ಸಮೀಕ್ಷೆ ನೆಪದಲ್ಲಿ ಸಿಎಂ ರೊಕ್ಕ ಹೊಡೆಯುವ ಹುನ್ನಾರ

| Published : Sep 14 2025, 01:04 AM IST

ಸಾರಾಂಶ

ರಾಜ್ಯ ಸರ್ಕಾರದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಹಿಂದೆ ರೊಕ್ಕ ಹೊಡೆಯುವ ಹಾಗೂ ಬಿಪಿಎಲ್‌ ಕಾರ್ಡ್ ರದ್ದುಗೊಳಿಸುವ ಹುನ್ನಾರಗಳಿವೆ.

-ಮಾಜಿ ಸಚಿವ ಶ್ರೀರಾಮುಲು ಆರೋಪ

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಜ್ಯ ಸರ್ಕಾರದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಹಿಂದೆ ರೊಕ್ಕ ಹೊಡೆಯುವ ಹಾಗೂ ಬಿಪಿಎಲ್‌ ಕಾರ್ಡ್ ರದ್ದುಗೊಳಿಸುವ ಹುನ್ನಾರಗಳಿವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಪಾದಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಗೆ ಬಜೆಟ್‌ನಲ್ಲಿ ₹420 ಕೋಟಿ ನಿಗದಿಗೊಳಿಸಲಾಗಿದೆ. ಈ ಹಿಂದೆ ಸಮೀಕ್ಷೆಯ ಹೆಸರಿನಲ್ಲಿ ಹಣ ಹೊಡೆದರು. ಇದೀಗ ಮತ್ತೆ ಸಮೀಕ್ಷೆಗೆಂದು ಕೋಟ್ಯಂತರ ಹಣ ಮೀಸಲಿಡಲಾಗಿದೆ. ದುಬಾರಿ ಸಮೀಕ್ಷೆಯ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ದುಡ್ಡು ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.

ಕಳೆದ ಹತ್ತು ವರ್ಷಗಳ ಹಿಂದೆ ಕಾಂತರಾಜ ಸಮಿತಿಯಿಂದ ₹150 ಕೋಟಿ ಖರ್ಚು ಮಾಡಿ 54 ಪ್ರಶ್ನೆಗಳ ಸಮೀಕ್ಷೆ ಮಾಡಲಾಗಿತ್ತು. ಅದು ಅವೈಜ್ಞಾನಿಕ ಎಂದು ಇದೀಗ 60 ಪ್ರಶ್ನೆಗಳ ಸಮೀಕ್ಷೆಗೆ ಸರ್ಕಾರ ಮುಂದಾಗಿದೆ. ಜಾತಿ ಸಮೀಕ್ಷೆಯಲ್ಲಿ ಸಮುದಾಯಗಳ ಮುಂದೆ ಕ್ರಿಶ್ಚಿಯನ್ ಎಂಬ ಪದವನ್ನು ಸೇರಿಸಲಾಗಿದ್ದು ಮುಂದಿನ ದಿನಗಳಲ್ಲಿ ದಾಖಲೆಗಳ ತಾಂತ್ರಿಕ ಸಮಸ್ಯೆಗೆ ಸಿಲುಕಿಸುವುದರ ಜತೆಗೆ ಜಾತಿಗಳ ನಡುವೆ ದ್ವೇಷ ಬೆಳೆಯಲು ದಾರಿಮಾಡಿ ಕೊಟ್ಟಂತಾಗಲಿದೆ. ಒಟ್ಟಾರೆ ಹಣ ಲಪಟಾಯಿಸುವ ಉದ್ದೇಶದಿಂದಾಗಿಯೇ ಸಮೀಕ್ಷೆಗೆ ಸಿಎಂ ಮುಂದಾಗಿದ್ದಾರೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಧುಸೂದನ್ ನಾಯಕ ಎಂಬವರಿಗೆ ಸಮೀಕ್ಷೆಯ ಜವಾಬ್ದಾರಿ ವಹಿಸಲಾಗಿದೆ. ಕಾಂಗ್ರೆಸ್‌ನ ಹೈಕಮಾಂಡ್ ಓಲೈಸಲು ಮರು ಸಮೀಕ್ಷೆಗೆ ಸಿದ್ಧರಾಮಯ್ಯ ಮುಂದಾಗಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್ ಪಾಲಿಗೆ ಕರ್ನಾಟಕ ಎಟಿಎಂ ಆಗಿದೆ ಎಂದು ಆರೋಪಿಸಿದರು.ಗ್ಯಾರಂಟಿ ಯೋಜನೆಗಳಿಂದ ಜನರು ಆರ್ಥಿಕ ಸಬಲರಾಗಿದ್ದಾರೆ ಎಂಬ ಕಾರಣವೊಡ್ಡಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಮಾಡುವುದು ಈ ಸಮೀಕ್ಷೆ ಹಿಂದಿನ ದುರುದ್ದೇಶವಾಗಿದೆ ಎಂದು ಶ್ರೀರಾಮುಲು ಕಿಡಿಕಾರಿದರು.

ಸಿದ್ದರಾಮಯ್ಯ ಈಗಾಗಲೇ 16 ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರು 17ನೇ ಬಜೆಟ್ ಮಂಡಿಸುವುದು ಅನುಮಾನವಿದೆ. ಅವರು ಎಷ್ಟು ದಿನ ಖುರ್ಚಿಯಲ್ಲಿರುತ್ತಾರೋ ನೋಡಬೇಕು ಎಂದರು.