ಸಾರಾಂಶ
ಜ.೧೫ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ
ಕನ್ನಡಪ್ರಭ ವಾರ್ತೆ ಹಾವೇರಿತಾಲೂಕಿನ ನರಸೀಪುರದ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ ಗುರುಪೀಠದಲ್ಲಿ ಜ.೧೪ ಮತ್ತು ೧೫ರಂದು ಶರಣ ಸಂಸ್ಕೃತಿ ಉತ್ಸವ, ವಚನ ಗ್ರಂಥ ಮಹಾರಥೋತ್ಸವ, ಅಂಬಿಗರಚೌಡಯ್ಯನವರ ೯೦೪ನೇ ಜಯಂತ್ಯುತ್ಸವ ಹಾಗೂ ಲಿಂ.ಶಾಂತಮುನಿ ಸ್ವಾಮಿಗಳ ೮ನೇ ಸ್ಮರಣೋತ್ಸವ ಆಯೋಜಿಸಲಾಗಿದ್ದು, ಜ.೧೫ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಗುರುಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಗುರುಪೀಠದಲ್ಲಿ ಈ ಬಾರಿ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದೆ. ಜ.೧೪ರಂದು ಬೆಳಗ್ಗೆ ೬ಗಂಟೆಗೆ ಸುಮಂಗಲೆಯರಿಂದ ತೊಟ್ಟಿಲೋತ್ಸವ, ಬೆಳಗ್ಗೆ ೮ ಗಂಟೆಗೆ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ ಗದ್ದುಗೆಗೆ ಪೂಜೆ ನಡೆಯಲಿದ್ದು, ಬೆಳಗ್ಗೆ ೧೧ ಗಂಟೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮಧ್ಯಾಹ್ನ ೧.೩೦ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ ೫.೩೦ಕ್ಕೆ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಮಹೋತ್ಸವದ ಕಾರ್ಯಕ್ರಮವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಲಿದ್ದಾರೆ. ಸೀಮಿಕೇರಿ ರಾಮಾರೂಢಮಠದ ಪರಮರಾಮಾರೂಢ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು, ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ ೫.೩೦ಕ್ಕೆ ನಿಜಶರಣ ಅಂಬಿಗರಚೌಡಯ್ಯನವರ ಸಾಂಸ್ಕೃತಿಕ ಉತ್ಸವ, ರಸಮಂಜರಿ ಕಾರ್ಯಕ್ರಮ ಹಾಗೂ ರಕ್ತಕ್ರಾಂತಿ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದರು.ಜ.೧೫ರಂದು ಬೆಳಗ್ಗೆ ೮ ಗಂಟೆಗೆ ಧರ್ಮ ಧ್ವಜಾರೋಹಣವನ್ನು ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮ್ಮಕನೂರ ನೆರವೇರಿಸಲಿದ್ದು, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗ್ಗೆ ೮.೩೦ಕ್ಕೆ ಸಾಮೂಹಿಕ ಸರಳ ವಿವಾಹ ಮಹೋತ್ಸವ, ೧೦ ಗಂಟೆಗೆ ಧರ್ಮಸಭೆ ನಡೆಯಲಿದೆ. ಬೆಳಗ್ಗೆ ೧೧.೩೦ಕ್ಕೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ೬ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ಅಂಬಿಗರ ಚೌಡಯ್ಯನವರ ೯೦೪ನೇ ಜಯಂತ್ಯುತ್ಸವ ಜರುಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ. ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಚಿವರಾದ ಸತೀಶ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಶಿವರಾಜ ತಂಗಡಗಿ, ಮಂಕಾಳ ವೈದ್ಯ ಸೇರಿದಂತೆ ವಿವಿಧ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದು, ನಾಡಿನ ವಿವಿಧ ಮಠಾಧೀಶರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ ೫ಗಂಟೆಗೆ ವಚನಗ್ರಂಥ ಮಹಾರಥೋತ್ಸವ ನಾಡಿನ ಭಕ್ತಾದಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಲಿದೆ ಎಂದರು.
ಗಂಗಾಮತ ಸಮಾಜದ ಪ್ರಮುಖರಾದ ಬಸವರಾಜ ಸಪ್ಪನಗೋಳ, ಮಂಜುನಾಥ ಭೋವಿ, ಪ್ರವೀಣ ವಡ್ನಿಕೊಪ್ಪ, ಶಂಕರ ಸುತಾರ, ಬಸವರಾಜ ಕಳಸೂರ, ಎಚ್.ಎನ್. ದಂಡಿನ, ಎಸ್.ಎನ್. ಮೇಡ್ಲೇರಿ, ಶಿವಣ್ಣ ಗಬ್ಬೇರ, ನಾಗಣ್ಣ ಶೇಷಗಿರಿ, ಕರಬಸಪ್ಪ ಹಳದೂರ ಇತರರು ಇದ್ದರು.ಗಂಗಾಮತ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು ಎಂಬುದು ಬಹುವರ್ಷಗಳ ಬೇಡಿಕೆಯಾಗಿದೆ. ೨೦೧೨ರಲ್ಲಿಯೇ ನಮ್ಮ ಸಮಾಜದ ಕುಲಶಾಸ್ತ್ರ ಅಧ್ಯಯನ ನಡೆದಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿತ್ತು. ಮತ್ತೆ ಈಗ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪೂರಕ ಮಾಹಿತಿ ಕೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರವೇ ಅಗತ್ಯ ಮಾಹಿತಿ ನೀಡಿ ಗಂಗಾಮತ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಲು ಸಹಕಾರ ನೀಡಬೇಕು ಎಂದು ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.