ಸಾರಾಂಶ
ಜನದ್ರೋಹಿ ನೀತಿಗಳ ವಿರುದ್ಧ ನವೆಂಬರ್ 26ರಂದು ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಗಂಗಾವತಿ: ಐತಿಹಾಸಿಕ ದೆಹಲಿ ರೈತ ಚಳುವಳಿ ಪೂರೈಸಿ ನವೆಂಬರ್ 26ಕ್ಕೆ ನಾಲ್ಕು ವರ್ಷಗಳಾದರೂ ಲಿಖಿತ ಭರವಸೆ ಈಡೇರಿಸದ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ನೇತೃತ್ವದಲ್ಲಿ ರೈತರು ಶುಕ್ರವಾರ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜನದ್ರೋಹಿ ನೀತಿಗಳ ವಿರುದ್ಧ ನವೆಂಬರ್ 26ರಂದು ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರ ಐತಿಹಾಸಿಕ ರೈತ ಹೋರಾಟದ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಕೊಟ್ಟಿದ್ದ ಭರವಸೆಯಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಮಾಡಬೇಕು. ಸ್ವಾಮಿನಾಥನ್ ವರದಿ ಆಧರಿಸಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಬಿಜೆಪಿ ಸರ್ಕಾರ ಜಾರಿಗೊಳಿಸಿದ ಹೊಸ ಭೂ-ಸುಧಾರಣೆ ತಿದ್ದುಪಡಿ, ಎಪಿಎಂಸಿ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಕನಿಷ್ಠ ₹27 ಸಾವಿರ ವೇತನ ಮತ್ತು ಸಾಮಾಜಿಕ ಭದ್ರತೆ ಖಾತ್ರಿಯಾಗಬೇಕು. ಯುವ ಜನರಿಗೆ ಉದ್ಯೋಗ ಭದ್ರತೆ ನೀಡಬೇಕು ಹಾಗೂ ಜಿ.ಎಸ್.ಟಿ. ಮತ್ತು ಸೆಸ್ ಅನ್ನು ತಗ್ಗಿಸುವ ಮೂಲಕ ಬೆಲೆ ಏರಿಕೆ ತಡೆಯಬೇಕು ಸೇರಿ ರೈತರ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್, ರಮೇಶ ಪಾಟೀಲ್, ಚಿಟ್ಟಿಬಾಬು, ಗಂಗಾವತಿ ತಾಲೂಕಾಧ್ಯಕ್ಷ ವೀರೇಶ ಹಣವಾಳ, ದುರುಗೇಶ ಬರಗೂರ, ಶರಣು ಕುಮಾರ್, ಯಮುನಾ, ಲಕ್ಷ್ಮೀ, ಅಮರೇಶ ಹಣವಾಳ, ಕನಕಗಿರಿ ತಾಲೂಕು ಅಧ್ಯಕ್ಷ ಪಾಮಪ್ಪ ಭಾಗವಹಿಸಿದ್ದರು.