ಸಮಾಜಕ್ಕೆ ಶಂಕರಾಚಾರ್ಯರರ ಕೊಡುಗೆ ಅಪಾರ

| Published : May 06 2025, 12:15 AM IST

ಸಾರಾಂಶ

ಅದ್ವೈತ ಸಿದ್ಧಾಂತದ ಮೂಲಕ ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸ ಮಾಡಿದ ಶಂಕರಾಚಾರ್ಯರು, ಆದ್ಯ ಗುರುವಾಗಿ ಪೂಜಿತರಾದರು

ಹಾವೇರಿ: ಪ್ರಾಚೀನ ಭಾರತೀಯ ಉಪನಿಷತ್ತುಗಳ ತತ್ವಗಳು ಮತ್ತು ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಆದಿ ಶಂಕರಾಚಾರ್ಯರ ಕೊಡುಗೆ ಅಪಾರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ತಿಳಿಸಿದರು.

ನಗರದ ಶ್ರೀ ರಾಮಮಂದಿರದ ಸೀತಾ ರಾಮ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ಜರುಗಿದ ಶಂಕರಾಚಾರ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು. ಅದ್ವೈತ ಸಿದ್ಧಾಂತದ ಮೂಲಕ ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸ ಮಾಡಿದ ಶಂಕರಾಚಾರ್ಯರು, ಆದ್ಯ ಗುರುವಾಗಿ ಪೂಜಿತರಾದರು ಎಂದರು.

ರಾಣಿಬೆನ್ನೂರಿನ ದೇವಿಕಾ ಪಿಯು ಕಾಲೇಜಿನ ಉಪನ್ಯಾಸಕಿ ಸಂಗೀತಾ ದೇಸಾಯಿ ಮಾತನಾಡಿ, ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರು ಮತ್ತು ತತ್ವಜ್ಞಾನಿಗಳಲ್ಲಿ ಆದಿ ಶಂಕರಾಚಾರ್ಯರು ಒಬ್ಬರು. ಅದ್ವೈತ ವೇದಾಂತದ ಅಡಿಪಾಯವನ್ನು ಹಾಕಿದ ಮತ್ತು ಸಾಂಸ್ಕೃತಿಕ ಮತ್ತು ಧಾರ್ಮಿಕ ಅವನತಿಯ ಸಮಯದಲ್ಲಿ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದರು.

ಕೇರಳದ ಒಂದು ಸಣ್ಣ ಹಳ್ಳಿಯಾದ ಕಾಲಡಿಯಲ್ಲಿ ಜನಿಸಿದ ಆದಿ ಶಂಕರಾಚಾರ್ಯರು, ಭಾರತೀಯ ತತ್ವಶಾಸ್ತ್ರದ ಶ್ರೇಷ್ಠ ವ್ಯಕ್ತಿಯಲ್ಲಿ ಒಬ್ಬರೆಂದು ಹೇಳಲಾಗುತ್ತದೆ. ಶಂಕರಾಚಾರ್ಯರು ಮೂರು ಸಲ ಕಾಲ್ನಡಿಗೆಯಲ್ಲಿ ದೇಶವನ್ನು ಸುತ್ತಿದರು. ಸನಾತನ ಧರ್ಮ ರಕ್ಷಣೆಗಾಗಿ ಅವರು ಮಾಡಿದ ಮಹಾನ್ ಕಾರ್ಯ ಇಂದಿಗೂ ಜಾಗೃತವಾಗಿದೆ ಹಾಗೂ ಸಚೇತನವಾಗಿದೆ. ಸಹಸ್ರ ಸಹಸ್ರ ವರ್ಷಗಳ ವರ್ಷಗಳ ನಂತರವೂ ಶಂಕರಾಚಾರ್ಯರು ಮಾಡಿದ ಕಾರ್ಯ ಶಾಶ್ವತವಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಜಿಲ್ಲಾ ಅಧ್ಯಕ್ಷ ವಸಂತ ಮೊಕ್ತಾಲಿ, ಎಕೆಬಿಎಂಎಸ್ ಹಾವೇರಿ ಜಿಲ್ಲಾ ಪ್ರತಿನಿಧಿ ದತ್ತಾತ್ರೇಯ ನಾಡಿಗೇರ, ಶ್ರೀರಾಮ ಮಂದಿರದ ಧರ್ಮದರ್ಶಿ ರಮೇಶನಾಯಕ್ ಬಾದಾಮಿ, ಹನುಮಂತ ನಾಯಕ್ ಬಾದಾಮಿ, ರಮೇಶ ಕಡಕೋಳ, ಉದಯ ಕುಲಕರ್ಣಿ, ರಮೇಶ ಕುಲಕರ್ಣಿ, ಉಮೇಶ ಕುಲಕರ್ಣಿ ಇತರರು ಉಪಸ್ಥಿತರಿದ್ದರು. ದತ್ತಾತ್ರೇಯ ಕಳ್ಳಿಹಾಳ ಸ್ವಾಗತಿಸಿದರು. ಶ್ರೀನಿವಾಸ ಭಾವಿಕಟ್ಟಿ ನಿರೂಪಿಸಿದರು. ಪಿ.ಆರ್. ಭಾಗ್ಯಲಕ್ಷ್ಮಿ ವಂದಿಸಿದರು.

ಕಾರ್ಯಕ್ರಮಕ್ಕೂ ಮೊದಲು ಶಂಕರ ಭಾರತಿ ಮಠದಿಂದ ಆರಂಭಗೊಂಡ ಶಂಕರಾಚಾರ್ಯರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ರಾಮ ಮಂದಿರ ತಲುಪಿತು. ಇದರಲ್ಲಿ ನೂರಾರು ಜನರು ಸಂಭ್ರಮದಿಂದ ಪಾಲ್ಗೊಂಡಿದ್ದರು.