ಕನ್ನಡಪ್ರಭ ವಾರ್ತೆ ಬೇಲೂರು

ಉತ್ತಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಸಂಘಟನೆಯನ್ನು ಕಟ್ಟಲಾಗಿದೆ ಎಂದು ತಾಲೂಕು ಅಧ್ಯಕ್ಷ ಪ್ರೇಂ ಕುಮಾರ್ ತಿಳಿಸಿದರು.ಭೀಮ್ ಆರ್ಮಿ ಭಾರತ ಏಕತಾ ಮಿಷನ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಆಸ್ಪತ್ರೆ, ತಾಲೂಕು ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಸಾರ್ವಜನಿಕ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ದೊರಕಿಸಲು ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಚಂದ್ರಶೇಖರ್ ಆಜಾದ್ ರಾವಣ್ ಅವರ “ಬಹುಜನ ಹಿತಾಯ ಬಹುಜನ ಸುಖಾಯ” ಸಿದ್ಧಾಂತದಡಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಕೆಲಸ ಮಾಡುತ್ತಿದೆ. ಈ ಸಂಘಟನೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಸೇರಿದಂತೆ ಎಲ್ಲಾ ಧರ್ಮದವರ ಸಮಸ್ಯೆಗಳಿಗೂ ಸ್ಪಂದಿಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಸಂಘಟನೆಯ ಕಾರ್ಯಕರ್ತರಾಗಿ ಸೇರ್ಪಡೆಯಾಗಲು 100 ರು. ಶುಲ್ಕ ನಿಗದಿಪಡಿಸಲಾಗಿದೆ. ಸಂಘಟನೆ ಕೈಗೊಂಡ ಹೋರಾಟಗಳ ಕುರಿತು ಮಾತನಾಡಿದ ಅವರು, ಬೇಲೂರಿನಲ್ಲಿ ಸ್ಕ್ಯಾನಿಂಗ್ ಮಷಿನ್ ಕಳವು ಪ್ರಕರಣ ನಡೆದಾಗ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ದೂರು ನೀಡಿ ಸಮಗ್ರ ತನಿಖೆಗೆ ಒತ್ತಾಯಿಸಲಾಗಿದೆ.

ಅಂಬೇಡ್ಕರ್ ಜಯಂತಿಯನ್ನು ತಾಲೂಕು ಆಡಳಿತ ಸಮರ್ಪಕವಾಗಿ ಆಚರಿಸದ ಹಿನ್ನೆಲೆಯಲ್ಲಿ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ಗೆಂಡೆಹಳ್ಳಿಯಲ್ಲಿ ತಾಲೂಕು ಮಟ್ಟದಲ್ಲಿ ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು ಎಂದರು. ತಾಲೂಕಿನಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಗಾಂಜಾ ಬಳಕೆ ಕುರಿತು ಆತಂಕ ವ್ಯಕ್ತಪಡಿಸಿ ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಲ್ಲೂ ಈ ದುಶ್ಚಟ ಹೆಚ್ಚಾಗುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಹಾಸನ ಹಾಗೂ ಅರೇಹಳ್ಳಿ ಭಾಗ ತಾಲೂಕಿನಲ್ಲಿ ಗಾಂಜಾ ನಿರ್ಮೂಲನೆ ಮಾಡುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳಾದ ರೇವಣ್ಣನವರು ಹಾಗೂ ಶಿವನಗೌಡ ಪಾಟೀಲ್ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು. ಬೇಲೂರು ತಾಲೂಕಿಗೆ ವಿದೇಶಿ ಪ್ರವಾಸಿಗರು ಹಾಗೂ ಹೊರರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಆಧುನಿಕ ಸೌಲಭ್ಯಗಳನ್ನು ಹೊಂದಿದ ಗ್ರಂಥಾಲಯದ ಅಗತ್ಯವಿದೆ. ವಿದ್ಯಾರ್ಥಿಗಳು, ಯುವಜನತೆ ಹಾಗೂ ಸಾರ್ವಜನಿಕರಿಗೆ ಜ್ಞಾನಕೇಂದ್ರವಾಗುವಂತಹ ಹೈಟೆಕ್ ಗ್ರಂಥಾಲಯ ನಿರ್ಮಾಣವಾದರೆ ತಾಲೂಕಿಗೆ ಹೆಚ್ಚಿನ ಗೌರವ ತಂದುಕೊಡಲಿದೆ. ಗ್ರಂಥಾಲಯವನ್ನು ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಿಸಿದರೆ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ. ವಾಣಿಜ್ಯ ದೃಷ್ಟಿಯಿಂದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಭೀಮ್ ಅರ್ಮಿ ತಾಲೂಕು ಉಪಾಧ್ಯಕ್ಷ ರಮೇಶ್, ಗೌರವ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮೊಹಮ್ಮದ್ ರುವೇಜ್, ರಮೇಶ್ ಇದ್ದರು.