ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಬಗ್ಗೆ ಜನರಿಗೆ ಮನವರಿಕೆ ಮಾಡಿ

| Published : Sep 14 2025, 01:05 AM IST

ಸಾರಾಂಶ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಡೆಸುವ ಸಮೀಕ್ಷಾ ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕು

ಇದು ಜಾತಿ ಸಮೀಕ್ಷೆಯಲ್ಲ ಎಂದು ಸ್ಪಷ್ಟಪಡಿಸಿ

ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಜಿಪಂ ಸಿಇಒ

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಡೆಸುವ ಸಮೀಕ್ಷಾ ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಸೂಚಿಸಿದರು.

ಜಿಲ್ಲಾಡಳಿತ, ಜಿಪಂ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಳ್ಳಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ನಗರದ ಜಿಪಂ ನಜೀರ್ ಸಾಬ್ ಸಭಾಂಗಣದಲ್ಲಿ ಮಾಸ್ಟರ್ ಟ್ರೇನರ್‌ಗಳಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಸಮೀಕ್ಷೆ ಅಗತ್ಯವಾಗಿದೆ ಎಂದು ಹೇಳಿದ್ದು, ಇದೇ ಸೆ. 22ರಿಂದ ಆರಂಭವಾಗಿ ಅ. 7ರೊಳಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯಲಿದೆ. ಹಾಗಾಗಿ ರಾಜ್ಯ ಹೊರಡಿಸುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲೆಯಲ್ಲಿ ಸಹ ಸಮೀಕ್ಷೆ ಅಚ್ಚುಕಟ್ಟಾಗಿ ನಡೆಸಬೇಕು ಎಂದು ಹೇಳಿದರು.

ದೇಶದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ಸಮೀಕ್ಷಾ ಕಾರ್ಯ ಹಮ್ಮಿಕೊಂಡಿದೆ. ಇದು ಎಲ್ಲ ಆಯಾಮಗಳಲ್ಲಿ ಉಪಯೋಗವಾಗಲಿದೆ. ಇದು ಜಾತಿ ಸಮೀಕ್ಷೆಯಲ್ಲ; ಬದಲಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದೆ. ಈ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು. 65 ಪ್ರಶ್ನೆ ಆ್ಯಪ್‌ ಮೂಲಕ ಸಮೀಕ್ಷೆ ಕಾರ್ಯ ನಡೆಯಲಿದ್ದು, ಸಮೀಕ್ಷೆ ಸಂದರ್ಭದಲ್ಲಿ ಅದರ ಮಾಹಿತಿ ಹೊರತಾಗಿ ಬೇರೆ ಯಾವುದೇ ಮಾಹಿತಿ ಕೇಳಬಾರದು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ತರಬೇತಿ ಪಡೆದ ಮಾಸ್ಟರ್ ಟ್ರೇನರ್‌ಗಳು ತಮ್ಮ ಕೆಳಹಂತದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಸರಿಯಾಗಿ ಮಾರ್ಗದರ್ಶನ ಮಾಡಬೇಕು. ವಾಟ್ಸ್‌ಆ್ಯಪ್‌ ಗುಂಪು ರಚಿಸಬೇಕು. ತಾಂತ್ರಿಕ ದೋಷ ಹಾಗೂ ಇತರ ಗೊಂದಲಗಳಿದ್ದರೆ ಹಿರಿಯ ಅಧಿಕಾರಿಗಳಿಂದ ಕೇಳಿ ತಿಳಿದುಕೊಳ್ಳಬೇಕು. ಯಾವುದೇ ರೀತಿಯ ವ್ಯತ್ಯಾಸವಾಗದಂತೆ ಸಮೀಕ್ಷೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ ಮಾತನಾಡಿ, ರಾಜ್ಯದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಈ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುತ್ತದೆ. 2024ನೇ ಸಾಲಿನಲ್ಲಿ ಜಿಲ್ಲಾ ಸಾಂಖ್ಯಿಕ ಇಲಾಖೆಯ ಪ್ರಕಾರ ಅಂದಾಜು 4,04,000 ಕುಟುಂಬಗಳಿವೆ. ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ 2963 ಗಣತಿದಾರರನ್ನು ನೇಮಕ ಮಾಡಲಾಗಿದೆ. ಇದರಲ್ಲಿ 296 ಮಂದಿಯನ್ನು ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗಿದೆ. ಇದರಲ್ಲಿ 1887 ಪ್ರಾಥಮಿಕ ಶಾಲಾ ಹಂತದ ಶಿಕ್ಷಕರು ಮತ್ತು 472 ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡಿದ್ದಾರೆ. 135 ಮಂದಿ ಸೂಪರ್ ವೈಸರ್‌ಗಳು ಮತ್ತು 63 ಮಾಸ್ಟರ್ ಟ್ರೇನರ್‌ಗಳು ಮೇಲುಸ್ತುವಾರಿಯಾಗಿ ಇರಲಿದ್ದಾರೆ. ಪ್ರತಿ 150 ಮನೆಗಳಿಗೆ ಒಬ್ಬ ಗಣತಿದಾರ, 20 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ ನೇಮಿಸಿ ಸಮೀಕ್ಷೆ ನಡೆಸಬೇಕು. ಯಾವ ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ತರಬೇತಿ ಪಡೆದುಕೊಂಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಶಿವಲಿಂಗಾರೆಡ್ಡಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ವಿಜಯರಂಗಾರೆಡ್ಡಿ, ಗಂಗಾಧರ ಕೆ., ರೇವಣ್ಣ ಸಿದ್ದಪ್ಪ ಅವರು ಸಮೀಕ್ಷಾ ಕಾರ್ಯದ ಕುರಿತು ತರಬೇತಿ ನೀಡಿದರು.

ಜಿಲ್ಲೆಯ ವಿವಿಧ ತಾಲೂಕುಗಳ 63 ಮಾಸ್ಟರ್ ಟ್ರೇನರ್‌ಗಳು ಭಾಗವಹಿಸಿದ್ದರು.