ಹಿರೇಕೆರೂರು ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ

| Published : Sep 14 2025, 01:04 AM IST

ಹಿರೇಕೆರೂರು ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಕೆರೂರು ತಾಲೂಕು ಆಸ್ಪತ್ರೆಗೆ ನಿತ್ಯ 600ಕ್ಕೂ ಹೆಚ್ಚು ಹೊರರೋಗಿಗಳು, 40ಕ್ಕೂ ಹೆಚ್ಚು ಒಳರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಆದರೆ ಆರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ರವಿ ಮೇಗಳಮನಿ

ಹಿರೇಕೆರೂರು: ಹೆಸರಿಗಷ್ಟೆ 100 ಹಾಸಿಗೆ ಸಾಮರ್ಥ್ಯದ ತಾಲೂಕು ಸಾರ್ವಜನಿಕ ಆಸ್ಪತ್ರೆ. ಆದರೆ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರೇ ಇಲ್ಲ!

ಇದು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯ ಕಥೆ.

ನಿತ್ಯ ತಾಲೂಕಿನ ವಿವಿಧ ಭಾಗಗಳಿಂದ 600ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಾರೆ. ಆದರೆ ಇಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆಗೆ ಸೌಲಭ್ಯಗಳಿಲ್ಲ. 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಪ್ರತಿದಿನ 40ರಿಂದ 50 ಒಳರೋಗಿಗಳು ದಾಖಲಾಗುತ್ತಿದ್ದಾರೆ. ಇರುವ ವೈದ್ಯರ ಬಳಿ ಸರದಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಬಡ ರೋಗಿಗಳದ್ದಾಗಿದೆ.

ಇಲ್ಲಿ ಸುಸಜ್ಜಿತ ಐಸಿಯು ಇದೆ, ಆದರೆ ಚಿಕಿತ್ಸೆಯಿಲ್ಲ. ಆಪರೇಷನ್ ಥಿಯೇಟರ್ ಕೂಡ ಇದೆ. ಆದರೆ ಏನೋ ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ಮಾತ್ರ ನಡೆಸಲಾಗುತ್ತಿದೆ. ಕಾರಣ ಅರವಳಿಕೆ ತಜ್ಞರ ಹುದ್ದೆ ಖಾಲಿ ಇದೆ. ಈ ಭಾಗದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನತೆ ಹೆಚ್ಚಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವಂತಾಗಿದೆ.

ನೆಲಮಹಡಿ, ಮೊದಲ ಮಹಡಿ ಹೊಂದಿರುವ ಕಟ್ಟಡದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸೇರಿದಂತೆ ಹಲವು ಆರೋಗ್ಯ ಸೇವೆಯ ವಿಭಾಗಗಳಿವೆ. ಡೆಂಘೀ, ಜ್ವರ ಹಾಗೂ ಡಯಾಲಿಸಿಸ್ ಚಿಕಿತ್ಸೆ ನೀಡುವ ಕೊಠಡಿಗಳು ಕಾರ್ಯನಿರ್ವಸುತ್ತಿವೆ. ಇನ್ನೂ ಆಸ್ಪತ್ರೆಯ ಒಳಭಾಗದಲ್ಲಿ ರೋಗಿಗಳ ನೋಂದಣಿ ಕೇಂದ್ರವಿದೆ. ನೋಂದಣಿ ವಿಭಾಗದ ಪಕ್ಕದಲ್ಲಿ ವೈದ್ಯರ, ಚುಚ್ಚುಮದ್ದು, ಗಾಯದ ಡ್ರೆಸಿಂಗ್ ಕೊಠಡಿ ಇದೆ. ವೈದ್ಯರು ಹಾಗೂ ರೋಗಿಗಳು ಓಡಾಡಲು ಸ್ಥಳದ ಸಮಸ್ಯೆ ಉಂಟಾಗುತ್ತಿದೆ. ಜತೆಗೆ ಸ್ವಚ್ಛತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರು ರೋಗಿಗಳ ಆರೈಕೆಗೆ ಬಂದವರು, ಸಂದರ್ಶಕರು ಎಲೆ-ಅಡಕೆ, ಗುಟ್ಕಾ ಉಗುಳುತ್ತಾರೆ.

ವೈದ್ಯರ ಕೊರತೆ: ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 13 ತಜ್ಞವೈದ್ಯರ ಹುದ್ದೆ ಮಂಜೂರು ಆಗಿದೆ. 6 ವೈದ್ಯರು ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಮಕ್ಕಳ ತಜ್ಞ, ಫಿಜಿಷಿಯನ್, ಜನರಲ್ ಸರ್ಜನ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಕೀಲು, ಮೂಳೆ ತಜ್ಞ, ದಂತ, ನೇತ್ರ ವೈದ್ಯರು ತಲಾ ಒಬ್ಬರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜನರಲ್ ಸರ್ಜನ್ ಹೆಚ್ಚುವರಿ ಹುದ್ದೆ ಸೇರಿದಂತೆ, ಅರವಳಿಕೆ ತಜ್ಞರು, ಚರ್ಮರೋಗ, ಕಿವಿ ಮೂಗು ಗಂಟಲು ತಜ್ಞರು, ಹಿರಿಯ ವೈದ್ಯರ ಹುದ್ದೆಗಳು ಭರ್ತಿ ಆಗಿಲ್ಲ. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 7 ವೈದ್ಯರು ಹುದ್ದೆಗಳು ಖಾಲಿ ಇವೆ.

ಪ್ರಥಮ ದರ್ಜೆ ಸಹಾಯಕ 2, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ 1, ಶುಶ್ರೂಕಿಯರು 6, ರೇಡಿಯೋಲಜಿಸ್ಟ್ 1, ದ್ವಿತೀಯ ದರ್ಜೆ ಸಹಾಯಕ 1 ಹುದ್ದೆಗಳು ಇವೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು: ತಾಲೂಕಿನ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಹಂಸಭಾವಿ, ಚಿಕ್ಕೇರೂರ, ಹೊಸವೀರಾಪುರ, ಮಡ್ಲೂರು, ಆಲದಗೇರಿ, ಕೋಡಗಳಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವೈದ್ಯರ ಕೊರತೆ ಬಗ್ಗೆ ಪ್ರತಿ ತಿಂಗಳು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುತ್ತಿದೆ. ಈಗಿರುವ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ಇನ್ನೂ ಅರವಳಿಕೆ ತಜ್ಞ ಹುದ್ದೆ ಖಾಲಿ ಇದೆ ಎಂದು ಹಿರೇಕೆರೂರು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಮಲ್ಲಪ್ಪ ಹೇಳುತ್ತಾರೆ.ಹಿರೇಕೆರೂರು ತಾಲೂಕು ಆಸ್ಪತ್ರೆಯ ಖಾಲಿಯಿರುವ ಹುದ್ದೆಗೆ ಸರ್ಕಾರ ಕೂಡಲೆ ನೇಮಕ ಮಾಡಬೇಕು. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಚೀಟಿ ಕೊಡುವ ಸ್ಥಳ ಬೇರೆಡೆ ಮಾಡಬೇಕು. ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಅಲೆದಾಡಿಸಬಾರದು. ಸಾರ್ವಜನಿಕರಿಗೆ ಮಾತ್ರೆ, ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಹೇಳುತ್ತಾರೆ.