ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಾಧನೆಗೆ ಆರ್ಥಿಕ ಪರಿಸ್ಥಿತಿ ಅಥವಾ ಹಿನ್ನೆಲೆ ಅಡ್ಡಿಯಾಗುವುದಿಲ್ಲ ಎಂಬುದನ್ನು ನಗರದ ಶ್ರೀನಿವಾಸ ನಗರ ಬಡಾವಣೆಯ ಯುವ ಪ್ರತಿಭೆ ಎ.ಎಂ. ಶಶಿಮೋಹನ್ ಸಾಬೀತುಪಡಿಸಿದ್ದಾರೆ. ಭಾರತೀಯ ಉದ್ಯಮ ಅಭಿವೃದ್ಧಿ ಸೇವೆಗಳ ಪರೀಕ್ಷೆಯಲ್ಲಿ ದೇಶ ಮಟ್ಟದಲ್ಲಿ 8ನೇ ಸ್ಥಾನ ಗಳಿಸುವ ಮೂಲಕ ಅವರು ತಾಲೂಕಿಗೆ ಹೆಮ್ಮೆ ತಂದಿದ್ದಾರೆ.ಕಾರ್ಪೆಂಟರ್ ಮಂಜುನಾಥ ಹಾಗೂ ಲಕ್ಷ್ಮೀ ದಂಪತಿಯ ಪುತ್ರನಾದ ಶಶಿಮೋಹನ್, ಆರಂಭದಿಂದಲೇ ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರಿಸುತ್ತಾ ಬಂದಿದ್ದರು. ತಮ್ಮ ಕುಟುಂಬದ ಶ್ರಮಜೀವಿ ಹಿನ್ನೆಲೆಯನ್ನು ಸವಾಲಾಗಿ ಸ್ವೀಕರಿಸಿ ಗುರಿಯತ್ತ ನಿರಂತರ ಪರಿಶ್ರಮದೊಂದಿಗೆ ಸಾಗಿದ ಅವರು, ಇದೀಗ ಪ್ರತಿಷ್ಠಿತ ಭಾರತೀಯ ಉದ್ಯಮ ಅಭಿವೃದ್ಧಿ ಸೇವೆಗಳ ಪರೀಕ್ಷೆಯಲ್ಲಿ ದೇಶದ ಅಗ್ರ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಶಿಮೋಹನ್ ಅವರ ಸಾಧನೆಯಿಂದ ಕುಟುಂಬದ ಜೊತೆಗೆ ಹುಟ್ಟೂರು, ಅವರು ವಿದ್ಯಾಭ್ಯಾಸ ಮಾಡಿದ ಶಾಲೆ-ಕಾಲೇಜುಗಳು ಹಾಗೂ ತಾಲೂಕಿನ ಜನತೆ ಹೆಮ್ಮೆ ಪಡುವಂತಾಗಿದೆ. ಅವರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿದೆ.
ಶಶಿಮೋಹನ್ ಅವರ ಸಾಧನೆಗೆ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಶಾಸಕ ಕೆ.ಎಂ. ಶಿವಲಿಂಗೇಗೌಡ, ತಹಸೀಲ್ದಾರ್ ಎಂ.ಜೆ. ಸಂತೋಷ್ ಕುಮಾರ್, ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್, ಪ್ರಾಂಶುಪಾಲ ಡಾ. ಲಿಂಗರಾಜು, ಮುಖ್ಯೋಪಾಧ್ಯಾಯಿನಿ ಜ್ಞಾನೇಶ್ವರಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಯೋಗೀಶ್ ಅಚಾರ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.