ಸಾರಾಂಶ
ಬಾಳೆಹೊನ್ನೂರು, ಮಲಯಾಚಲ ಪರ್ವತ ಶ್ರೇಣಿ ಭದ್ರಾನದಿ ತಟದಲ್ಲಿ ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತವಾದ ವೀರಶೈವ ಪಂಚಪೀಠಗಳಲ್ಲಿ ಪ್ರಥಮ ಪೀಠವಾದ ರಂಭಾಪುರಿ ಸೋಮವಾರ(ಆ.5)ದಿಂದ ನಡೆಯುವ ಶ್ರಾವಣ ಸಂಭ್ರಮಕ್ಕೆ ಸಜ್ಜುಗೊಂಡಿದೆ.
ಶ್ರೀಗಳಿಂದ ಒಂದು ತಿಂಗಳ ಪರ್ಯಂತ ಇಷ್ಟಲಿಂಗ ಪೂಜೆ । ಸೋಮವಾರದಿಂದ ಪೂಜಾ ಸಮಾರಂಭಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಮಲಯಾಚಲ ಪರ್ವತ ಶ್ರೇಣಿ ಭದ್ರಾನದಿ ತಟದಲ್ಲಿ ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತವಾದ ವೀರಶೈವ ಪಂಚಪೀಠಗಳಲ್ಲಿ ಪ್ರಥಮ ಪೀಠವಾದ ರಂಭಾಪುರಿ ಸೋಮವಾರ(ಆ.5)ದಿಂದ ನಡೆಯುವ ಶ್ರಾವಣ ಸಂಭ್ರಮಕ್ಕೆ ಸಜ್ಜುಗೊಂಡಿದೆ. ಈ ಬಾರಿ ಜಗದ್ಗುರುಗಳ ೩೩ನೇ ವರ್ಷದ ಇಷ್ಟಲಿಂಗ ಪೂಜಾನುಷ್ಠಾನ ನಡೆಯಲಿದ್ದು, ಶ್ರಾವಣ ಪರ್ವಕಾಲದಲ್ಲಿ ಲಿಂಗೈಕ್ಯ ಜಗದ್ಗುರು ಶಿವಾನಂದ ಸ್ವಾಮೀಜಿ ಹಾಗೂ ರುದ್ರಮುನಿದೇವ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಆಚರಿಸುವುದು ವಿಶೇಷ.ಅತ್ಯುನ್ನತ ಆದರ್ಶ ಗುರುಪರಂಪರೆ ಹೊಂದಿದ ರಂಭಾಪುರಿ ಇಲ್ಲಿವರೆಗೆ 121 ಜನ ಜಗದ್ಗುರುಗಳನ್ನು ಕಂಡಿದೆ. ಹಿಂದಿನ ಜಗದ್ಗುರು ವೀರಗಂಗಾಧರ ಶಿವಾಚಾರ್ಯರು ಮಾನವ ಧರ್ಮದ ಹರಿಕಾರರಾಗಿ ‘ಮಾನವ ಧರ್ಮಕ್ಕೆ ಜಯವಾಗಲಿ ಧರ್ಮ ದಿಂದಲೇ ವಿಶ್ವಕ್ಕೆ ಶಾಂತಿ’ ಎಂದು ಘೋಷಿಸಿ ಭಾವೈಕ್ಯತೆ ಜ್ಯೋತಿ ಬೆಳಗಿಸಿದರು. ಪ್ರಸ್ತುತ 121ನೇ ಜಗದ್ಗುರು ಭಕ್ತರಿಂದ ನಡೆದಾಡುವ ರೇಣುಕರೆಂದೇ ಕರೆಯಲ್ಪಡುವ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ‘ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ ಶಾಂತಿ ಸಮೃದ್ಧಿ ಸರ್ವರಿಗಾಗಲಿ’ ಎಂಬ ನುಡಿಯನ್ನಾಡಿ ಸಾಹಿತ್ಯ ಪ್ರೇಮಿ ಹಾಗೂ ಸಮಸ್ತ ಭಕ್ತರ ಮನದಲ್ಲಿ ನೆಲೆಯೂರಿದ್ದಾರೆ. ಶ್ರೀಗಳು ವರ್ಷವಿಡೀ ರಾಜ್ಯಾದ್ಯಂತ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಹಗಲಿರುಳೆನ್ನದೆ ಸಂಚರಿಸಿ ರೇಣುಕಾಚಾರ್ಯರ ಆದರ್ಶ ಮೌಲ್ಯ, ಧರ್ಮ ಸಂದೇಶಗಳನ್ನು ಭಕ್ತರಿಗೆ ತಲುಪಿಸುತ್ತಿದ್ದಾರೆ. ಅದಲ್ಲದೇ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಪೀಠದಲ್ಲೇ ವಾಸ್ತವ್ಯ ಹೂಡಿ ಲೋಕಕಲ್ಯಾಣಾರ್ಥ ನಿತ್ಯ ಇಷ್ಟಲಿಂಗ ಪೂಜಾ ತಪೋನುಷ್ಠಾನ ಕೈಗೊಂಡು ಭಕ್ತ ಸಂಕುಲದ ಒಳಿತಿಗೆ ಶ್ರಮಿಸುತ್ತಿದ್ದಾರೆ.ಶ್ರಾವಣ ಧರ್ಮ ಸಮಾರಂಭದಲ್ಲಿ ಧಾರ್ಮಿಕ ಕಾರ್ಯಗಳನ್ನಷ್ಟೇ ಅಲ್ಲದೇ ಸಮಾಜಕ್ಕೆ ಉಪಯೋಗವಾಗುವ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಅವಕ್ಕೂ ಸಹ ಸಾಕಷ್ಟು ಪ್ರೋತ್ಸಾಹ ನೀಡಿ ಕಲೆ, ಸಂಸ್ಕೃತಿ ಉಳಿಸುವಲ್ಲಿ ಮುಂದಾಗಿದ್ದಾರೆ. ಶ್ರಾವಣದಲ್ಲಿ ಪ್ರತಿನಿತ್ಯ ಸಂಜೆ 7ಕ್ಕೆ ರೇಣುಕಾಚಾರ್ಯ ಮಹಾರಾಷ್ಟ್ರದ ಉಟಗಿ ಹಿರೇಮಠದ ಶಿವಪ್ರಸಾದ ಅವರಿಂದ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ನಡೆಯಲಿದೆ. ಪೀಠಕ್ಕೆ ಆಗಮಿಸುವ ಪಟ್ಟಾಧ್ಯಕ್ಷರು, ವಾಗ್ಮಿಗಳಿಂದ ನುಡಿಸೇವೆ ನಡೆಯಲಿದೆ. ಪ್ರತೀ ಸೋಮವಾರ, ಗುರುವಾರ ಜಗದ್ಗುರುಗಳು ಧರ್ಮ ಸಂದೇಶ ಅನುಗ್ರಹಿಸಲಿದ್ದಾರೆ.ಒಟ್ಟಾರೆ ಒಂದು ತಿಂಗಳ ಪರ್ಯಂತ ಲೋಕಕಲ್ಯಾಣಾರ್ಥ ಇಷ್ಟಲಿಂಗ ಪೂಜಾನುಷ್ಠಾನ ನಡೆಸುವ ಶ್ರೀಗಳ ಕಾರ್ಯ ವಿಶೇಷ ವಾಗಿದೆ. ಪ್ರಸ್ತುತ ವರ್ಷದ ಶ್ರಾವಣ ಧರ್ಮ ಸಮಾರಂಭ ಸೆ.೨ರಂದು ಮಹಾ ಮಂಗಲಗೊಳ್ಳಲಿದೆ. ೦೪ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ರಂಭಾಪುರಿಪೀಠದ ವಿಹಂಗಮ ನೋಟ.೦೪ಬಿಹೆಚ್‌ಆರ್ ೪: ಇಷ್ಟಲಿಂಗ ಪೂಜಾನಿರತ ರಂಭಾಪುರಿ ಶ್ರೀ.