ಸಾರಾಂಶ
ಪಟ್ಟಣದ 17ನೇ ವಾರ್ಡಿನ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ರಸ್ತೆ ಅಭಿವೃದ್ಧಿ ಕಂಡಿಲ್ಲ, ಚರಂಡಿ ಇಲ್ಲದೇ ಅಲ್ಲಿನ ನಿವಾಸಿಗಳು ನಿತ್ಯ ಬಳಕೆ ಮಾಡುವ ಎಲ್ಲ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಪುರಸಭೆ ಕಣ್ಮುಚ್ಚಿ ಕುಳಿತಿದ್ದು, ಅಲ್ಲಿನ ನಿವಾಸಿಗಳ ಗೋಳನ್ನು ಕೇಳುವವರು ಇಲ್ಲದಂತಾಗಿದೆ.
ಶರಣು ಸೊಲಗಿ
ಮುಂಡರಗಿ:ಪಟ್ಟಣದ 17ನೇ ವಾರ್ಡಿನ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ರಸ್ತೆ ಅಭಿವೃದ್ಧಿ ಕಂಡಿಲ್ಲ, ಚರಂಡಿ ಇಲ್ಲದೇ ಅಲ್ಲಿನ ನಿವಾಸಿಗಳು ನಿತ್ಯ ಬಳಕೆ ಮಾಡುವ ಎಲ್ಲ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಪುರಸಭೆ ಕಣ್ಮುಚ್ಚಿ ಕುಳಿತಿದ್ದು, ಅಲ್ಲಿನ ನಿವಾಸಿಗಳ ಗೋಳನ್ನು ಕೇಳುವವರು ಇಲ್ಲದಂತಾಗಿದೆ.ಅಲ್ಲಿನ ನಿವಾಸಿಗಳು ಹೇಳುವ ಪ್ರಕಾರ 1996ರಲ್ಲಿ ಈ ಲೇಔಟ್ ನಿರ್ಮಾಣವಾಗಿದ್ದು, 2005ರಿಂದ ಇಲ್ಲಿ ಜನತೆ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಈಗಾಗಲೇ ಆ ಲೇಔಟಿನಲ್ಲಿ ಶೇ.75ರಷ್ಟು ಮನೆಗಳು ನಿರ್ಮಾಣವಾಗಿ ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ರಸ್ತೆ, ಚರಂಡಿ ನಿರ್ಮಾಣದ ಕುರಿತು ಪುರಸಭೆಗೆ ಕೇಳಿದರೆ ಲೇಔಟ್‌ನ ಮಾಲೀಕರನ್ನು ಕೇಳುವಂತೆ ಹೇಳುತ್ತಾರೆ. ಮಾಲೀಕರನ್ನು ಕೇಳಿದರೆ ನಾವು ನಿವೇಶನ ಅಭಿವೃದ್ದಿ ಪಡಿಸುವಾಗಲೇ ಪುರಸಭೆಗೆ ಅಭಿವೃದ್ಧಿ ಹಣ ಕಟ್ಟಿದ್ದೇವೆ ಎನ್ನುತ್ತಾರೆ. ನಾವು ಪ್ರತಿ ವರ್ಷ ಪುರಸಭೆಗೆ ತೆರಿಗೆ ಕಟ್ಟುತ್ತಲೇ ಇದ್ದೇವೆ. ಆದರೆ ಪುರಸಭೆ ಮಾತ್ರ ನಮಗೆ ಸರಿಯಾದ ರಸ್ತೆ, ಚರಂಡಿಯಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎನ್ನುವುದು ನಿವಾಸಿಗಳ ಆರೋಪವಾಗಿದೆ.ಈ ರಸ್ತೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇದ್ದು, ನಿತ್ಯವೂ ಈ ಕಾಲೇಜಿಗೆ ಸಾವಿರಾರು ಮಕ್ಕಳು ಕಲಿಯಲು ಬರುತ್ತಾರೆ. ಅವರೆಲ್ಲರೂ ರಸ್ತೆಯಲ್ಲಿ ಹರಿಯುವ ಚರಂಡಿ ನೀರನ್ನು ದಾಟಿಕೊಂಡೇ ಹೋಗಬೇಕು. ಅಲ್ಲದೇ ಕಾಲೇಜಿಗೂ ಸಹ ಕೊಳಕು ವಾಸನೆ ಬರುತ್ತಿದೆ. ಅಲ್ಲಿ ವಾಸಮಾಡುವವರು ನಿತ್ಯವೂ ಸೊಳ್ಳಗಳನ್ನು ಕಡಿಸಿಕೊಳ್ಳುತ್ತಾ ಗಬ್ಬು ವಾಸನೆ ಕುಡಿಯುತ್ತಲೇ ಬದುಕಬೇಕಾಗಿದೆ. ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ತಕ್ಷಣವೇ ಇತ್ತ ಭೇಟಿ ನೀಡಿ, ಇಲ್ಲಿನ ನಿವಾಸಿಗಳ ಮತ್ತು ಕಾಲೇಜಿನ ಮಕ್ಕಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವರೇ ಕಾದು ನೋಡಬೇಕಿದೆ. ಇಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸುವಂತೆ ಅನೇಕ ವರ್ಷಗಳಿಂದ ಪುರಸಭೆಗೆ ಒತ್ತಾಯಿಸುತ್ತಾ ಬಂದಿದ್ದೇವಾದರೂ ಯಾವುದೇ ಕಾರ್ಯ ಆಗಿಲ್ಲ. ಪುರಸಭೆಗೆ ಪ್ರತಿವರ್ಷ ನಗರೋತ್ಥಾನದಂತಹ ಅನೇಕ ಯೋಜನೆಗಳಿಗೆ ಕೋಟ್ಯಾಂತರ ಹಣ ಬರುತ್ತದೆ. ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಅಂತಹ ಹಣದಲ್ಲಿ ಇಲ್ಲಿನ ರಸ್ತೆ ಹಾಗೂ ಚರಂಡಿಗಳನ್ನು ಅಭಿವೃದ್ದಿ ಪಡಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ವಿವೇಕಾನಂದ ನಗರದ ನಿವಾಸ ಎಂ.ಎಸ್. ಪಾಟೀಲ ಹೇಳಿದರು.ಇಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣವಾಗಬೇಕು ಎನ್ನುವುದು ನಿವಾಸಿಗಳ ಬೇಡಿಕೆಯಾಗಿದ್ದು, ಈ ಬಾರಿ ನಗರೋತ್ಥಾನ ಕಾಮಗಾರಿಯಲ್ಲಿ ಮಾಡಿಸಲು ಯೋಜನೆ ರೂಪಿಸಲಾಗಿದೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳಿದರು.