ಹುಬ್ಬಳ್ಳಿ ಕೆಂಪಗೆರೆಗೆ ಹರಿದು ಬರಲಿದ್ದಾಳೆ ಶಾಲ್ಮಲೆ!

| Published : Sep 10 2025, 01:03 AM IST

ಹುಬ್ಬಳ್ಳಿ ಕೆಂಪಗೆರೆಗೆ ಹರಿದು ಬರಲಿದ್ದಾಳೆ ಶಾಲ್ಮಲೆ!
Share this Article
  • FB
  • TW
  • Linkdin
  • Email

ಸಾರಾಂಶ

ಬೇಡ್ತಿ ನದಿ ರಭಸವಾಗಿ ಹರಿದು ಸಾಗಿದರೆ, ಶಾಲ್ಮಲಾ ನದಿ ಅಂತರ್ಗಾಮಿಯಂತೆ ತನ್ನ ಇರಿವನ್ನು ಯಾರಿಗೂ ತಿಳಿಸದಂತೆ ಹರಿದು ಮುಂದೆ ಸಾಗುವುದು ವಿಶೇಷ. ಇದೀಗ ಬೇಡ್ತಿ ನದಿಯಾಗುವ ಮೊದಲೇ ಈ ನದಿಯ ನೀರನ್ನು ಪೈಪ್‌ಲೈನ್‌ ಮೂಲಕ ಕೆರೆಗೆ ತುಂಬಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಗುಪ್ತಗಾಮಿನಿಯಾಗಿ ಹರಿಯುವ ಶಾಲ್ಮಲೆ ಈಗ ಹುಬ್ಬಳ್ಳಿಯ ಕೆಂಪಗೆರೆಗೆ ಹರಿದು ಬರಲು ಸನ್ನದ್ಧಳಾಗಿದ್ದಾಳೆ!

ಈ ನದಿ ಬರೀ ಕಾವ್ಯದಲ್ಲಿ ಸದ್ದು ಮಾಡಿದ್ದೇ ಹೆಚ್ಚು. ಹಾಗಾಗಿ ಧಾರವಾಡ ಜಿಲ್ಲೆಯಲ್ಲೊಂದು ನದಿ ಇದೆ, ಅದರ ಉಗಮ ಸ್ಥಳ ಧಾರವಾಡ ಎಂಬುದು ಜಿಲ್ಲೆಯ ಎಷ್ಟೋ ಜನರಿಗೆ ಗೊತ್ತಿಲ್ಲ.

ಧಾರವಾಡದ ಸೋಮೇಶ್ವರನ ಸನ್ನಿಧಿಯಲ್ಲಿ ಇದು ಉಗಮವಾಗುತ್ತದೆ. ಅಲ್ಲಿಂದ ಹುಬ್ಬಳ್ಳಿ ತಾಲೂಕಿನ ಮಾವನೂರು ಮಾರ್ಗವಾಗಿ ಕಲಘಟಗಿ ಅರಣ್ಯದಲ್ಲಿ ಹರಿದು ಮುಂದೆ ಸಾಗುತ್ತದೆ. ಬೇಡ್ತಿ ನದಿಯಾಗಿ ಪರಿವರ್ತನೆಯಾಗುತ್ತದೆ.

ಶಾಲ್ಮಲಾ ನದಿಯಿಂದ ನೀರೆತ್ತಿ ಕೆಂಪಗೆರೆ ಭರ್ತಿ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ.

ಪೈಪ್‌ಲೈನ್‌ ಮೂಲಕ ನೀರು:

ಬೇಡ್ತಿ ನದಿ ರಭಸವಾಗಿ ಹರಿದು ಸಾಗಿದರೆ, ಶಾಲ್ಮಲಾ ನದಿ ಅಂತರ್ಗಾಮಿಯಂತೆ ತನ್ನ ಇರಿವನ್ನು ಯಾರಿಗೂ ತಿಳಿಸದಂತೆ ಹರಿದು ಮುಂದೆ ಸಾಗುವುದು ವಿಶೇಷ. ಇದೀಗ ಬೇಡ್ತಿ ನದಿಯಾಗುವ ಮೊದಲೇ ಈ ನದಿಯ ನೀರನ್ನು ಪೈಪ್‌ಲೈನ್‌ ಮೂಲಕ ಕೆರೆಗೆ ತುಂಬಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ.

ಹುಬ್ಬಳ್ಳಿ ನಗರದ ಪೂರ್ವಕ್ಷೇತ್ರದಲ್ಲಿನ ಬರೋಬ್ಬರಿ 13 ಎಕರೆ ಪ್ರದೇಶದ ದೊಡ್ಡ ಕೆರೆ ಇದಾಗಿದೆ. ಮೊದಲು ಉಳಿದ ಕೆರೆಗಳಂತೆ ಇದರಲ್ಲಿ ಸದಾಕಾಲ ನೀರು ಇರುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲೂ ಅಂತರ್ಜಲ ಮಟ್ಟ ಹೇರಳವಾಗಿ ಇರುತ್ತಿತ್ತು.

5 ಚದುರ ಕಿಮೀ ಇದರ ಜಲಾನಯನ ಪ್ರದೇಶವಾಗಿದೆ. ಈ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಸ್ಮಾರ್ಟ್‌ಸಿಟಿ, ಹುಡಾ ಹಾಗೂ ಮಹಾನಗರ ಪಾಲಿಕೆಗಳು ಅಭಿವೃದ್ಧಿಪಡಿಸಿವೆ. ಕೆರೆಗೆ ನೀರು ಬರುವ ಮಾರ್ಗಗಳೆಲ್ಲ ಬಂದಾಗಿವೆ. ಮೊದಲು ಚರಂಡಿ ನೀರು ಬರುತ್ತಿತ್ತು. ಚರಂಡಿ ಎಂಬ ಕಾರಣಕ್ಕೆ ಆ ಮೂಲಗಳನ್ನು ಮುಚ್ಚಲಾಗಿದೆ. ಹೀಗಾಗಿ ಇದೀಗ ಕೆರೆಯಲ್ಲೇ ನೀರೇ ಇಲ್ಲದಂತಾಗಿದೆ.

ವಿನೂತನ ಯೋಜನೆ: ಸರ್ಕಾರ ಕರ್ನಾಟಕ ನೀರಾವರಿ ನಿಗಮಕ್ಕೆ ಜವಾಬ್ದಾರಿ ವಹಿಸಿದೆ. ನೀರಾವರಿ ನಿಗಮವೂ ಸಮೀಪದ ಹಳ್ಳದ ಮೂಲಕ ಹರಿದು ಪಶ್ಚಿಮ ಘಟ್ಟ ಸೇರುವ ಶಾಲ್ಮಲಾ ನದಿಯೇ ಇದಕ್ಕೆ ನೀರಿನ ಮೂಲ, ಇಲ್ಲಿಂದ ಕೆರೆ ನೀರು ತುಂಬಿಸಬಹುದು ಎಂದು ಯೋಜನೆ ಸಿದ್ಧಪಡಿಸಿತು.

ಹುಬ್ಬಳ್ಳಿ ತಾಲೂಕಿನ ಮಾವನೂರು ಬಳಿ ಹಳ್ಳದ ಮೂಲಕ ಶಾಲ್ಮಲಾ ನದಿ ಹರಿದು ಹೋಗುತ್ತದೆ. ಅಲ್ಲಿಂದ ಬರೋಬ್ಬರಿ 6 ಕಿಮೀ ದೂರದ ಕೆರೆಗೆ ಪೈಪ್‌ಲೈನ್‌ ಮೂಲಕ ಮಳೆಗಾಲದಲ್ಲಿ ನೀರು ತುಂಬಿಸುವ ₹10 ಕೋಟಿಗಳ ಯೋಜನೆ ಸಿದ್ಧಪಡಿಸಿದೆ. ನಿಗಮದ ಮಂಡಳಿ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಇದೀಗ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಗುವುದು ಬಾಕಿಯಿದೆ. ಅದು ಶೀಘ್ರದಲ್ಲೇ ಸಿಗುವ ಸಾಧ್ಯತೆ ಇದೆ.

ಇದೇ ಮೊದಲು: ಕೆಂಪಗೆರೆಗೆ ಶಾಲ್ಮಲಾ ನದಿಯಿಂದ ನೀರು ಹರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಹುಬ್ಬಳ್ಳಿ ತಾಲೂಕಿನ ಮಾವನೂರನಿಂದ ಕೆಂಪಗೆರೆಗೆ ಶಾಲ್ಮಲಾ ನದಿಯಿಂದ ನೀರು ತುಂಬಿಸುವ ಯೋಜನೆ ಸಿದ್ಧ ಪಡಿಸಲಾಗಿದೆ. ₹10 ಕೋಟಿಗಳ ಯೋಜನೆ ಇದು. ಸರ್ಕಾರದ ಆಡಳಿತಾತ್ಮಕ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆತ ಬಳಿಕ ಕೆಲಸ ಶುರುವಾಗಲಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಜಾಲಗಾರ ಹೇಳಿದರು.