ಹಾವೇರಿ: ಅಲ್ಪವಯಸ್ಸಿನಲ್ಲಿಯೇ ವೇದಾಂತ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿ ಅದ್ವೈತ ತತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ದಾರ್ಶನಿಕರು ಜಗದ್ಗುರು ಆದಿ ಶಂಕರಾಚಾರ್ಯರು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಹೇಳಿದರು.
ನಗರದ ರಾಮಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಂಕರಾಚಾರ್ಯರ ತತ್ವಗಳು ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಹಾಗೂ ಧಾರ್ಮಿಕ ಸಹಿಷ್ಣುತೆಯನ್ನು ಬೆಳೆಸುವಲ್ಲಿ ಇಂದಿಗೂ ಪ್ರಸ್ತುತವಾಗಿವೆ. ಅವರ ಸಂದೇಶಗಳು ಸಮಾಜದ ಸಮಾನತೆಗೆ ಆದರ್ಶವಾಗಿವೆ ಎಂದು ಹೇಳಿದರು.ಚಿಕ್ಕಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಡಾ. ಸೀತಾ ಧೀರೇಂದ್ರಾಚಾರ ಕಡಕೋಳ ಅವರು ವಿಶೇಷ ಉಪನ್ಯಾಸ ನೀಡಿ, ಜಗದ್ಗುರು ಶಂಕರಾಚಾರ್ಯರ ವಿಚಾರಧಾರೆಗಳು ಮಾನವಕುಲಕ್ಕೆ ದಾರಿದೀಪವಾಗಿವೆ. ಭಾರತದೆಲ್ಲೆಡೆ ಪಾದಯಾತ್ರೆ ನಡೆಸಿ ತಮ್ಮ ತತ್ವಗಳನ್ನು ಪ್ರಸಾರ ಮಾಡಿದ ಅವರು ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿ, ಸಂಸ್ಕೃತಿ ಹಾಗೂ ಧರ್ಮದ ಏಕತೆಯನ್ನು ಬಲಪಡಿಸಿದರು ಎಂದು ಹೇಳಿದರು.
ಅವರು ರಚಿಸಿದ ಭಜಗೋವಿಂದಂ, ಸೌಂದರ್ಯಲಹರಿ, ವಿವೇಕಚೂಡಾಮಣಿ ಸೇರಿದಂತೆ ಅನೇಕ ಕೃತಿಗಳು ಇಂದಿಗೂ ಜನರಿಗೆ ಜ್ಞಾನದ ಮಾರ್ಗದರ್ಶನ ನೀಡುತ್ತಿವೆ. ಶಂಕರಾಚಾರ್ಯರು ಮಹಾನ್ ಚಿಂತಕರಾಗಿದ್ದು, ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದವರು ಎಂದು ಹೇಳಿದರು.ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ದತ್ತಣ್ಣ ಮಾತನಾಡಿ, ಶಂಕರಾಚಾರ್ಯರ ತತ್ವಗಳು ಜೀವನದಲ್ಲಿ ಶಾಂತಿ, ತಾಳ್ಮೆ ಮತ್ತು ಸದ್ಭಾವನೆ ಬೆಳೆಸಲು ಪೂರಕವಾಗಿವೆ. ಇಂದಿನ ಸಮಾಜದಲ್ಲಿ ಕಂಡುಬರುವ ಅಸಮಾನತೆ, ದ್ವೇಷ ಮತ್ತು ಅಹಿತಕರ ಘಟನೆಗಳನ್ನು ನಿವಾರಿಸಲು ಅವರ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮಕ್ಕೂ ಮುನ್ನ ಚಂದ್ರಾಪಟ್ಟಣ ಓಣಿಯ ಶಂಕರಭಾರತಿ ಮಠದಿಂದ ಶ್ರೀರಾಮ ಮಂದಿರದ ವರೆಗೆ ಶಂಕರಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಬ್ರಾಹ್ಮಣ ಸಮಾಜದ ಅಧ್ಯಕ್ಷ ವಸಂತ ಆರ್. ಮೊಕ್ತಾಲಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಸುರೇಶ್ ಡಿ. ಕಡಕೋಳ ಉಪಸ್ಥಿತರಿದ್ದರು.