ಜಗಳೂರು ತಾಲೂಕಿನ ರೈತರ ಕುಂದು-ಕೊರತೆ ಹಾಗೂ ಬಿತ್ತನೆಬೀಜ, ರಸಗೊಬ್ಬರ ಮಾರಾಟಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ಶುಕ್ರವಾರ ತಾಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ಮಹತ್ವದ ಸಭೆಗೆ ಪ್ರಮುಖ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಗೈರುಹಾಜರಾಗಿದ್ದನ್ನು ಖಂಡಿಸಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ತಾಲೂಕು ಕಚೇರಿಯ ಮುಖ್ಯ ಗೇಟ್ ಬಂದ್‌ಗೊಳಿಸಿ, ಪ್ರತಿಭಟನೆ ನಡೆಸಿದರು.

- ತಾಲೂಕು ಕಚೇರಿ ಮುಖ್ಯ ಗೇಟ್ ಬಂದ್‌ಗೊಳಿಸಿ ರೈತರು, ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ - - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ರೈತರ ಕುಂದು-ಕೊರತೆ ಹಾಗೂ ಬಿತ್ತನೆಬೀಜ, ರಸಗೊಬ್ಬರ ಮಾರಾಟಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ಶುಕ್ರವಾರ ತಾಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ಮಹತ್ವದ ಸಭೆಗೆ ಪ್ರಮುಖ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಗೈರುಹಾಜರಾಗಿದ್ದನ್ನು ಖಂಡಿಸಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ತಾಲೂಕು ಕಚೇರಿಯ ಮುಖ್ಯ ಗೇಟ್ ಬಂದ್‌ಗೊಳಿಸಿ, ಪ್ರತಿಭಟನೆ ನಡೆಸಿದರು.

​ಸಭೆಯಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರು (ಎ.ಡಿ.) ಹಾಗೂ ಕೆಲವೇ ಕೆಲವು ವ್ಯಾಪಾರಿಗಳು ಮಾತ್ರ ಭಾಗವಹಿಸಿದ್ದರು. ರೈತರ ಸಮಸ್ಯೆಗಳನ್ನು ಆಲಿಸಬೇಕಾದ ಉನ್ನತ ಅಧಿಕಾರಿಗಳ ಬೇಜವಾಬ್ದಾರಿತನ ಕಂಡು ಆಕ್ರೋಶಗೊಂಡ ರೈತ ಹೋರಾಟಗಾರರು ಅಧಿಕಾರಿಗಳ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದರು.

ಮಂಗಳವಾರ ಸಭೆ:

ಜ್ವರ ಬಂದ ಕಾರಣ ಆಸ್ಪತ್ರೆಯಲ್ಲಿ ಡ್ರಿಪ್‌ ಹಾಕಿಸಿಕೊಂಡಿದ್ದ ತಹಸೀಲ್ದಾರ್‌ ಸಯೀದ್‌ ಕಲೀಂ ಉಲ್ಲಾ ಅವರು ಕ್ಯಾನುಲಾ ಹಾಕಿಕೊಂಡು ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಮನವಿ ಸ್ವೀಕರಿಸಿದರು. ದಾವಣಗೆರೆ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿ ರಸಗೊಬ್ಬರ- ಬಿತ್ತನೆಬೀಜ ವಿತರಣೆ ಬಗ್ಗೆ ಸಕಾರಾತ್ಮಕವಾಗಿ ಬಗೆಹರಿಸಲಾಗುವುದು ಎಂದು ರೈತರಿಗೆ ಮನವಿ ಮಾಡಿದರು.

​ಲಿಂಕ್ ಗೊಬ್ಬರ ದಂಧೆಗೆ ಕಿಡಿ:

​ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಭರಮಸಮುದ್ರ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ೫೪ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಮುಂಗಾರು ಅವಧಿಯಲ್ಲಿ ರೈತರಿಗೆ ಅಗತ್ಯ ಬಿತ್ತನೆಬೀಜ ಮತ್ತು ರಸಗೊಬ್ಬರವನ್ನು ದುಬಾರಿ ಬೆಲೆಗೆ ಮಾರದೆ, ಸಮರ್ಪಕವಾಗಿ ಪೂರೈಸಬೇಕು. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರದ ಜೊತೆಗೆ ಬೇರೆ ಅನಗತ್ಯ ಉತ್ಪನ್ನಗಳನ್ನು ಲಿಂಕ್ ಮಾಡಿ ಬಲವಂತವಾಗಿ ನೀಡಿ ₹೫೦೦ ಪಡೆಯಲಾಗುತ್ತಿದೆ. ಆನ್‌ಲೈನ್ ವ್ಯಾಪಾರಕ್ಕೆ ಬಿಲ್ ಸಹ ನೀಡದೇ ಕೇವಲ ಬಿಳಿ ಹಾಳೆಯಲ್ಲಿ ಬರೆದುಕೊಡಲಾಗುತ್ತಿದೆ. ಇದು ಸರ್ಕಾರಕ್ಕೆ ತೆರಿಗೆ ನಷ್ಟ ಹಾಗೂ ರೈತರಿಗೆ ಆರ್ಥಿಕ ಹೊರೆಯಾಗಿದೆ. ಆದ್ದರಿಂದ ಕಡ್ಡಾಯವಾಗಿ ಕಂಪ್ಯೂಟರ್ ಬಿಲ್ ನೀಡಬೇಕು ಮತ್ತು ನ್ಯಾನೋ ಯೂರಿಯಾ ಖರೀದಿ ರೈತರಿಗೆ ಕಡ್ಡಾಯಗೊಳಿಸಬಾರದು ಎಂದು ಎಚ್ಚರಿಕೆ ನೀಡಿದರು.

ಅರ್ಥ ಮಾಡಿಕೊಳ್ಳದ ಅಧಿಕಾರಿಗಳು:

​ರೈತ ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್ ಮಾತನಾಡಿ, ರೈತರೆಂದರೆ ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಅಸಡ್ಡೆಯಾಗಿದೆ. ಸಣ್ಣ ಕೆಲಸಕ್ಕೂ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸೋತು ಹೋಗಿದ್ದಾರೆ. ಬಿತ್ತನೆಯಿಂದ ಹಿಡಿದು ಬೆಳೆ ಮಾರಾಟದವರೆಗೂ ರೈತರ ನೋವು ಯಾರಿಗೂ ಬೇಡವಾಗಿದೆ. ಅಧಿಕಾರಿಗಳು ಮಾತ್ರ ಸರ್ಕಾರದ ಸಂಬಳ ಪಡೆದು, ಕಾರು, ಎಸಿ, ಫ್ಯಾನ್ ರೂಮ್‌ಗಳಲ್ಲಿ ಕೂತು ದಿನ ಕಳೆಯುತ್ತಾರೆ. ಅವರಿಗೆ ರೈತರ ಕಷ್ಟ ಹೇಗೆ ಗೊತ್ತಾಗಬೇಕು? ನಿಮ್ಮ ಸುಳ್ಳು ಭರವಸೆಗಳಿಗೆ ಇನ್ನು ಕಿವಿಕೊಡುವುದಿಲ್ಲ. ತಕ್ಷಣವೇ ಬೆಲೆ ಏರಿಕೆ ಇಳಿಸಬೇಕು, ಸಮಯಕ್ಕೆ ಸರಿಯಾಗಿ ಗೊಬ್ಬರ-ಬೀಜ ವಿತರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

​ವರ್ಗಾವಣೆ ಮಾಡಿ/ ಅಮಾನತುಗೊಳಿಸಿ:

​ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ರೈತ ಮತ್ತು ದಲಿತ ಸಂಘಟನೆಗಳ ಮುಖಂಡರು ತಾಲೂಕು ಕಚೇರಿಯ ಗೇಟ್ ಬಂದ್ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರ ಸಭೆಗಳನ್ನು ಹಗುರವಾಗಿ ಕಾಣುವ ಅಧಿಕಾರಿಗಳು ಜಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವುದು ಬೇಡ. ಅಂಥವರನ್ನು ತಕ್ಷಣವೇ ಬೇರೆಡೆಗೆ ವರ್ಗಾವಣೆ ಮಾಡಿ, ಇಲ್ಲವೇ ಅಮಾನತುಗೊಳಿಸಿ ಎಂದು ಕಟುವಾಗಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಕೆಚ್ಚೇನಹಳ್ಳಿ ಸಿದ್ದೇಶ್, ಬಿದರಕೆರೆ ವೀರೇಶ್, ಜ್ಯೋತಿ, ನಾಗರಾಜ್, ನವೀನ್‌ಕುಮಾರ್, ಬಸ್ತಿಹಳ್ಳಿ ಬಸವರಾಜ್, ರೈತ ಮುಖಂಡರಾದ ದೊಣೆಹಳ್ಳಿ ಲೋಕೇಶ್, ವಕೀಲ ಆರ್. ಓಬಳೇಶ್, ಕಿರಣ್‌ಕುಮಾರ್, ಪಾಲನಾಯಕ, ಸಕ್ರೇಶ್, ಸೂರಪ್ಪ, ಭೀಮೇಶ್, ಕುಬೇರಪ್ಪ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

- - -

(ಕೋಟ್‌)

* ರೈತರು ಸಹಕರಿಸಲಿ: ಅಧಿಕಾರಿ ಮನವಿ

ರೈತರ ಆರೋಪಗಳಿಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ, ಕಳೆದ ಬಾರಿ ತಾಂತ್ರಿಕ ತೊಂದರೆಯಿಂದ ಯೂರಿಯಾ ವಿತರಣೆಯಲ್ಲಿ ವ್ಯತ್ಯಾಸವಾಗಿತ್ತು, ಆದರೆ, ಈ ಬಾರಿ ಹಾಗಾಗುವುದಿಲ್ಲ. ಕಳೆದೊಂದು ತಿಂಗಳಿಂದ ಈಗಾಗಲೇ ಶೇ.೬೦ರಿಂದ ೭೦ರಷ್ಟು ರೈತರು ಬಿತ್ತನೆಬೀಜ ಹಾಗೂ ಯೂರಿಯಾವನ್ನು ದಾಸ್ತಾನು ಮಾಡಿಕೊಂಡಿದ್ದಾರೆ. ಉಳಿದ ಅಲ್ಪಸ್ವಲ್ಪ ರೈತರಿಗೆ ಮಾತ್ರ ಯೂರಿಯಾ ಬೇಕಾಗಿದೆ. ಯಾರು ಕೂಡ ಗೊಂದಲಕ್ಕೆ ಒಳಗಾಗದೇ ಸಹಕರಿಸಬೇಕು ಎಂದು ಮನವಿ ಮಾಡಿದರು.

- - -

-22ಜೆ.ಜಿ.ಎಲ್‌.1:

ಸಭೆಗೆ ಪ್ರಮುಖ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಗೈರಾಗಿದ್ದನ್ನು ಖಂಡಿಸಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ತಾಲೂಕು ಕಚೇರಿ ಮುಖ್ಯ ಗೇಟ್ ಮುಚ್ಚಿ ಪ್ರತಿಭಟನೆ ನಡೆಸಿದರು.