ಸಾರಾಂಶ
ಮುನಿರಾಬಾದ್:
ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಪಾತ್ರ ಬಹಳ ಪ್ರಮುಖವಾದದ್ದು ಎಂದು ಸಂಸದ ರಾಜಶೇಖರ್ ಹಿಟ್ನಾಳ ಹೇಳಿದರು.ಶನಿವಾರ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ 50 ಹಾಗೂ 53ರಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ 50 ಹಾಗೂ 53 ಹಿಟ್ನಾಳ ಸಮೀಪ ಒಂದಾಗಿ ಐದು ಕಿಲೋಮೀಟರ್ ವರೆಗೆ ಒಟ್ಟಾಗಿ ಸಾಗುತ್ತಿದ್ದು, ಇದರಿಂದ ಈ ಭಾಗದಲ್ಲಿ ವಾಹನ ದಟ್ಟಣೆಯು ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಈ ಭಾಗದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 300ಕ್ಕೂ ಅಧಿಕ ಜನ ಯುವಕರು ಸಾವನ್ನಪ್ಪಿದ್ದಾರೆ. ಇದು ಅತ್ಯಂತ ದುರಾದೃಷ್ಟಕರ ಸಂಗತಿ. ಬಹುತೇಕ ಅಪಘಾತಗಳು ಹಿಟ್ ಅಂಡ್ ರನ್ ಕೇಸ್ ಆಗಿದ್ದು ಅಪರಾಧಿಗಳನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ಈಗ ಅತ್ಯಂತ ವಿಶೇಷ ತಂತ್ರಜ್ಞಾನ ಒಳಗೊಂಡ ಸಿಸಿ ಕ್ಯಾಮೆರಾ ಅಳವಡಿಸಿದ್ದು ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಸಹಕಾರಿಯಾಗಲಿದೆ ಎಂದರು.ಸಿಸಿ ಕ್ಯಾಮೆರಾ ಮಂಜೂರು ಮಾಡಿದ ಕೇಂದ್ರ ಸಚಿವ ನಿತಿಶ್ ಗಡ್ಕರಿ ಅವರನ್ನು ಅಭಿನಂದಿಸಿದ ಸಂಸದರು, ಮುಂಬರುವ ದಿನಗಳಲ್ಲಿ ಕೊಪ್ಪಳ ನಗರದಲ್ಲಿ ₹ 2.88 ಕೋಟಿ ವೆಚ್ಚದಲ್ಲಿ 200ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ನಗರಾದ್ಯಂತ ಅಳವಡಿಸಲಾಗುವುದು. ಇದರಿಂದ ನಗರ ಪ್ರದೇಶದಲ್ಲಿ ಅಪರಾಧಗಳ ಪ್ರಮಾಣ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.
ಸಿಸಿ ಕ್ಯಾಮೆರಾ ಕುರಿತು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರವು ರೂಪರೇಷೆ ತಯಾರಿಸಿದ್ದು, ಶೀಘ್ರದಲ್ಲಿ ಅಳವಡಿಕೆ ಕಾರ್ಯ ಆರಂಭವಾಗಲಿದೆ ಎಂದರು.ಎಸ್ಪಿ ಡಾ. ರಾಮ ಆರ್. ಸಿದ್ದಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಪೋಲಿಸ್ ಇಲಾಖೆಗೆ ಆನೆ ಬಲ ಬಂದಂತಾಗಿದೆ. ಅಪರಾಧಿಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಈ ವೇಳೆ ಮಾಜಿ ಸಂಸದ ಕರಡಿ ಸಂಗಣ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ, ಡಿಎಸ್ಪಿ ಮುತ್ತಣ್ಣ, ಸಿಪಿಐ ಸುರೇಶ, ಇನ್‌ಸ್ಪೆಕ್ಟರ್ ಸುನಿಲ್, ಗ್ರಾಪಂ ಅಧ್ಯಕ್ಷ ಅಯ್ಯುಬ್ ಖಾನ್, ಉಪಾಧ್ಯಕ್ಷೆ ಸೌಭಾಗ್ಯ, ಕಲಬುರಗಿ ವಿಭಾಗದ ಜೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷ ಮನೋಹರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಕೊಪ್ಪಳ ತಾಲೂಕು ಅಧ್ಯಕ್ಷ ಬಾಲಚಂದ್ರ, ಹುಲಿಗಮ್ಮ ದೇವಸ್ಥಾನ ಸಮಿತಿ ಸದಸ್ಯರಾದ ವೀರನಗೌಡ, ಈರಣ್ಣ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕ ಹನುಮಂತಪ್ಪ ನಾಯಕ ಸ್ವಾಗತಿಸಿ, ವಂದಿಸಿದರು.