆ ಇದೆ ಎಂದು ತಿಳಿಸಿದರು. ಹಿರಿಯ ವಕೀಲ ಡಿ.ವೆಂಕಟಾಚಲ ಕಾರ್ಯಕ್ರಮ ನಿರೂಪಿಸಿ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಪ್ರಕರಣಗಳು ನಮ್ಮ ನ್ಯಾಯಾಲಯದ ವತಿಯಿಂದ ಇತ್ಯರ್ಥ ಗೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಬ್ ಇನ್ಸ್‌ಪೆಕ್ಟರ್ ವರ್ಷ ಮಾತನಾಡಿ, ಲೋಕ ಅದಾಲತ್ ಕಾರ್ಯಕ್ರಮದ ಯಶಸ್ವಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ವಕೀಲರ ಸಂಘದ ಉಪಾಧ್ಯಕ್ಷೆ ಸಿಆರ್ ನಿರ್ಮಲ, ಕಾರ್ಯದರ್ಶಿ ಸಿಬಿ ಮಹೇಶ್ ಕುಮಾರ್ ಉಪಸ್ಥಿತರಿದ್ದರು.