ಚಿತ್ರಕಲಾ ಸ್ಪರ್ಧೆಯಲ್ಲಿ ಅರಸೀಕೆರೆ ನಗರ ಮತ್ತು ಗ್ರಾಮಾಂತರ ಭಾಗದ ವಿವಿಧ ಶಾಲೆಗಳ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಸ್ಪರ್ಧೆಯನ್ನು 1ರಿಂದ 5ನೇ ತರಗತಿ ಮತ್ತು 6ರಿಂದ 10ನೇ ತರಗತಿ ಎಂಬ ಎರಡು ವಿಭಾಗಗಳಲ್ಲಿ ನಡೆಸಲಾಯಿತು. 6ರಿಂದ 10ನೇ ತರಗತಿ ವಿಭಾಗದಲ್ಲಿ ಸಾತ್ವಿಕ್ (ಪೊದರ್ ಇಂಟರ್‌ನ್ಯಾಷನಲ್ ಸ್ಕೂಲ್) ಪ್ರಥಮ ಬಹುಮಾನ, ಧನ್ಯಶ್ರೀ (ಅನುಭವ ಮಂಟಪ ಶಾಲೆ) ದ್ವಿತೀಯ ಬಹುಮಾನ ಹಾಗೂ ಲಿಖಿತ್ (ಎಸ್‌ಬಿಆರ್‌ಎಚ್‌ಎಸ್ ಶಾಲೆ, ಹಾನಬಾಳು) ತೃತೀಯ ಬಹುಮಾನ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಕ್ಕಳಲ್ಲಿ ಧಾರ್ಮಿಕ ಸಂಸ್ಕೃತಿ, ಏಕಾಗ್ರತೆ ಹಾಗೂ ಸೃಜನಶೀಲತೆ ಬೆಳೆಸುವ ಉದ್ದೇಶದಿಂದ ರುದ್ರಾಕ್ಷ ಫೌಂಡೇಶನ್ ವತಿಯಿಂದ ನಗರದ ಮೈಸೂರು ರಸ್ತೆಯಲ್ಲಿರುವ ಶುಭಮಸ್ತು ಕಲ್ಯಾಣ ಮಂಟಪದಲ್ಲಿ ಶಿವಲಿಂಗ ಚಿತ್ರಕಲಾ ಸ್ಪರ್ಧೆ ಹಾಗೂ ಸಾಮೂಹಿಕ ಮಹಾ ಮೃತ್ಯುಂಜಯ ಜಪ ಪಠಣ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.ಮಧ್ಯಾಹ್ನ 1.30ರಿಂದ ಸಂಜೆ 4.30ರವರೆಗೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಅರಸೀಕೆರೆ ನಗರ ಮತ್ತು ಗ್ರಾಮಾಂತರ ಭಾಗದ ವಿವಿಧ ಶಾಲೆಗಳ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಸ್ಪರ್ಧೆಯನ್ನು 1ರಿಂದ 5ನೇ ತರಗತಿ ಮತ್ತು 6ರಿಂದ 10ನೇ ತರಗತಿ ಎಂಬ ಎರಡು ವಿಭಾಗಗಳಲ್ಲಿ ನಡೆಸಲಾಯಿತು. 6ರಿಂದ 10ನೇ ತರಗತಿ ವಿಭಾಗದಲ್ಲಿ ಸಾತ್ವಿಕ್ (ಪೊದರ್ ಇಂಟರ್‌ನ್ಯಾಷನಲ್ ಸ್ಕೂಲ್) ಪ್ರಥಮ ಬಹುಮಾನ, ಧನ್ಯಶ್ರೀ (ಅನುಭವ ಮಂಟಪ ಶಾಲೆ) ದ್ವಿತೀಯ ಬಹುಮಾನ ಹಾಗೂ ಲಿಖಿತ್ (ಎಸ್‌ಬಿಆರ್‌ಎಚ್‌ಎಸ್ ಶಾಲೆ, ಹಾನಬಾಳು) ತೃತೀಯ ಬಹುಮಾನ ಪಡೆದುಕೊಂಡರು. 1ರಿಂದ 5ನೇ ತರಗತಿ ವಿಭಾಗದಲ್ಲಿ ಶಿವಾನಿ (ಅನುಭವ ಮಂಟಪ ಶಾಲೆ) ಪ್ರಥಮ, ಗುರುಕಿರಣ್ (ಅನಂತ ಇಂಟರ್‌ನ್ಯಾಷನಲ್ ಸ್ಕೂಲ್) ದ್ವಿತೀಯ ಮತ್ತು ಶಮಿತಾ (ಅನುಭವ ಮಂಟಪ ಶಾಲೆ) ತೃತೀಯ ಬಹುಮಾನ ಗಳಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನವಾಗಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಚಿತ್ರಕಲಾ ಸ್ಪರ್ಧೆಯ ನಂತರ ನೊಣವಿನಕೆರೆಯ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಾಮೂಹಿಕ ಮಹಾ ಮೃತ್ಯುಂಜಯ ಜಪ ಪಠಣ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಗಳು, ಆರೋಗ್ಯ, ಆಯುಷ್ಯ ಮತ್ತು ಮನಶಾಂತಿಗಾಗಿ ಮಹಾ ಮೃತ್ಯುಂಜಯ ಜಪ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಶಿವನ ಆಶೀರ್ವಾದ ದೊರೆಯಲಿ ಎಂದು ಹಾರೈಸಿದರು.

ಎಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿಗಳು ಮಾತನಾಡಿ, “ಮಕ್ಕಳು ನಮ್ಮ ಸಂಸ್ಕೃತಿಯಿಂದ ದೂರವಾಗುತ್ತಿರುವ ಇಂತಹ ಕಾಲದಲ್ಲಿ ಶಿವಲಿಂಗ ಚಿತ್ರ ಬರೆಯುವ ಮೂಲಕ ಧಾರ್ಮಿಕ ಮೌಲ್ಯಗಳು ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುತ್ತವೆ. ಹತ್ತು ಬಾರಿ ‘ಓಂ ನಮಃ ಶಿವಾಯ’ ಜಪ ಮಾಡುವುದಕ್ಕಿಂತ ಒಂದು ಬಾರಿ ಶಿವಲಿಂಗವನ್ನು ಮನಸ್ಸಿನಿಂದ ಚಿತ್ರಿಸುವುದರಿಂದ ಅದರ ಭಾವನೆ ಜೀವಂತವಾಗುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕ್ಷೇತ್ರದ ಶಾಸಕರೂ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಕೆ.ಎಂ. ಶಿವಲಿಂಗೇಗೌಡರು, ಶಿವಲಿಂಗ ಚಿತ್ರ ಬಿಡಿಸುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತದೆ. ಇಂತಹ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಗರದಲ್ಲಿ ಹೆಚ್ಚಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ರುದ್ರಾಕ್ಷ ಫೌಂಡೇಶನ್ ಅಧ್ಯಕ್ಷ ಜೈಪ್ರಕಾಶ್ ಗುರೂಜಿ ಮಾತನಾಡಿ, ಕಳೆದ ವರ್ಷವೂ ಶಿವಲಿಂಗ ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಿ ನಡೆದಿದ್ದು, ಈ ವರ್ಷ ಇನ್ನೂ ಹೆಚ್ಚಿನ ಮಕ್ಕಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಮತ್ತಷ್ಟು ಯಶಸ್ಸು ಕಂಡಿದೆ. ಪ್ರತಿವರ್ಷವೂ ಈ ಸ್ಪರ್ಧೆ ಹಾಗೂ ಸಾಮೂಹಿಕ ಮಹಾ ಮೃತ್ಯುಂಜಯ ಜಪವನ್ನು ನಗರದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅನಂತ ಇಂಟರ್‌ನ್ಯಾಷನಲ್ ಶಾಲೆಯ ಆನಂದ್ ಕುಮಾರ್, ಶುಭಮಸ್ತು ಕಲ್ಯಾಣ ಮಂಟಪದ ಮಾಲೀಕ ಷಡಾಕ್ಷರಿ, ಮಾಜಿ ನಗರಸಭಾ ಸದಸ್ಯ ದರ್ಶನ್, ಕಾಂಗ್ರೆಸ್ ಮುಖಂಡ ಹರೀಶ್ ಕುಮಾರ್, ಈರಣ್ಣ, ಕೃಷ್ಣಪ್ಪ, ಸುಧಾ, ಪ್ರಸನ್ನ ಕುಮಾರ್, ನಳಿನಿ, ಆರೋಗ್ಯ ಇಲಾಖೆಯ ಪರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.