ಸಾರಾಂಶ
ಶೃಂಗೇರಿ ನವರಾತ್ರಿಯಲ್ಲಿ ಅಧಿದೇವತೆಗೆ ವಿಶೇಷ ಪೂಜೆ । ಜನಾಕರ್ಷಕ ಜಗದ್ಗುರುಗಳ ದಸರಾ ದರ್ಬಾರ್,
ಕನ್ನಡಪ್ರಭ ವಾರ್ತೆ, ಶೃಂಗೇರಿದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನರಾತ್ರಿ ಮಹೋತ್ಸವದಲ್ಲಿ ಎರಡನೇ ದಿನವಾದ ಮಂಗಳವಾರ ಅಧಿದೇವತೆ ಶ್ರೀ ಶಾರದಾಂಬೆಗೆ ಬ್ರಾಹ್ಮಿ ಅಲಂಕಾರ ಮಾಡಲಾಗಿತ್ತು.
ಶಾರದೆ ಬಿಳಿ ವಸ್ತ್ರ ಧರಿಸಿ ಕೈಯಲ್ಲಿ ಅಕ್ಷರ ಮಾಲೆ, ಪುಸ್ತಕ ಪಾಶ ಮತ್ತು ಚಿನ್ಮುದ್ರೆಗಳನ್ನು ಧರಸಿ ಹಂಸವಾಹನವನ್ನೇರಿ ಬ್ರಹ್ಮನ ಶಕ್ತಿಯಾಗಿ ಬ್ರಾಹ್ಮಿ ಸ್ವರೂಪಿಣಿಯಾಗಿ ಭಕ್ತರನ್ನು ಅನುಗ್ರಹಿಸುತ್ತಿರುವ ಅಲಂಕಾರ ನಯನ ಮನೋಹರವಾಗಿತ್ತು.ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ,ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿ ಶಾರದಾಂಬೆ ಸನ್ನಿದಿಯಲ್ಲಿ ನವರಾತ್ರಿಯ ವಿಶೇಷ ಪೂಜೆ , ಮಹಾಮಂಗಳಾರತಿ ನೆರವೇರಿಸಿದರು. ಶ್ರೀ ಶಂಕರ ಭಗವತ್ಪಾದಾಚಾರ್ಯ,ಶ್ರೀ ತೋರಣಗಣಪತಿ ಸಹಿತ ಶ್ರೀ ಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳಿಗೆ ತೆರಳಿ ನವರಾತ್ರಿ ಪೂಜೆ ಸಲ್ಲಿಸಿದರು. ಚಂದ್ರಮೌಳೀಶ್ವರ ಪೂಜೆ ಸಲ್ಲಿಸಿದರು.
ಜನಾಕರ್ಷಕ ದರ್ಬಾರ್-ಶ್ರೀ ಮಠದ ಸಂಪ್ರದಾಯದಂತೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನವರಾತ್ರಿಯ ದರ್ಬಾರ್ ಸೋಮವಾರದಿಂದ ಆರಂಭಗೊಂಡಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ದರ್ಬಾರ್ ನಲ್ಲಿ ನಡೆಸಿಕೊಟ್ಟರು.ಶೃಂಗೇರಿ ದಸರಾ ದರ್ಬಾರ್ ಗೂ ಮೈಸೂರಿನ ದರ್ಬಾರ್ ಗೂ ಸಾಕಷ್ಟು ಸಾಮ್ಯತೆಯಿದೆ. ವಿಜಯನಗರ ಅರಸರ ಕಾಲದಲ್ಲಿ ನಡೆಯುತ್ತಿದ್ದ ಸಂಪ್ರದಾಯಗಳು ಶೃಂಗೇರಿಯಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ. ಈ ಪರಂಪರೆಯನ್ನೇ ಮೈಸೂರು ಅರಸರು ಅನುಸರಿಸಿಕೊಂಡು ಹೋಗುತ್ತಿದ್ದಾರೆ ಎನ್ನಲಾಗಿದೆ. ಶೃಂಗೇರಿ, ಮೈಸೂರಿನ ದಸರಾ ದರ್ಬಾರ್ ಉತ್ಸವಗಳು ಜನರನ್ನು ಇಂದಿಗೂ ಆಕರ್ಷಿಸುವುದು ಒಂದು ವಿಶೇಷ.
1885 ರಲ್ಲಿ ಮೈಸೂರು ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಗದ್ಗುರು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಒಡೆಯರ್ ಗೆ ಶಾರದಾಂಬೆ ಸನ್ನಿದಿಯ ರತ್ನಖಚಿತ ಕಿರೀಟ ಅನುಗ್ರಹಿಸಿದ್ದರು. ಈ ಕಿರೀಟವನ್ನು ಇಂದಿಗೂ ಮೈಸೂರು ಅರಸರ ಖಾಸಾ ದರ್ಬಾರ್ ನಲ್ಲಿ ಸಿಂಹಾಸನದ ಪಕ್ಕದಲ್ಲಿಟ್ಟು ರಾಜ ವಂಶಸ್ಥರು ಪೂಜೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ಶೃಂಗೇರಿಯಲ್ಲಿ ನವರಾತ್ರಿ ಮುಗಿಯುವವರೆಗೂ ಜಗದ್ಗುರುಗಳ ದರ್ಬಾರ್ ನಡೆಯುತ್ತದೆ. ರಾಜಬೀದಿ ಉತ್ಸವದಲ್ಲಿ ಕೂತಗೋಡು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಮಹೋತ್ಸವದಲ್ಲಿ ಶೃಂಗೇರಿ ಸಿಸ್ಟರ್ಸ್ ತಂಡದವರಿಂದ ಭಕ್ತಿ ಸಂಗೀತ ನಡೆಯಲಿದೆ.ರಾಜಬೀದಿ ಉತ್ಸವದಲ್ಲಿ ಮೆಣಸೆ ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು,ಭಜನಾ ತಂಡಗಳು ಪಾಲ್ಗೊಂಡಿದ್ದವು.ವಾದ್ಯ ಮೇಳ,ವಿವಿಧ ಸ್ತಬ್ದಚಿತ್ರಗಳು,ವಿಪ್ರೋತ್ತಮರ ವೇದಘೋಷಗಳು,ಭಜನೆಗಳು,ಭಕ್ತರ ಜೈಕಾರ ಘೋಷಗಳು ರಾಜಬೀದಿ ಉತ್ಸವಕ್ಕೆ ವಿಶೇಷ ಮೆರಗು ನೀಡಿತು.ಶ್ರೀ ಮಠದ ಆವರಣದ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಾಂಸ್ಕೃತಿಕ ಮಹೋತ್ಸವದಲ್ಲಿ ಚೈನ್ನೈನ ವಿದುಷಿ ಸವಿತಾ ಶ್ರೀರಾಮ್ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಿತು. ಬುಧವಾರ ಶಾರದೆಗೆ ವೃಷಭ ವಾಹಿನಿಅಲಂಕಾರ ನಡೆಯಲಿದೆ.
23 ಶ್ರೀ ಚಿತ್ರ 1-ಶೃಂಗೇರಿ ಶಾರದೆ ಮಂಗಳವಾರ ಬ್ರಾಹ್ಮಿ ಸ್ವರೂಪಿಣಿಯಾಗಿ ಕಂಗೊಳಿಸಿದಳು.
23 ಶ್ರೀ ಚಿತ್ರ 2-ಶೃಂಗೇರಿ ನವರಾತ್ರಿಯಲ್ಲಿ ದರ್ಬಾರ್ ನಲ್ಲಿ ಕುಳಿತಿರುವ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು.