ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ: ವಿಜಯೇಂದ್ರ

| Published : Jan 29 2024, 01:30 AM IST

ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ: ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ಆ ಪಕ್ಷಕ್ಕೆ ತಕ್ಕ ಉತ್ತರ ಕೊಡುವುದು, ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಕೆಲಸ ಕರ್ನಾಟಕದಿಂದ ಆಗಬೇಕಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ಕಾಂಗ್ರೆಸ್ ಪಕ್ಷ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ಆ ಪಕ್ಷಕ್ಕೆ ತಕ್ಕ ಉತ್ತರ ಕೊಡುವುದು, ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಕೆಲಸ ಕರ್ನಾಟಕದಿಂದ ಆಗಬೇಕಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಅತ್ಯಂತ ಉಸ್ತುಕತೆಯಿಂದ ಈ ಕ್ಷಣದಿಂದ ಕಾರ್ಯ ಪ್ರವರ್ತರಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾರ್ಯಕರ್ತರಿಗೆ ತಿಳಿಸಿದರು.

ನಗರದ ಸಿಪಿಎಸ್ (ಸೆಂಟರ್ ಪ್ರೈಮರಿ ಸ್ಕೂಲ್) ಶಾಲಾ ಮೈದಾನದಲ್ಲಿ ಬಿಜೆಪಿ ಪಕ್ಷದಿಂದ ನಡೆದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಭೀಕರ ಬಲಗಾಲ ಆವರಿಸಿ 223 ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಆದರೆ, ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡುವ ಬದಲು ಕೇಂದ್ರದ ಕಡೆ ಬೆರಳು ಮಾಡಿ ತೋರಿಸುತ್ತಿದೆ. ಅಲ್ಲದೆ ಚುನಾವಣೆಯಲ್ಲಿ ಗೆದ್ದರೆ 10 ಕೆಜಿ ಅಕ್ಕಿ ಪ್ರತಿ ವ್ಯಕ್ತಿಗೆ ನೀಡುವ ಭರವಸೆ ನೀಡಿತ್ತು. ಈಗ ಭರವಸೆ ಏನಾಗಿದೆ, ನರೇಂದ್ರ ಮೋದಿಯವರು ಕೊಡುತ್ತಿರುವ ಅಕ್ಕಿಯನ್ನೇ ನಮ್ಮದು ಎಂದು ಸುಳ್ಳು ಹೇಳುತ್ತಿವೆ. ಅಧಿಕಾರದ ಸೊಕ್ಕಿನ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದರು.

ಪ್ರತಿಯೊಂದು ಚುನಾವಣೆಯಲ್ಲಿ ಕೂಡ ವಿವಿಧ ರೀತಿಯ ಸವಾಲುಗಳಿರುತ್ತವೆ. ಆ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಸಾಧನೆ ಮಾಡಲು ನಮ್ಮ ಎದುರಾಳಿಗೆ ತಕ್ಕ ಉತ್ತರ ನೀಡಲು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಬೋಗಸ್ ಗ್ಯಾರಂಟಿಗಳಿಂದ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರಬಹುದು. ಆದರೆ, ಅದೇ ಬೋಗಸ್ ಗ್ಯಾರಂಟಿ ಹೆಸರಲ್ಲಿ ರಾಜ್ಯಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಘಡದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳಿಗಿಂತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ ದೇಶ ಒಪ್ಪಿಕೊಂಡಿದೆ ಎಂದರು.

ಹುಬ್ಬಳ್ಳಿ ಮತ್ತು ಮಂಡ್ಯ ಜಿಲ್ಲೆಯ ಕೆರೆಗೋಡು ಸೇರಿದಂತೆ ಅನೇಕ ಕಡೆಗಳಲ್ಲಿ ರಾಮ ಭಕ್ತರ ಮೇಲೆ ಹಲ್ಲೆಗೆ ಪ್ರಚೋದನೆ ನೀಡುತ್ತಿದೆ. ಕರ್ನಾಟಕ ರಾಜ್ಯ ಶಾಂತಯುತವಾಗಿದೆ. ರಾಮನಗರ ಮೇಲೆ ಹಲ್ಲೆ, ಅವಮಾನವನ್ನು ಬಿಜೆಪಿ ಎಂದು ಸಹಿಸುವುದಿಲ್ಲ. ರೈತ ವಿರೋಧಿ, ಕಾರ್ಮಿಕ ವಿರೋಧಿ, ಮಹಿಳಾ ವಿರೋಧಿ ಹಾಗೂ ಭ್ರಷ್ಟ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡುತ್ತೇವೆ ಎಂದರು.

ರಾಜ್ಯದ ಕಾರ್ಯಕರ್ತರ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸಬೇಕಿದೆ. ದೇಶ ಕಾಯುವ ಯೂದರಂತೆ ನಮ್ಮ ಕಾರ್ಯಕರ್ತರು ಸದಾ ಕೈ ಕಾರ್ಯ ಪ್ರವೃತ್ತರಾಗುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಇದೆ ಎಂದು ತೋರಿಸಿ ಕೊಡಬೇಕಾಗಿದೆ ಎಂದರು.

ಪಕ್ಷದ ಸಂಘಟನೆಗೆ ನವಚೈತನ್ಯ ನೀಡಿ: ವಿಶ್ವಾಸದ ರಾಜಕಾರಣ ಮಾಡಬೇಕು ಹಾಗೂ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಿದೆ. ಯುವಕರ ಭಾವನೆಗೆ ಹೊಸ ದಿಕ್ಕು ಕೊಡಬೇಕು. ಹೊಸತನ ಬರಬೇಕು ಹಾಗೂ ಹಿರಿಯರು ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಪಕ್ಷದ ಯಾವೊಬ್ಬ ಕಾರ್ಯಕರ್ತರನ್ನು ಕಡೆಗಣಿಸದೆ ಪ್ರತಿಯೊಬ್ಬರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಪಕ್ಷದ ಸಂಘಟನೆಗೆ ನವ ಚೈತನ್ಯ ತುಂಬಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಶಾಸಕ ಬಸವರಾಜ ಮತ್ತಿಮೂಡ್, ಸಚಿವ ಮಾಲಿಕಯ್ಯ ಗುತ್ತೇದಾರ್, ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ರಾಜ್ಯ ಉಪಾಧ್ಯಕ್ಷ ಲಲಿತಾ ಅನಪೂರ, ರಾಜ್ಯ ಕಾರ್ಯದರ್ಶಿ ಶರಣು ತಳಕೇರಿ, ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ, ಚಂದ್ರಶೇಖರ್, ಬಿಜೆಪಿ ನಾಯಕಿ ನಾಗರತ್ನಾ ಕುಪ್ಪಿ, ಸುರೇಶ್ ಅಂಬಿಗೇರ್, ಗುರು ಕಾಮಾ, ಬಸವರಾಜ್ ವಿಭೂತಿಹಳ್ಳಿ, ಡಾ. ಚಂದ್ರಶೇಖರ್ ಸುಬೇದಾರ, ರಾಜುಗೌಡ ಉಕ್ಕಿನಾಳ, ದೇವೇಂದ್ರ ಕೊನೇರ ಸೇರಿದಂತೆ ಆರು ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಇದ್ದರು.