ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಸರ್ಕಾರದ ನಿಯಮನುಸಾರ ಅರಣ್ಯ ಕೃಷಿ ಕ್ಷೇತ್ರದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದ್ದು, ಕ್ಷುಲ್ಲಕ ಕಾರಣಕ್ಕೆ ಕೆಲ ಸ್ಥಳೀಯರು ತೋಟಕ್ಕೆ ನುಗ್ಗಿ ಸಾವಿರಾರು ಮೌಲ್ಯದ ಕೊಳವೆಬಾವಿ, ಪಂಪ್‌ಸೆಟ್ ನಾಶಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ದಾಖಲೆ ನೀಡಿ ತಿರುಮಣಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ನಾಲೈದು ದಿನವಾದರೂ ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮವಹಿಸುತ್ತಿಲ್ಲ ಎಂದು ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಅಪ್ಪಾಜಿಹಳ್ಳಿ ಕೃಷಿ ಅರಣ್ಯ ಕ್ಷೇತ್ರದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಪ್ಪ ಆರೋಪಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದ ಬೆಳೆಬಾರದ ಬರಡು ಪ್ರದೇಶದಲ್ಲಿ ಅರಣ್ಯ ಕೃಷಿ ಅಭಿವೃದ್ದಿಪಡಿಸಲಾಗಿದೆ. ನಿಯಮನುಸಾರ ರೈತರಿಂದ ಖರೀದಿಸಿ ನೋಂದಣಿ ಮಾಡಿಕೊಂಡಿದ್ದ 250 ಎಕರೆ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶ್ರೀಗಂಧ, ಹೆಬ್ಬೇವು, ತೇಗ, ಸಿಲ್ವರ್ ಸೇರಿ 5 ಲಕ್ಷಕ್ಕಿಂತ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಗಿದೆ. ಈ ಕೃಷಿ ಅಭಿವೃದ್ಧಿಗೆ ಈ ಭಾಗದ ಸುಮಾರು 250 ಮಂದಿ ಕಾರ್ಮಿಕರಿಗೆ ಕೆಲಸ ನೀಡಿದ್ದೇವೆ ಎಂದರು.
ಅರಣ್ಯ ಕೃಷಿ ತೋಟದ ಗಿಡಗಳಿಗೆ ನೀರು ಹಾಯಿಸಲು ಸ್ಥಳೀಯ ರೈತರಿಂದ ಟ್ರಾಕ್ಟರ್, ಜೆಸಿಬಿ ಪಡೆದು ಪ್ರತಿ ತಿಂಗಳು ಬಾಡಿಗೆ ನೀಡಲಾಗುತ್ತಿದೆ. ಕೃಷಿಗೆ ಟ್ರಾಕ್ಟರ್ ಬಾಡಿಗೆ ಪಡೆದಿಲ್ಲ ಎಂದು ಕೆಲ ಸ್ಥಳೀಯರು ತೋಟಕ್ಕೆ ಬಂದು ಹಿಂಸೆ ನೀಡುತ್ತಿದ್ದಾರೆ. ಕೆಲ ಸ್ಥಳೀಯರು ಮೇ 6ರಂದು ಅರಣ್ಯ ಕೃಷಿಯ ಶ್ರೀಗಂಧದ ತೋಟಕ್ಕೆ ನುಗ್ಗಿ ತೋಟ ಸಿಬ್ಬಂದಿಯ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಿದರು.ಅರಣ್ಯ ಪ್ರದೇಶದ ಪಂಪ್‌ಸೆಟ್‌ನಿಂದ ಟ್ಯಾಂಕ್‌ಗೆ ಸರಬರಾಜು ಮಾಡುವ ಮೋಟಾರ್, ಪೈಪ್ ದ್ವಂಸ ಮಾಡಿ ನಾಪತ್ತೆಯಾಗಿದ್ದಾರೆ. ಇದರಿಂದ 50 ಸಾವಿರ ಬೆಲೆಯ ಪಂಪ್‌ಸೆಟ್ ಸಾಮಗ್ರಿ, ಪೈಪ್ ನಾಶವಾಗಿವೆ. ಕಳೆದ ವಾರದಿಂದ ನೀರಿಲ್ಲದೇ ಸಾವಿರಾರು ಬೆಲೆಬಾಳುವ ಗಿಡಗಳು ಒಣಗುವ ಹಂತದಲ್ಲಿವೆ ಎಂದರು.
ಮುಖಂಡರಾದ ಜಯರಾಮರೆಡ್ಡಿ, ಶ್ರೀನಿವಾಸ್‌ರೆಡ್ಡಿ ಮನೋಹರ್ ರಾಮು, ಗೋಪಾಲರೆಡ್ಡಿ, ರಾಮಾಂಜಿನಪ್ಪ ವಂಶಿ, ನಾಗರಾಜ್ ಗುರುಮೂರ್ತಿ, ರಾಮಕೃಷ್ಣಪ್ಪ, ಶ್ರೀಗಂಧ ತೋಟ ನಿರ್ವಹಣೆಯ ವ್ಯವಸ್ಥಾಪಕ ಲಿಂಗೇಶ್ ಇದ್ದರು.ತಾಲೂಕಿನ ಅಪ್ಪಾಜಿಹಳ್ಳಿಯ ಶ್ರೀಗಂಧ ಕೃಷಿ ಅರಣ್ಯ ಕ್ಷೇತ್ರದಲ್ಲಿ ಪಂಪ್‌ಸೆಟ್ ನಾಶದ ವಿಚಾರವಾಗಿ ಅಲ್ಲಿನ ವ್ಯವಸ್ಥಾಪಕ ಕೃಷ್ಣಪ್ಪ ದೂರು ಸಲ್ಲಿಸಿದ್ದು, ಈ ವಿಚಾರಕ್ಕೆ ಸಂಬಂಧಪಟ್ಟಂತೆ ದೂರಿನಲ್ಲಿರುವ ಆರೋಪಿಗಳನ್ನು ಠಾಣೆಗೆ ಕರೆಸಲಾಗಿತ್ತು. ಆ ವೇಳೆ ದೂರದಾರ ಕೃಷ್ಣಪ್ಪಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಹೀಗಾಗಿ ಈ ದೂರಿನ ವಿಚಾರ ಠಾಣೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
-ರಾಮಾಂಜಿನಪ್ಪ, ಎಎಸ್‌ಐ, ತಿರುಮಣಿ ಪೊಲೀಸ್ ಠಾಣೆಇಲ್ಲಿನ ಕೃಷಿ ಅರಣ್ಯ ತೋಟದಲ್ಲಿ ಈ ಭಾಗದ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಜೀವನಕ್ಕಾಗಿ ವಲಸೆ ಹೋಗುವುದನ್ನ ತಪ್ಪಿಸಿದ್ದಾರೆ. ಇಲ್ಲಿನ ಕೃಷಿ ತೋಟಗಾರಿಕೆ ಕೂಲಿಕಾರರಿಗೆ ವರದಾನವಾಗಿದೆ. ಕ್ಷುಲಕ ಕಾರಣದಿಂದ ಮೂರು ಜನ ಸ್ಥಳೀಯರು ತೋಟಕ್ಕೆ ನುಗ್ಗಿ ಪಂಪ್‌ಸೆಟ್ ಸಾಮಗ್ರಿ ದ್ವಂಸ ಮಾಡಿದ್ದಾರೆ.
-ನಾಗರಾಜ್, ಕೃಷಿ ಅರಣ್ಯ ಪ್ರದೇಶದ ರಕ್ಷಣಾ ಸಿಬ್ಬಂದಿ.ಕೃಷಿ ಅರಣ್ಯ ತೋಟದಿಂದ ಈ ಭಾಗದ ರೈತರು ಮತ್ತು ಕೂಲಿಕಾರರಿಗೆ ಅನುಕೂಲವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೆಲವರು ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮವಹಿಸುವಂತೆ ಒತ್ತಾಯಿಸಿದರು.
-ಶ್ರೀನಿವಾಸ್, ಮುಖಂಡ