ಸಾರಾಂಶ
ಧಾರವಾಡ:
ಜೀವನದಲ್ಲಿ ಅನುಭವಿಸಿದ ಯಾತನೆ, ನೋವುಗಳಿಂದಲೇ ಉತ್ತಮ ಕಾದಂಬರಿಗಳು ಹೊರಹೊಮ್ಮಲು ಸಾಧ್ಯವಾಯಿತು. ನನಗಾದ ನೋವುಗಳನ್ನೇ ಸಾಹಿತ್ಯದ ರೂಪದಲ್ಲಿ ಹೊರ ಹೊಮ್ಮಿಸಿದೆ ಎಂದು ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಹೇಳಿದರು.ಇಲ್ಲಿನ ಕಲ್ಯಾಣನಗರದ ಡಾ. ರಾಜೇಶ್ವರಿ ಮಹೇಶ್ವರಯ್ಯ ನಿವಾಸದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಗುರುವಾರ ಏರ್ಪಡಿಸಿದ್ದ ಭೈರಪ್ಪನವರೊಂದಿಗೆ ಮಾತುಕತೆಯಲ್ಲಿ ಅವರು ಮಾತನಾಡಿದರು.
ನಾನು ಕಾದಂಬರಿ ರಚನೆ ಸಮಯದಲ್ಲಿ ಓದುಗರನ್ನು ಎಂದಿಗೂ ಗಮನಕ್ಕೆ ತೆಗೆದುಕೊಂಡಿಲ್ಲ. ವಿಷಯ, ಪಾತ್ರ, ಕ್ಷೇತ್ರದ ಆಳ, ಅದರಲ್ಲಿನ ಸಮಸ್ಯೆ ಬಗ್ಗೆ ಮಾತ್ರ ಗಮನಿಸುತ್ತೇನೆ. ಇದೇ ಕಾರಣಕ್ಕೆ ಉತ್ತಮ ಕಾದಂಬರಿ ರಚಿಸಲು ಸಾಧ್ಯವಾಗಿದೆ. ಈ ಎಲ್ಲ ಸಾಧನೆಗೂ ತತ್ವಶಾಸ್ತ್ರ ಅಧ್ಯಯನವೇ ಕಾರಣ. ತತ್ವಶಾಸ್ತ್ರ ಅಧ್ಯಯನದಿಂದ ಆಳವಾದ ಜ್ಞಾನ ಸಿಗಲಿದೆ ಎಂದರು.ತಾಯಿಯಿಂದ ಬಂದ ಪ್ರವೃತ್ತಿ:
ದ.ರಾ. ಬೇಂದ್ರೆ ಸರಳವಾಗಿ ಬರೆಯುತ್ತಿದ್ದರೂ ಅದರಲ್ಲಿ ಆಳವಾದ ವಿಷಯ ಅಡಗಿರುತ್ತಿತ್ತು. ಇದಕ್ಕೆ ಅವರ ಅಧ್ಯಯನವೇ ಕಾರಣ. ಆಳವಾದ ವಿಷಯಗಳೊಂದಿಗೆ ಕಾದಂಬರಿ ಬರೆಯಬೇಕು. ಅಧ್ಯಯನ ಜತೆಗೆ ಕಥೆ ಹೇಳುವುದು ಹುಟ್ಟಿನಿಂದಲೇ ಕರಗತವಾಗಿರಬೇಕು. ಇದರಿಂದ ಕಾದಂಬರಿಗಳು ಉತ್ತಮವಾಗಿ ಹೊರಬರಲಿವೆ. ನನಗೆ ಕಥೆ ಹೇಳುವ ಪ್ರವೃತ್ತಿ ತಾಯಿಯಿಂದ ಬಂದಿದೆ ಎಂದ ಅವರು, ಕಾರ್ಯ ಕ್ಷೇತ್ರ, ಶ್ರಮ, ಅಪಾಯ ಇದ್ದಾಗಲೇ ಅತ್ಯುತ್ತಮ ಕಾದಂಬರಿ ಸಿಗಲಿವೆ. ನಾನು ಪ್ರತಿ ಕಾದಂಬರಿಯನ್ನು ಹೊಸ ಹುರುಪಿನಿಂದ ಬರೆಯುತ್ತಿದ್ದೆ. ಕಾರ್ಯ ಕ್ಷೇತ್ರ, ವಿಷಯಗಳ ಸಮಗ್ರ ಮಾಹಿತಿ, ಪಾತ್ರಗಳ ಸರಿಯಾದ ತಿಳಿವಳಿಕೆ ಸೇರಿ ಎಲ್ಲ ವಿಷಯಗಳನ್ನು ಅರಿತ ಬಳಿಕವೇ ಬರೆಯಲು ಆರಂಭಿಸುತ್ತಿದ್ದೆ. ಹೀಗಾಗಿ ಓದಗರು ನನ್ನ ಕಾದಂಬರಿಗಳಿಗೆ ಮನ್ನಣೆ ನೀಡಿದ್ದಾರೆ ಎಂದು ಆಭಿಪ್ರಾಯಪಟ್ಟರು.ಲೇಖಕನಿಗೆ ಶಿಸ್ತು ಮುಖ್ಯ. ಅದರ ಜತೆಗೆ ಕ್ಷೇತ್ರ ಕಾರ್ಯ ಮಾಡಬೇಕು. ಆಯ್ಕೆ ಮಾಡಿದ ವಿಷಯ ವಸ್ತುಗಳಿಗೆ ಅನುಗುಣವಾಗಿ ಅಧ್ಯಯನ ನಡೆಸಬೇಕು. ನಾನು ಪರ್ವ ಬರೆಯುವಾಗ ಹಿಮಾಲಯದ ಬುಡಕಟ್ಟು ಜನರ ಜತೆಗೆ ಹೋಗಿ ವಾಸ ಮಾಡಿ ಮಾಹಿತಿ ಪಡೆದುಕೊಂಡಿದ್ದೆ. ಹೀಗೆ ಸುಮಾರು 5 ವರ್ಷಗಳ ಕಾಲ ಅಧ್ಯಯನ ನಡೆಸಿದ ಬಳಿಕ ಬರೆದಿದ್ದೇನೆ ಎಂದರು.
ಸಾಹಿತ್ಯಕ್ಕೇ ನನ್ನ ಜೀವನ ಮೀಸಲು:ನಾನು ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟುಮಟ್ಟಕ್ಕೆ ಸಾಧನೆ ಮಾಡಲು ಓದುಗರು, ನಾನು ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಗಳ ಸಹಕಾರವೂ ಮುಖ್ಯವಾಗಿದೆ. ಕಾದಂಬರಿ ಬರೆಯಲು ದೇಶ, ವಿದೇಶ, ಹಳ್ಳಿಗಳನ್ನು ಸುತ್ತವುದು ಹೆಚ್ಚಾಗಿತ್ತು. ನನಗೆ ಸಾಕಷ್ಟು ರಾಯಲ್ಟಿ ಬರುತ್ತದೆ. ಅದನ್ನೆಲ್ಲ ಸಾಹಿತ್ಯಕ್ಕೇ ಖರ್ಚು ಮಾಡುತ್ತಿದ್ದೇನೆ. ಒಂದು ರೀತಿಯಲ್ಲಿ ನನ್ನ ಜೀವನವನ್ನು ಸಾಹಿತ್ಯಕ್ಕೇ ಮೀಸಲಿಟ್ಟಿದ್ದೇನೆ ಎಂದ ಎಸ್.ಎಲ್. ಭೈರಪ್ಪ, ಪ್ರವಾಸ ಕಥನವನ್ನು ಯಾರು ಬೇಕಾದರೂ ಬರೆಯಬಹುದು. ಹೀಗಾಗಿ ನಾನು ಅದಕ್ಕೆ ಅಷ್ಟು ಆಸಕ್ತಿ ವಹಿಸಿಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ಭೈರಪ್ಪ ಅವರ ಕೃತಿಗಳು ನನ್ನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರಿವೆ. ಕರ್ನಾಟಕ ಸೇರಿ ದೇಶ, ವಿದೇಶಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅವರು ಜನರ ಹೃದಯದಲ್ಲಿ ಮನೆ ಮಾಡಿದ್ದಾರೆ. ಪ್ರೀತಿ, ಅಂತಃಕರಣ ಹೊಂದಿದ ವ್ಯಕ್ತಿ. ನನ್ನ 2 ಕೃತಿಗಳನ್ನು ಅವರ ಮನೆಯಲ್ಲಿ ಬಿಡುಗಡೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.ಪ್ರೊ. ಮಾಲತಿ ಪಟ್ಟಣಶೆಟ್ಟಿ, ಮಂಗಲಾ ಭಟ್, ಮೇಘಾ ಹುಕ್ಕೇರಿ, ಡಾ. ಉಷಾ ಗದ್ದಗಿಮಠ, ಸುನೀತಾ ಮೂರಶಿಳ್ಳಿ, ಸರಸ್ವತಿ ಭೋಸ್ಲೆ, ಸುಜಾತಾ ಹಡಗಲಿ, ಲಲಿತಾ ಪಾಟೀಲ, ಶಾಲಿನಿ ರುದ್ರಮುನಿ, ಪುಷ್ಪಾ ಹಾಲಭಾವಿ, ಜಿ.ಎಂ. ಹೆಗಡೆ, ಶಶಿಧರ ನರೇಂದ್ರ, ಎಂ.ಎ. ಸುಬ್ರಹ್ಮಣ್ಯ ಇದ್ದರು.ನಾನೆಂದೂ ಮದ್ಯ ಸೇವಿಸಿಲ್ಲ:
ಇಂದು ಅನೇಕರು ಮದ್ಯ ಸೇವಿಸುತ್ತಾರೆ. ಆದರೆ, ನನಗೆ ಮದ್ಯ ಸೇವನೆಯ ಹವ್ಯಾಸವಿಲ್ಲ. ಒಂದು ದಿನವೂ ಮದ್ಯ ಸೇವಿಸಿಲ್ಲ. ಈ ಹವ್ಯಾಸದಿಂದ ಏಕಾಗ್ರತೆ ಸಾಧಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ. ರಾತ್ರಿ ಕುಡಿದರೆ ಬೆಳಗ್ಗೆ ಬೇಗ ಏಳುವುದು ಅಸಾಧ್ಯ. ಇನ್ನು, ಮತ್ತೆ ಸಂಜೆ ಕುಡಿತ ತನ್ನತ್ತ ಎಳೆಯುತ್ತದೆ. ಇದರಿಂದ ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ಮದ್ಯಪಾನದಿಂದ ದೂರವಿದ್ದೇನೆ. ಲೇಖಕರು ಜೀವನದಲ್ಲಿ ತ್ಯಾಗ ಮಾಡಬೇಕು. ಅಂದಾಗಲೇ ಉತ್ತಮ ಕೃತಿಗಳು ಹೊರಬರಲು ಸಾಧ್ಯ ಎಂದು ಡಾ. ಎಸ್.ಎಲ್. ಭೈರಪ್ಪ ಯುವ ಲೇಖಕರಿಗೆ ತಮ್ಮ ಬರವಣಿಗೆಯ ಗುಟ್ಟೊಂದನ್ನು ಹೇಳಿದರು.