ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರದ ಶೃಂಗೇರಿ ಶಂಕರ ಮಠದ ಶಂಕರ ಸೇವಾ ಸಮಿತಿ ತನ್ನ ಸಂಪ್ರದಾಯದಂತೆ ಭಾನುವಾರ ನಗರದಲ್ಲಿ ನಾದ ವೇದ ಭಜನಾ ತಂಡಗಳೊಂದಿಗೆ ಸಾಲಂಕೃತ ಶಂಕರಾಚಾರ್ಯರ ಭವ್ಯ ಪುತ್ಥಳಿಯೊಂದಿಗೆ ರಥೋತ್ಸವ ಅದ್ಧೂರಿಯಿಂದ ನಡೆಯಿತು.ನಗರದ ಶೃಂಗೇರಿ ಶಂಕರ ಮಠ ಹಾಗೂ ಶಂಕರಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ೮-೧೫ಕ್ಕೆ ಶಂಕರ ಭಗವಾತ್ಪಾದರ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಿದ ಪಲ್ಲಕ್ಕಿಯೊಂದಿಗೆ ಅಲಂಕರಿಸಿದ ರಥದಲ್ಲಿ ಕುಳ್ಳರಿಸಿ ನಗರದ ಮುಖ್ಯಬೀದಿಗಳಲ್ಲಿ ನಗರ ಸಂಕೀರ್ತನೆಯೊಂದಿಗೆ ಮೆರವಣಿಗೆ ನಡೆಸಲಾಯಿತು.ವೇದಘೋಷ ನಡುವೆ ರಥೋತ್ಸವ
ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಸಾಗಿ ಬಂದಿದ್ದು, ಮಾರ್ಗದುದ್ದಕ್ಕೂ ನೂರಾರು ಮಂದಿಯ ವೇದಘೋಷ, ಶಂಕರರಿಗೆ ಜೈಕಾರ ಘೋಷಣೆಗಳೊಂದಿಗೆ ರಥೋತ್ಸವ ಸಾಗಿ ಬಂತು. ಮೆರವಣಿಗೆ ನಗರದ ಕಾಲೇಜು ವೃತ್ತ, ಬ್ರಾಹ್ಮಣರ ಬೀದಿ, ದೊಡ್ಡಪೇಟೆ , ಕಾಳಮ್ಮ ಗುಡಿ ರಸ್ತೆ ಮೂಲಕ ರಥ ನಗರದಲ್ಲಿ ಸಂಚರಿಸಿ ಶಂಕರಮಠವನ್ನು ಸೇರಿತು.ನಾದ, ವೇದಘೋಷ, ಭಜನೆ, ತಾಳಗಳೊಂದಿಗೆ ಮೆರವಣಿಗೆಯಲ್ಲಿ ನಗರದ ನೂರಾರು ವಿಪ್ರ ಬಾಂಧವರು ಭಾಗವಹಿಸಿದ್ದು, ಶಂಕರರ ಪಲ್ಲಕ್ಕಿಗೆ ದಾರಿಯುದ್ದಕ್ಕೂ ಜನತೆ ಪೂಜೆ ಸಲ್ಲಿಸಿದರು. ಮಹಿಳಾ ಮಂಡಳಿ ಮತ್ತು ಶಂಕರ ಸೇವಾ ಸಮಿತಿ ವತಿಯಿಂದ ಸಹಯೋಗದಲ್ಲಿ ಸಾಮೂಹಿಕ ಶಂಕರ ಸ್ತೋತ್ರ ಗಾಯನ, ಅನ್ನದಾಸೋಹ ಏರ್ಪಡಿಸಲಾಗಿತ್ತು. ನಂತರ ರಂಗಮಂದಿರದಲ್ಲಿ ನಡೆದ ಜಿಲ್ಲಾಡಳಿತದ ದಾರ್ಶನಿಕರ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ಪಲ್ಲಕ್ಕಿ ಕೋಟೆಯ ಶೃಂಗೇರಿ ಶಂಕರಮಠ ತಲುಪಿತು.
ಛದ್ಮವೇಷಧಾರಿ ಸ್ಪರ್ಧೆಶಂಕರ ಮಠದಲ್ಲಿ ಶಂಕರ ಜಯಂತಿ ಅಂಗವಾಗಿ ಆಯೋಜಿಸಿದ್ದ ಶಂಕರಾಚಾರ್ಯರು ಹಾಗೂ ಶಾರದಾಮಾತೆಯ ಛದ್ಮವೇಷಧಾರಿ ಸ್ವರ್ಧೆಯಲ್ಲಿ ಅನೇಕ ಮಕ್ಕಳು ವೇಷ ಧರಿಸಿ ಪಾಲ್ಗೊಂಡು ಗಮನ ಸೆಳೆದರು.ನಂತರ ಶಂಕರಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಠದ ಧರ್ಮಾಧಿಕಾರಿ ಜೆ.ಎನ್. ರಾಮಕೃಷ್ಣ ಮಾತನಾಡಿ, ಶ್ರೀಮಠದಲ್ಲಿ ಶ್ರೀಶಂಕರ ಜಯಂತಿ ಶುಭಾರಂಭಗೊಂಡ ಸಂದರ್ಭದಲ್ಲಿ ಬಂದಿದ್ದ ಭಕ್ತಾದಿಗಳನ್ನು ಗುರುಸೇವೆಗೆ ಸ್ವಾಗತಿಸುತ್ತಾ, ಇಂದು ನಮ್ಮತನ ಉಳಿದಿದ್ದರೆ ಅದು ಶ್ರೀಶಂಕರರ ಕೃಪೆಯಿಂದಲೆ ಎಂದು ತಿಳಿಸಿದರು.ಮಠದಲ್ಲಿ ಪೂಜಾ ಕೈಂಕರ್ಯ
ಶಂಕರಮಠದಲ್ಲಿ ಗುರುಗಳಿಗೆ ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ವೇದಬ್ರಹ್ಮ ಅಪ್ಪಣ್ಣ ಶಾಸ್ತ್ರಿಗಳು ಹಾಗೂ ಸುರೇಶ್ ನಡೆಸಿಕೊಟ್ಟರು. ಮೆರವಣಿಗೆಯಲ್ಲಿ ಶಂಕರ ಸೇವಾ ಸಮಿತಿಯ ಅಧ್ಯಕ್ಷ ಡಾ.ಜಯರಾಂ, ಕಾರ್ಯಾಧ್ಯಕ್ಷ ವಿಷ್ಣು, ಧರ್ಮಾಧಿಕಾರಿ ಜೆ.ಎನ್. ರಾಮಕೃಷ್ಣ, ಖಜಾಂಚಿ ಮುರಳಿ ಸುಂದರ್, ಪದಾಧಿಕಾರಿಗಳಾದ ವರುಣ್, ಶಿವಶಂಕರ್, ಉದಯಕುಮಾರ್, ಹಾಬಿ ರಮೇಶ್, ಪಿ. ಚಂದ್ರಪ್ರಕಾಶ್, ರಾಘವೇಂದ್ರ,ಉಮೇಶ್, ಪ್ರಸಾದ್, ರೇಖಾ,ಸಂಸ್ಕೃತ ಪಾಠಶಾಲೆಯ ಗುರುಗಳಾದ ರಾಮಕೃಷ್ಣಭಟ್ಟರು ಭಾಗವಹಿಸಿದ್ದರು.