ಜಗ್ಗಲ್ಲ, ಬಗ್ಗೋಲ್ಲ ಎಂದರೆ ನಮಗೆ ಜಗ್ಗಿಸೋದು ಚೆನ್ನಾಗಿ ಗೊತ್ತಿದೆ. ಮುಖ್ಯಮಂತ್ರಿಗಳೂ ಜಗ್ಗಲ್ಲ, ಬಗ್ಗಲ್ಲ ಅಂದ್ರು ಪಾದಯಾತ್ರೆ ಮಾಡಿ ಜಗ್ಗಿಸಿದ್ದೇವೆ. ಏರ್ ಫೋಟ್ ಬಳಿ ಜಾಗ ಹೊಡೆದವರನ್ನೂ ಜಗ್ಗಿಸಿದ್ದೇವೆ. ನೀವೂ ಜಗ್ಗಲ್ಲ ಬಗ್ಗಲ್ಲ ಎನ್ನುವುದಾದರೆ ಇದೇ ನಿಮ್ಮ ಕೊನೆ ಅನ್ಸುತ್ತೆ. ಯಾವುದಕ್ಕೂ ಫಾರಿನ್‌ನಲ್ಲಿ ಜಗ ಹುಡುಕ್ಕಿಟ್ಟುಕೊಂಡಿರಿ.

ಕನ್ನಡಪ್ರಭ ವಾರ್ತೆ ಮದ್ದೂರು

ಜಗ್ಗಲ್ಲ, ಬಗ್ಗೋಲ್ಲ ಎಂದರೆ ನಮಗೆ ಜಗ್ಗಿಸೋದು ಚೆನ್ನಾಗಿ ಗೊತ್ತಿದೆ. ಮುಖ್ಯಮಂತ್ರಿಗಳೂ ಜಗ್ಗಲ್ಲ, ಬಗ್ಗಲ್ಲ ಅಂದ್ರು ಪಾದಯಾತ್ರೆ ಮಾಡಿ ಜಗ್ಗಿಸಿದ್ದೇವೆ. ಏರ್ ಫೋಟ್ ಬಳಿ ಜಾಗ ಹೊಡೆದವರನ್ನೂ ಜಗ್ಗಿಸಿದ್ದೇವೆ. ನೀವೂ ಜಗ್ಗಲ್ಲ ಬಗ್ಗಲ್ಲ ಎನ್ನುವುದಾದರೆ ಇದೇ ನಿಮ್ಮ ಕೊನೆ ಅನ್ಸುತ್ತೆ. ಯಾವುದಕ್ಕೂ ಫಾರಿನ್‌ನಲ್ಲಿ ಜಗ ಹುಡುಕ್ಕಿಟ್ಟುಕೊಂಡಿರಿ ಎಂದು ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರು ಶಾಸಕ ಕದಲೂರು ಉದಯ್ ಹೇಳಿಕೆಗೆ ತಿರುಗೇಟು ನೀಡಿದರು.

ಗೆಜ್ಜಲಗೆರೆ ಗ್ರಾಪಂನ್ನು ನಗರಸಭೆಯಿಂದ ಕೈಬಿಡುವಂತೆ ನಡೆಸುತ್ತಿರುವ ಗ್ರಾಮಸ್ಥರ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ಹಳ್ಳಿಯ ಸೊಗಡು ಪಟ್ಟಣದಲ್ಲಿ ಸಿಗುವುದಿಲ್ಲ. ನಗರಸಭೆಗೆ ಸೇರಿಸಿರುವ ಹಳ್ಳಿಗಳನ್ನು ಕೈಬಿಡಿ. ಹಳ್ಳಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳುತ್ತಿರುವ ಉದ್ದೇಶವಾದರೂ ಏನು?, ಮುಂದೆ ಅನ್ನ ಬೆಳೆಯುವ ಪ್ರದೇಶವನ್ನೆಲ್ಲಾ ಹಾಳು ಮಾಡಿ ರಿಯಲ್ ಎಸ್ಟೇಟ್ ಮಾಡೋ ಪ್ಲಾನ್ ಏನಾದರೂ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.

ಅಭಿವೃದ್ಧಿ ಮಾಡಬೇಕೆಂದರೆ ನಗರಸಭೆಗೆ ಸೇರಿಸಿಕೊಂಡೇ ಮಾಡಬೇಕೆಂದೇನಿಲ್ಲ. ನಿಮ್ಮಲ್ಲಿ ಹಣವಿದ್ದರೆ ಇಲ್ಲಿ ಜನರಿಗೆ ಬೇಕಾದ ಸೌಲಭ್ಯಗಳನ್ನು ಕೊಟ್ಟು ಅಭಿವೃದ್ಧಿ ಮಾಡಿ. ಆಗ ಜನರೂ ನಿಮ್ಮನ್ನು ಪ್ರೀತಿ ಮಾಡುತ್ತಾರೆ. ನಿಮ್ಮಲ್ಲಿ ಆದಾಯ ಕೊರತೆ ಇದೆ ಅಂತ ಪಂಚಾಯ್ತಿಗಳನ್ನು ಸೇರಿಸಿಕೊಂಡು ಹಳ್ಳಿ ವಾತಾವರಣವನ್ನು ಹಾಳು ಮಾಡುವುದು ಎಷ್ಟರಮಟ್ಟಿಗೆ ಸರಿ. ಜನರ ವಿರೋಧ ಕಟ್ಟಿಕೊಂಡು ಆಡಳಿತ ನಡೆಸಲು ಯಾರಿಂದಲೂ ಸಾಧ್ಯವಿಲ್ಲ. ಜನರ ವಿರುದ್ಧವಾಗಿ ನಡೆ ಅನುಸರಿಸಿದರೆ ಇದೇ ನಿಮ್ಮ ಕೊನೆಯ ಚುನಾವಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಇನ್ನೆರಡೇ ವರ್ಷ ಅಧಿಕಾರ ಇರೋದು. ಆಮೇಲೆ ನೀವು ಎಲ್ಲಿದ್ದೀರಿ ಎಂದು ಯಾರೂ ಕೇಳೋಲ್ಲ. ಶಾಸಕರಾಗಿ ಜನವಿರೋಧಿ ನಡೆ ಅನುಸರಿಸುವುದನ್ನು ಬಿಡಿ. ಜನರ ಭಾವನೆಗಳಿಗೆ ಸ್ಪಂದಿಸುವುದನ್ನು ಮೊದಲು ಕಲಿತುಕೊಳ್ಳಿ ಎಂದು ಶಾಸಕರಿಗೆ ಸಲಹೆ ನೀಡಿದ ಛಲವಾದಿ ನಾರಾಯಣಸ್ವಾಮಿ, ನಿಮ್ಮ ಹೋರಾಟದ ಜೊತೆ ನಾವು ಇದ್ದೇವೆ. ಕುಮಾರಸ್ವಾಮಿ ಅವರ ಗಮನಕ್ಕ್ಕೂ ತರಲಾಗಿದೆ. ನಿಮ್ಮ ಅನುಮತಿ ಇಲ್ಲದೆ ಗೆಜ್ಜಲಗೆರೆ ಗ್ರಾಪಂನ್ನು ನಗರಸಭೆಗೆ ಸೇರಿಸಬಾರದು. ನಿಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ನಾವೂ ನಿಮ್ಮ ಜೊತೆಗೂಡಿ ಹೋರಾಟಕ್ಕೆ ಹೆಚ್ಚಿನ ಶಕ್ತಿ ತುಂಬುವ ಭರವಸೆ ನೀಡಿದರು.