ಸಾರಾಂಶ
ಮಂಡಲ್ ವರದಿ ಬಂದಾಗ ಕಮಂಡಲ ರಥಯಾತ್ರೆ ನಡೆಸಿದರು. ಈಗ ರಾಮಮಂದಿರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕುರಿ ಕಾಯುವವನ ಮಗ ಸಿಎಂ ಆದನಲ್ಲ ಎಂದು ನನ್ನನ್ನು ವಿರೋಧಿಸುತ್ತಿದ್ದಾರೆ ಎಂದು ಶೋಷಿತರ ಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಮೊದಲಿನಿಂದಲೂ ಮೀಸಲಾತಿಯ ವಿರೋಧಿಗಳು. ಆದರೆ, ಕಾಂಗ್ರೆಸ್ ಯಾವತ್ತೂ ಶೋಷಿತರ, ದಲಿತರ ಪರ ನಿಂತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಭಾನುವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಶೋಷಿತರ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಮಂಡಲ್ ವರದಿ ಜಾರಿಯಾದಾಗ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಪರ್ಯಾಯವಾಗಿ ಕಮಂಡಲ ರಥಯಾತ್ರೆ ನಡೆಸಿದರು. ಈಗ ಶ್ರೀರಾಮಮಂದಿರದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕುರಿ ಕಾಯುವವನ ಮಗ ಸಿಎಂ ಆಗಿಬಿಟ್ಟನಲ್ಲ ಎಂದು ನನ್ನನ್ನು ಕೆಲವರು ವಿರೋಧಿಸುತ್ತಲೇ ಇದ್ದಾರೆ. ದಲಿತ, ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತ ಬಡವರಿಗೆ ಆರ್ಥಿಕ, ಸಾಮಾಜಿಕ ನ್ಯಾಯ ಕೊಡುತ್ತೇನೆ ಎಂಬ ಉದ್ದೇಶದಿಂದಲೂ ನನ್ನನ್ನು ವಿರೋಧಿಸುವವರಿದ್ದಾರೆ. ಇಂದಿನ ಸಾಮಾಜಿಕ ವ್ಯವಸ್ಥೆ ನೋಡಿದರೆ, ಇನ್ನೂ ಇಂತಹ ಶೋಷಿತರ ಸಮಾವೇಶಗಳು ನಡೆಯಬೇಕು ಎಂಬುದು ನನ್ನ ಅಪೇಕ್ಷೆ. ಬಲಾಢ್ಯರ ಕೈಯಲ್ಲಿ ಅಧಿಕಾರ ಇದ್ದರೆ ಶೋಷಿತರಿಗೆ ಎಂದಿಗೂ ಮಾರಕ. ಜಾತಿ ವ್ಯವಸ್ಥೆಯನ್ನು ಸಮಾಜದಿಂದ ತೊಲಗಿಸಬೇಕು ಎಂದು ಹೇಳಿದರು.ಬಿಜೆಪಿ, ಆರ್‌ಎಸ್‌ಎಸ್ ನವರು ಧರ್ಮ, ದೇವರು, ಜಾತಿ ಹೆಸರಲ್ಲಿ ಸಮಾಜವನ್ನು ಒಡೆದು ಛಿದ್ರ ಮಾಡಿದ್ದಾರೆ. ದೇವಸ್ಥಾನಕ್ಕೆ ದಲಿತರಿಗೆ ಬರಬೇಡಿ ಎಂದವರು ಯಾರು?. ಕನಕದಾಸರು ಉಡುಪಿ ಕೃಷ್ಣ ದೇವಸ್ಥಾನಕ್ಕೆ ಹೋದಾಗ ಪ್ರವೇಶ ನಿರಾಕರಿಸಿದ್ಯಾರು?, ಇತಿಹಾಸ ಗೊತ್ತಿಲ್ಲದವರು ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದರು.
ಸಂವಿಧಾನವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಈಶ್ವರಪ್ಪ, ಸಿಟಿ ರವಿ, ಅಶೋಕ, ನಾವೆಲ್ಲ ಅಸೆಂಬ್ಲಿಗೆ ಹೋಗಿರುವುದಕ್ಕೆ ಸಂವಿಧಾನ ಕಾರಣ. ಸಂವಿಧಾನ ಇಲ್ಲದೆ ಹೋಗಿದ್ದರೆ ಈಶ್ವರಪ್ಪ ಕುರಿ ಕಾಯಬೇಕಿತ್ತು. ಅಶೋಕ, ಸಿಟಿ ರವಿ ಜಮೀನು ಊಳಬೇಕಿತ್ತು. ಕರ್ನಾಟಕದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಜಾತಿ ಮತ್ತು ಧರ್ಮದ ಮೇಲೆ ವಿಂಗಡಿಸಿದ್ದಲ್ಲ. ಬಸ್ ಪಾಸ್ ಕೊಟ್ಟಿದ್ದೇವೆ, ಉಚಿತ ಕರೆಂಟ್ ಕೊಟ್ಟಿದ್ದೇವೆ, ಅನ್ನಭಾಗ್ಯ ಕೊಟ್ಟಿದ್ದೇವೆ. ಇದು ಎಲ್ಲರಿಗೂ ನೀಡಿರುವ ಸವಲತ್ತು. ಆರ್‌ಎಸ್‌ಎಸ್, ಬಿಜೆಪಿಯವರು ಯಾವಾಗಾದ್ರೂ ಇಂತಹ ಯೋಜನೆ ಕೊಟ್ಟಿದ್ದಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.