ಸಾರಾಂಶ
ಮುನಿರಾಬಾದ್: ಕಾರ್ತಿಕ ಶುಕ್ರವಾರದ ದಿನ ಶ್ರೀ ಹುಲಿಗೆಮ್ಮ ದೇವಿಗೆ ಸುಮಾರು 40 ಟನ್ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ಗಂಗಾವತಿ ವರ್ತಕ ನಾಗರಾಜ ಹೂಗಾರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ವಿಶೇಷ ಹೂವಿನ ಅಲಂಕಾರ ಸೇವೆ ನೆರವೇರಿಸಿದ್ದಾರೆ.
ನಂದಿ ವೃತ್ತದಲ್ಲಿರುವ ಸ್ವಾಗತ ಕಮಾನಿನಿಂದ ದೇವಸ್ಥಾನದ ಗೋಪುರ ಹಾಗೂ ದೇವಸ್ಥಾನದ ಗರ್ಭಗುಡಿ ಮತ್ತು ದೇವಸ್ಥಾನ ಹೂವಿನ ಅಲಂಕಾರದಿಂದ ರಾರಾಜಿಸುತ್ತಿತ್ತು. ಈ ದೃಶ್ಯ ನೋಡಲು ಶುಕ್ರವಾರಕ ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಆಗಮಿಸಿದ್ದರು. ಅಮ್ಮನವರ ದರ್ಶನ ಭಾಗ್ಯ ಪಡೆದು ಹೂವಿನ ಅಲಂಕಾರದ ಮುಂದೆ ಭಕ್ತರು ಸೆಲ್ಫಿ ಮತ್ತು ಪೋಟೋ ತೆಗೆದುಕೊಳ್ಳುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಸೇವೆ ಮಾಡಿಸಿದ ನಾಗರಾಜ ಹೂಗಾರ ಕನ್ನಡಪ್ರಭದೊಂದಿಗೆ ಮಾತನಾಡಿ, ಅನೇಕ ವರ್ಷಗಳಿಂದ ಕಾರ್ತಿಕ ಮಾಸದ ಶುಕ್ರವಾರ ಶ್ರೀ ಹುಲಿಗೆಮ್ಮ ದೇವಿಗೆ ಹೂವಿನ ಅಲಂಕಾರ ಸೇವೆ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಅಮ್ಮವರಿಗೆ ಮಾಡುತ್ತಿರುವ ಹೂವಿನ ಸೇವೆ ಅತ್ಯಭೂತ ಆಗಬೇಕೆನ್ನುವುದು ತಮ್ಮ ಆಸೆ ಆಗಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಅಮ್ಮನವರ ಅಲಂಕಾರಕ್ಕೆ 30ರಿಂದ 40 ಟನ್ ವಿಶೇಷ ಬಗೆಯ ಹೂವುಗಳನ್ನು ಬಳಸಲಾಗಿದೆ. ಸಾವಿಂತಿಗೆ ಹೂವಿನಲ್ಲಿ ಕೆಂಪು ಹಳದಿ ಬಿಳಿ ಹಾಗೂ ಪಿಂಕ್ ,ನೀಲಿ ಬಣ್ಣದ ಹೂವುಗಳನ್ನು ಚೆಂಡು ಹೂವಿನಲ್ಲಿ ಹಳದಿ ಮತ್ತು ಕೆಂಪು ಬಣ್ಣ, ಕಮಲದ ಹೂವು ಮತ್ತು ಹೂಗುಚ್ಚಗಳನ್ನು ಬಳಸಲಾಗಿದೆ ಎಂದರು. ಬೊಕ್ಕೆಗಳನ್ನು ಮತ್ತು ಬಟನ್ ರೋಜ್‌ಗಳನ್ನು ಬೆಂಗಳೂರಿನಿಂದ ತರಿಸಿದರೆ ಇತರ ಹೂವುಗಳನ್ನು ಬಿಜಾಪುರ, ಗದಗ, ತುಮಕೂರು ಹಾಗೂ ಚಿತ್ರದುರ್ಗ ನಗರಗಳಿಂದ ತರಿಸಲಾಗಿದೆ ಎಂದರು.
ಅಮ್ಮನವರ ಸನ್ನಿಧಿಯಲ್ಲಿ ಹೂವಿನ ಅಲಂಕಾರ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. 20 ಜನ ಸಿಬ್ಬಂದಿ ಹಗಲಿರುಳು ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.