ಕನ್ನಡಪ್ರಭ ವಾರ್ತೆ ಮೈಸೂರುರೈತರ ಸಂಕಷ್ಟದ ನಿವಾರಣೆಗೆ ಸರ್ಕಾರಗಳು ವಿಶೇಷ ಗಮನ ಹರಿಸಬೇಕು ಎಂದು ಮೈಸೂರಿನ ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ ತಮಿಳುನಾಡಿನಿಂದ ಚಾಮರಾಜನಗರ ಮೂಲಕ ಮೈಸೂರಿಗೆ ಬುಧವಾರ ಆಗಮಿಸಿತು.ಈ ವೇಳೆ ಯಾತ್ರೆಯನ್ನು ಸ್ವಾಗತಿಸಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ರೈತರು ದೇಶದ ಬೆನ್ನೆಲುಬು ರೈತರು ಬೆಳೆದ ಆಹಾರವನ್ನು ಸೈನಿಕರು ಉಪಯೋಗಿಸಿಕೊಂಡು ದೇಶ ಕಾಯುತ್ತಾರೆ. ರೈತರು ಸೈನಿಕರು ಎರಡು ಕಣ್ಣುಗಳಿದ್ದಂತೆ. ಹಾಗಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಗಳು ಮುಂದಾಗಬೇಕು ಎಂದು ಆಗ್ರಹಿಸಿದರು.ಪ್ರಾಸ್ತಾವಿಕವಾಗಿ ಮಾತಾಡಿದ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್, ರೈತ ಜಾಗೃತಿ ಯಾತ್ರೆಯ ಉದ್ದೇಶದ ಬಗ್ಗೆ ತಿಳಿಸಿದರು.ಸ್ವಾತಂತ್ರ ಪೂರ್ವದಲ್ಲಿ ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ದೇಶ ಆಳಿದರು. ಈಗ ನಮ್ಮವರಿಂದಲೇ ಅಮೆರಿಕ ಜೊತೆ ವ್ಯಾಪಾರ ಒಪ್ಪಂದ ಮಾಡಿ ರೈತರ ಮರಣ ಶಾಸನ ಬರೆಯುತ್ತಿದ್ದಾರೆ. ದೆಹಲಿ ಗಡಿಯಲ್ಲಿ ಒಂದು ವರ್ಷ ಚಳುವಳಿ ನಡೆಸಿದಾಗ 5 ಸಭೆ 5 ಗಂಟೆಗಳ ಕಾಲ ನಡೆಸಿದ ಕೇಂದ್ರ ಸಚಿವ ಗೋಯಿಲ್ ಅವರು 5 ಕೃಷಿ ಉತ್ಪನ್ನಗಳಿಗೆ ಖಾತರಿಕೊಡುತ್ತೇನೆ ಎಂದು ಹೇಳಿದಾಗ ನಾವು ಒಪ್ಪಲಿಲ್ಲ. ಈ ಬಗ್ಗೆ ಏನು ಮಾಡಲಿಲ್ಲ. ಕಳೆದ ವರ್ಷ ಜಗಜಿತ್ ಸಿಂಗ್ ತಲೆ ವಾಲಾ ಹೋರಾಟ ನಡೆಸಿದಾಗ, ಸರ್ವೋಚ್ಚ ನ್ಯಾಯಾಲಯ ನವಾಬ್ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿ ರೈತರ ಪರವಾಗಿ ವರದಿ ಸಲ್ಲಿಸಿದೆ. ಆದರೂ ಯಾವುದೇ ತೀರ್ಮಾನ ಆಗಿಲ್ಲ ಎಂದರು.ಈಗ 31 ಜನರ ಸಂಸದೀಯ ಸಮಿತಿ ಸರ್ಕಾರಕ್ಕೆ ವರದಿ ಕೊಟ್ಟಿದೆ. ಎಂ.ಎಸ್.ಪಿ ಗ್ಯಾರಂಟಿ ಕಾನೂನು ಅವಶ್ಯವಿದೆ ಎಂದು ವರದಿ ನೀಡಿದೆ. ಆದರೆ ಯಾವುದೇ ತೀರ್ಮಾನ ಆಗಿಲ್ಲ ಎಂದು ಅವರು ದೂರಿದರು.ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಡಾ. ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ವರದಿ 2007ರಲ್ಲಿ ಸಲ್ಲಿಕೆ ಆಯಿತು. 2024 ರಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವ ಭರವಸೆ ನೀಡಿ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದರು. ನಂತರ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಸ್ವತಂತ್ರ ಪೂರ್ವದಲ್ಲಿ ರೈತರು ಚಳುವಳಿ ಮಾಡುವ ಎಚ್ಚರಿಕೆ ನೀಡಿದರೆ, ಬ್ರಿಟಿಷ್ ಆಡಳಿತ ತಕ್ಷಣವೇ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಿತ್ತು. ಆದರೆ ಇಂದಿನ ನಮ್ಮ ಸರ್ಕಾರಗಳು ನಾಟಕೀಯವಾಗಿ ವರ್ತಿಸುತ್ತಿವೆ. ಇದರ ವಿರುದ್ಧ ರೈತರು ನಿಲ್ಲಬೇಕು. ಅದಕ್ಕಾಗಿ ಮಾ. 19ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರೈತರ ಸಮಾವೇಶ ನಡೆಸುವುದಾಗಿ ಅವರು ತಿಳಿಸಿದರು.ಕಳೆದ ಐದು ದಿನಗಳಲ್ಲಿ ಆರಂಭವಾದ ರೈತ ಜಾಗೃತಿ ಯಾತ್ರೆ 40 ದಿನಗಳ ಕಾಲ ದೇಶವನ್ನು ಸುತ್ತಿ ರೈತರ ಸಹಿ ಪಡೆದು ಪ್ರಧಾನಿಗೆ ದೇಶದ ರೈತರ ಸಹಿ ಇರುವ ಪತ್ರ ನೀಡಿ ಒತ್ತಾಯಿಸಲು ರೈತರೆಲ್ಲರು ದೆಹಲಿಗೆ ಬರಬೇಕು ಎಂದು ಅವರು ಹೇಳಿದರುಈ ವೇಳೆ ರೈತ ಮುಖಂಡರಾದ ಹರಿಯಾಣದ ಅಭಿಮನ್ಯು ಕೋಹರ್, ಉತ್ತರ ಪ್ರದೇಶ ನಿತಿನ್ ಬಾಲ್ಯನ, ರಾಜಸ್ಥಾನ್ ಇಂದ್ರಜಿತ್, ಪಲ್ಲಿವಾನ್, ಮಧ್ಯಪ್ರದೇಶದ ಲೀಲಾಧರ್ ರಜಪೂತ್, ಅರುಣ್ ಪಟೇಲ್, ಪಂಜಾಬ್ ಹರ್ಸುಲಿಂದರ್ ಸಿಂಗ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಬಲ್ಲೂರು ರವಿಕುಮಾರ್, ಲಕ್ಷ್ಮೀದೇವಿ ಮೊದಲಾದ ನೂರಾರು ಮಂದಿ ರೈತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ರೈತರ ಸಂಕಷ್ಟ ನಿವಾರಣೆಗೆ ಸರ್ಕಾರಗಳು ಗಮನ ಹರಿಸಲಿ
ದೆಹಲಿ ಗಡಿಯಲ್ಲಿ ಒಂದು ವರ್ಷ ಚಳುವಳಿ ನಡೆಸಿದಾಗ 5 ಸಭೆ 5 ಗಂಟೆಗ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.