ಲೇಖಕನಿಗಿಂತ ಕೃತಿಯೇ ದೊಡ್ಡದು ಎನಿಸಿದಾಗ ಮಾತ್ರ ಸಾಹಿತ್ಯ ಸಾರ್ಥಕತೆ ಪಡೆಯುತ್ತದೆ ಎಂದು ಹರಿಹರಶ್ರೀ ಪ್ರಶಸ್ತಿ ಪುರಸ್ಸೃತ ದಾವಣಗೆರೆಯ ಸಾಹಿತಿ ಪಾಪುಗುರು ಹೇಳಿದ್ದಾರೆ.

- ‘ಹರಿಹರಶ್ರೀ’, ‘ಸಂಗಮಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಪಾಪುಗುರು

- - -

ಕನ್ನಡಪ್ರಭ ವಾರ್ತೆ ಹರಿಹರ

ಲೇಖಕನಿಗಿಂತ ಕೃತಿಯೇ ದೊಡ್ಡದು ಎನಿಸಿದಾಗ ಮಾತ್ರ ಸಾಹಿತ್ಯ ಸಾರ್ಥಕತೆ ಪಡೆಯುತ್ತದೆ ಎಂದು ಹರಿಹರಶ್ರೀ ಪ್ರಶಸ್ತಿ ಪುರಸ್ಸೃತ ದಾವಣಗೆರೆಯ ಸಾಹಿತಿ ಪಾಪುಗುರು ಹೇಳಿದರು.

ನಗರದ ಎಸ್‌ಜೆವಿಪಿ ವಿದ್ಯಾಪೀಠದಲ್ಲಿ ಶನಿವಾರ ಸಾಹಿತ್ಯ ಸಂಗಮ ಸಂಸ್ಥೆಯ ವತಿಯಿಂದ ನೀಡಲಾಗುವ 2023-24ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ ‘ಹರಿಹರಶ್ರೀ’ ಹಾಗೂ ‘ಸಂಗಮಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹರಿಹರಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಹರಿಹರದ ಮಣ್ಣಿಗೆ ಐತಿಹಾಸಿಕ, ಪೌರಾಣಿಕ ಹಾಗೂ ಕಾರ್ಮಿಕ ಹೋರಾಟದ ದೊಡ್ಡ ಹಿನ್ನೆಲೆಯಿದೆ. ಇಂತಹ ಪುಣ್ಯಭೂಮಿಯಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಸೌಭಾಗ್ಯ. ಪ್ರಶಸ್ತಿಯ ಹೆಸರೇ ಸೂಚಿಸುವಂತೆ ಇದು ಬಹಳ ಮಹತ್ವವುಳ್ಳದ್ದಾಗಿದೆ. ಈ ಗೌರವ ನನ್ನ ವೈಯಕ್ತಿಕ ಸಾಧನೆಗಿಂತ ಹೆಚ್ಚಾಗಿ, ನನ್ನೊಳಗಿನ ಭಾವನೆಗಳಿಗೆ ಅಕ್ಷರರೂಪ ನೀಡಿದ ''''''''''''''''ಮಣ್ಣೇ ಮೊದಲು'''''''''''''''' ಕೃತಿಗೆ ಸಲ್ಲುತ್ತದೆ ಎಂದರು.

ಹರಿಹರ ಮತ್ತು ದಾವಣಗೆರೆ ಭೌಗೋಳಿಕವಾಗಿ ಬೇರೆಯಾಗಿ ಕಂಡರೂ, ನಾವೆಲ್ಲರೂ ತುಂಗಭದ್ರಾ ನದಿಯ ತಟದ ಒಂದೇ ತಾಯಿಯ ಮಕ್ಕಳು. ಸಾಹಿತ್ಯಿಕವಾಗಿ ಹಾಗೂ ಸಾಮಾಜಿಕವಾಗಿ ನಾವೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಕೂಡಿ ಬಾಳೋಣ ಎಂದರು.

ಮುಖ್ಯ ಅತಿಥಿ ಪ್ರೊ. ಎಚ್.ಎಂ. ಭಿಕ್ಷಾವರ್ತಿಮಠ ಮಾತನಾಡಿ, ಕವಿತೆಗಳಿಗೆ ಬೆಲೆಯಿಲ್ಲದ ಕಾಲವಿದು ಎನ್ನುವವರ ನಡುವೆ, ಉತ್ತಮ ಗುಣಮಟ್ಟದ ಸಾಹಿತ್ಯಕ್ಕೆ ಇಂದಿಗೂ ಮನ್ನಣೆ ಇದೆ ಎಂಬುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ. ಈ ಕೃತಿಯು ಈಗಾಗಲೇ ವೀರಲೋಕ ಪ್ರಕಾಶನದ ಮೆಚ್ಚುಗೆಗೆ ಭಾಜನವಾಗಿ, ಈಗ ಹರಿಹರಶ್ರೀ ಪ್ರಶಸ್ತಿಗೂ ಆಯ್ಕೆ ಆಗಿರುವುದು ಅದರ ಶ್ರೇಷ್ಠತೆ ಸಾಬೀತುಪಡಿಸಿದೆ. ನಮ್ಮ ಮಣ್ಣಿನ ಸಂಸ್ಕೃತಿ, ಬದುಕಿನ ನೆಲೆಗಳು ಹಾಗೂ ಮಣ್ಣಿನ ಸೊಗಡನ್ನು ಪಾಪುಗುರು ಅವರು ಅತ್ಯಂತ ಗಟ್ಟಿಯಾಗಿ ಮತ್ತು ಸೂಕ್ಷ್ಮವಾಗಿ ತಮ್ಮ ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಡಿ.ಎಂ. ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, 1991 ರಿಂದಲೂ ಸಾಹಿತ್ಯ ಸಂಗಮ ವೇದಿಕೆ ಗುಣಮಟ್ಟದ ಸಾಹಿತ್ಯ ಗುರುತಿಸುತ್ತಾ ಬಂದಿದೆ. 3 ಹಂತಗಳಲ್ಲಿ ಅತ್ಯಂತ ಗೌಪ್ಯವಾಗಿ ತೀರ್ಪುಗಾರರ ಮೂಲಕ ವಿಜೇತರನ್ನು ಆಯ್ಕೆ ಮಾಡುವುದು ನಮ್ಮ ಸಂಸ್ಥೆಯ ವಿಶೇಷತೆ ಎಂದರು.

ಹಿರಿಯ ಕ್ರೀಡಾಪಟು ಎಚ್.ನಿಜಗುಣ ಅವರಿಗೆ ‘ಸಂಗಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೇಖಕ ಕತ್ತಿಗೆ ಪರಮೇಶ್ವರಪ್ಪ ಅವರ ಕಲ್ಲೂರಿನಲ್ಲಿ ಧರ್ಮಾವತಿ ಕಾದಂಬರಿ ಲೋಕಾರ್ಪಣೆ ಮಾಡಲಾಯಿತು. ಅಧ್ಯಕ್ಷತೆಯನ್ನು ಸಾಹಿತ್ಯ ಸಂಗಮದ ಅಧ್ಯಕ್ಷ ವಿ. ಬಿ. ಕೊಟ್ರೇಶಪ್ಪ ವಹಿಸಿದ್ದರು.

ವಿಶ್ರಾಂತ ಉಪನ್ಯಾಸಕ ಲಿಂಗರಾಜ ಕಮ್ಮಾರ, ಸಹ ಪ್ರಾಧ್ಯಾಪಕಿ ಡಾ. ಎಸ್.ಎಂ. ಗೌರಮ್ಮ, ಎಚ್. ಕೆ. ಕೊಟ್ರಪ್ಪ ಹಾಗೂ ಸೀತಾ ನಾರಾಯಣ ಉಪಸ್ಥಿತರಿದ್ದರು. ಬಿ.ಬಿ. ರೇವಣ ನಾಯ್ಕ ನಿರೂಪಿಸಿದರು. ಇಂದೂಧರ್ ಸ್ವಾಮಿ ವಂದಿಸಿದರು.

- - -

-11HRR.02:

ಹರಿಹರದಲ್ಲಿ ಸಾಹಿತ್ಯ ಸಂಗಮ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ಪ್ರತಿಷ್ಠಿತ ಹರಿಹರಶ್ರೀ ಹಾಗೂ ಸಂಗಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.