ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನ ಉಳೇನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಶಾಲಾ ಶಿಕ್ಷಕ ರಾಜು ಆತ್ಮಕೂರ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಸೆ. 18ರಂದು ರಾತ್ರಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಸೆ. 10ರಂದು ಜಮಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಳೇನೂರು ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು. ಆಗ ಶಾಲೆಯ ಸಹ ಶಿಕ್ಷಕ ರಾಜು ಆತ್ಮಕೂರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಸಂಬಂಧ 1098 ಮಕ್ಕಳ ಸಹಾಯವಾಣಿಗೆ ಪಾಲಕರು ದೂರು ನೀಡಿದ್ದರು. ಸಹ ಶಿಕ್ಷಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಡಿಡಿಪಿಐ ಹಾಗೂ ಗಂಗಾವತಿ ಬಿಇಒ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಸತ್ಯಾಸತ್ಯತೆ ಪರಿಶೀಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಶಾಲೆಯ ಮುಖ್ಯಶಿಕ್ಷಕ ವಿಠ್ಠಲ್ ಜೀರಗಾಳ ದೂರು ನೀಡಿದ್ದರು.
ಹತ್ತಾರು ಅನುಮಾನ?:ಈ ಮೊದಲು ಘಟನೆ ನಡೆದೇ ಇಲ್ಲ ಎಂದು ಶಾಲಾ ಮುಖ್ಯಶಿಕ್ಷಕ ಕಾರಟಗಿ ಪೊಲೀಸ್ ಠಾಣೆಗೆ ಒಂದು ಪತ್ರ ನೀಡಿದ್ದರು. ಆ ಸಂದರ್ಭದಲ್ಲಿ ಸಲ್ಲಿಸಿರುವ ಸಮಜಾಯಿಸಿ ಪತ್ರದಲ್ಲಿ ಡಿಡಿಪಿಐ ಹಾಗೂ ಬಿಇಒ ನನಗೆ ಲೈಂಗಿಕ ಕಿರುಕುಳ ಸಂಬಂಧ ಸೆ. 14ರಂದು ವಾಟ್ಸ್ಆ್ಯಪ್ ಮೂಲಕ ಸಂದೇಶ ಹಾಗೂ ದೂರವಾಣಿ ಕರೆ ಮಾಡಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ಉಲ್ಲೇಖಿಸಿದ್ದಾರೆ. ಈಗ ಹೊಸದಾಗಿ ಪೋಕ್ಸೋ ಕಾಯ್ದೆಯಡಿ ಸಲ್ಲಿಕೆ ಮಾಡಿರುವ ದೂರಿನಲ್ಲಿ ಸೆ. 13ರಂದು ಡಿಡಿಪಿಐ ಹಾಗೂ ಬಿಇಒ ಸಂದೇಶ ಕಳುಹಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಅದಲ್ಲದೇ, ಘಟನೆ ಗಮನಕ್ಕೆ ಬಂದ ಕೂಡಲೇ ಪ್ರಕರಣ ದಾಖಲಿಸಿ, ಸತ್ಯಾಸತ್ಯತೆ ತಿಳಿಯಬೇಕಿದ್ದ ಶಿಕ್ಷಕರೇ ವಿಳಂಬ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮುಖ್ಯಶಿಕ್ಷಕ ಪ್ರಕರಣ ದಾಖಲಿಸದೇ ಇದ್ದರೆ ಸಂಬಂಧಪಟ್ಟ ಮೇಲಾಧಿಕಾರಿಗಳಾದರೂ ಕೇಸ್ ದಾಖಲಿಸಬಹುದಿತ್ತು. ಹಾಗಾಗಿ ಈ ಘಟನೆಯ ಸುತ್ತ ಮತ್ತೆ ಹತ್ತಾರು ಅನುಮಾನಗಳು ಕಾಡುತ್ತಿವೆ.
ವಿದ್ಯಾರ್ಥಿನಿಗೆ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿದ ಸಂಬಂಧ ಶಾಲಾ ಮುಖ್ಯಶಿಕ್ಷಕನಿಗೆ ಮೇಲಾಧಿಕಾರಿಗಳು ಕೇಸ್ ದಾಖಲಿಸಲು ನಿರ್ದೇಶನ ನೀಡಿದ್ದರು. ಇದಕ್ಕೆ ಶಾಲಾ ಮುಖ್ಯಶಿಕ್ಷಕ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಬಳಿಕ ಅದನ್ನು ಮುಚ್ವಿಹಾಕುವ ಹುನ್ನಾರ ನಡೆದಿತ್ತು. ಈ ಕುರಿತು "ಕನ್ನಡಪ್ರಭ " "ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ ಧರ್ಮದೇಟು " ಹಾಗೂ "ಪ್ರಕರಣ ಮುಚ್ಚಿಹಾಕಲು ಹುನ್ನಾರ " ಎಂಬ ಶೀಷಿಕೆಯಡಿ ಸುದ್ದಿ ಬಿತ್ತರಿಸಿತ್ತು. ಆಗ ಶಿಕ್ಷಣ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು. ಘಟನೆ ನಡೆದು ಬರೋಬ್ಬರಿ ಒಂದು ವಾರಗಳ ಬಳಿಕ ಈಗ ಪ್ರಕರಣ ದಾಖಲು ಮಾಡಲಾಗಿದೆ.