ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಗೆ ‘ಯಶಸ್ಸು’ಕೈಪಿಡಿ

| Published : Jan 29 2024, 01:30 AM IST

ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಗೆ ‘ಯಶಸ್ಸು’ಕೈಪಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಪೂರ್ಣ ಫಲಿತಾಂಶದೆಡೆಗೆ ನಮ್ಮ ನಡೆ ಎಂಬ ಆಶಯದೊಂದಿಗೆ ಪರಿಣಿತ ಶಿಕ್ಷಕರನ್ನು ಒಳಗೊಂಡ ತಂಡ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಶ್ನೋತ್ತರಗಳನ್ನು ಒಳಗೊಂಡ ವಿಷಯವಾರು ‘ಯಶಸ್ಸು’ ಕೈಪಿಡಿಯನ್ನು ಸಿದ್ಧಪಡಿಸಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆ । ಫಲಿತಾಂಶ ಉತ್ತಮೀಕರಣಕ್ಕಾಗಿ ಪ್ರಶ್ನೋತ್ತರ ಮಾಲಿಕೆ

20 ಅಂಶಗಳ ಕಾರ್ಯಕ್ರಮದ ಜೊತೆಗೆ ಕೈಪಿಡಿಯೂ ರೆಡಿ

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ 20 ಅಂಶಗಳ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದಿರುವ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಇದೀಗ ವಿದ್ಯಾರ್ಥಿಗಳ ಪರೀಕ್ಷೆ ತಯಾರಿಗೆ ಅನುಕೂಲವಾಗುವಂತೆ ‘ಯಶಸ್ಸು’ ಎಂಬ ವಿಶೇಷ ಕೈಪಿಡಿ ಹೊರ ತಂದಿದೆ.

ಪರಿಪೂರ್ಣ ಫಲಿತಾಂಶದೆಡೆಗೆ ನಮ್ಮ ನಡೆ ಎಂಬ ಆಶಯದೊಂದಿಗೆ ಪರಿಣಿತ ಶಿಕ್ಷಕರನ್ನು ಒಳಗೊಂಡ ತಂಡ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಶ್ನೋತ್ತರಗಳನ್ನು ಒಳಗೊಂಡ ವಿಷಯವಾರು ‘ಯಶಸ್ಸು’ ಕೈಪಿಡಿಯನ್ನು ಸಿದ್ಧಪಡಿಸಿದೆ. ಪ್ರತಿಯೊಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೂ ಈ ಕೈಪಿಡಿಗಳನ್ನು ವಿತರಿಸಲು ಇಲಾಖೆ ತಯಾರಿ ಮಾಡಿಕೊಂಡಿದೆ.

2019ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಮನಗರ ಜಿಲ್ಲೆ ರಾಜ್ಯಕ್ಕೆ 2ನೇ ಸ್ಥಾನದಲ್ಲಿತ್ತು. 2023ರಲ್ಲಿ 21ನೇ ಸ್ಥಾನಕ್ಕೆ ಕುಸಿಯಿತು. ಈ ಬಾರಿ ಫಲಿತಾಂಶದಲ್ಲಿ ಸುಧಾರಣೆ ತರಲು ಶಾಲಾ ಶಿಕ್ಷಣ ಇಲಾಖೆ 20 ಅಂಶಗಳ ಕಾರ್ಯಕ್ರಮ ರೂಪಿಸಿದ್ದು, ಜಿಲ್ಲೆಯ ಸರ್ಕಾರಿ , ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅದನ್ನು ಅಳವಡಿಸಿಕೊಳ್ಳುವಂತೆ ಮಾಡಿತು.

2023-24ನೇ ಸಾಲಿನಲ್ಲಿ ಜಿಲ್ಲೆಯಿಂದ ಒಟ್ಟು 13,824 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ರಾಜ್ಯದಲ್ಲಿ ಟಾಪ್ 10ರೊಳಗೆ ರಾಮನಗರ ಜಿಲ್ಲೆಯ ಫಲಿತಾಂಶ ತರಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಅದರ ಮುಂದುವರೆದ ಭಾಗವಾಗಿ ‘ಯಶಸ್ಸು’ ಕೈಪಿಡಿ ಕೂಡ ಒಂದಾಗಿದೆ.

ವಿಷಯವಾರು ತಜ್ಞರು ತಯಾರಿಸಿರುವ ಕನಿಷ್ಠ 100ರಿಂದ 150 ಪುಟಗಳಷ್ಟಿರುವ ಕೈಪಿಡಿಯು ಪಠ್ಯಕ್ಕೆ ಸಂಬಂಧಿಸಿದ ಮುಖ್ಯ ವಿಷಯಗಳನ್ನು ಒಳಗೊಂಡಿದೆ. ಮಕ್ಕಳು ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಇದನ್ನು ಅಧ್ಯಯನ ಮಾಡಿದರೆ ಸಾಕು. ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಬಹುದು.

9 ಸಾವಿರ ವಿದ್ಯಾರ್ಥಿಗಳಿಗೆ ಕೈಪಿಡಿ ವಿತರಣೆ:

ಪರೀಕ್ಷಾ ಸಿದ್ಧತೆಗಾಗಿ ಸಿದ್ಧಪಡಿಸಿರುವ ಕೈಪಿಡಿಯನ್ನು ಜಿಲ್ಲೆಯ 5 ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಲಕ, ಸುಮಾರು 9 ಸಾವಿರ ವಿದ್ಯಾರ್ಥಿಗಳಿಗೆ ವಿತರಿಸಲು ಇಲಾಖೆಯು ತಯಾರಿ ಮಾಡಿಕೊಂಡಿದೆ.

ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಇದರಲ್ಲಿ ಗಳಿಸುವ ಅಂಕ ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರೀಕ್ಷಾ ಅಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡಲಾಗಿದೆ.

ಈ ಹಿಂದೆಯೂ ವಿದ್ಯಾರ್ಥಿಗಳಿಗೆ ಯಶಸ್ಸು ಕೈಪಿಡಿ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶಾಲೆಗಳ ದತ್ತು, ಸ್ಮಾರ್ಟ್ ಕ್ಲಾಸ್. ಹೀಗೆ ವಿವಿಧ ಬಗೆಯ ಫಲಿತಾಂಶ ಸುಧಾರಣಾ ಕ್ರಮಗಳನ್ನು ಇಲಾಖೆ ಹಮ್ಮಿಕೊಂಡು ಯಶಸ್ಸು ಸಾಧಿಸಿದೆ. ಅಂತಹದೇ ಪ್ರಯತ್ನ ಈ ವರ್ಷವೂ ನಡೆದಿದ್ದು, ಖಂಡಿತ ಯಶಸ್ಸು ಸಿಗಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

------------------------------------

ಬಾಕ್ಸ್ .......

ಕಾರ್ಪೊರೇಟ್ ಕಂಪನಿಗಳಿಂದ ಮುದ್ರಣ ಸೇವೆ

ಶಾಲಾ ಶಿಕ್ಷಣ ಇಲಾಖೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಧಾರಣೆ ಪ್ರಯತ್ನಕ್ಕೆ ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಫೋರ್ಜ್ ಪ್ರೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಕೈ ಜೋಡಿಸಿವೆ. ಇಲಾಖೆಯು ತಯಾರಿಸಿದ ಪುಸ್ತಕದ ರೂಪದಲ್ಲಿರುವ ಯಶಸ್ಸು ಕೈಪಿಡಿಯ 9 ಪ್ರತಿಗಳನ್ನು ಸುಮಾರು 8.50 ಲಕ್ಷ ರು. ವೆಚ್ಚದಲ್ಲಿ ಈ ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಮುದ್ರಣ ಮಾಡಿ ಕೊಟ್ಟಿವೆ.

--------------------------

ಕೋಟ್ ...

ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಸುಮಾರು 9 ಸಾವಿರ ಮಕ್ಕಳಿಗೆ ಯಶಸ್ಸು ಕೈಪಿಡಿ ವಿತರಿಸಲಾಗುವುದು. ಅನುದಾನರಹಿತ ಖಾಸಗಿ ಪ್ರೌಢಶಾಲೆಗಳಿಗೆ ಕೈಪಿಡಿಯ ಸಾಫ್ಟ್‌ ಕಾಪಿಯನ್ನು ಕೊಡುತ್ತೇವೆ. ಅವರು ಪ್ರಿಂಟ್ ತೆಗೆದು ಅಥವಾ ಮುದ್ರಿಸಿ ಕೊಡಬಹುದು.

- ವಿ.ಸಿ. ಬಸವರಾಜೇಗೌಡ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ರಾಮನಗರ

-------------------

ಬಾಕ್ಸ್ ....

ಎಸ್ಸೆಸ್ಸೆಲ್ಸಿ ಬರೆಯಲಿರುವ ವಿದ್ಯಾರ್ಥಿಗಳ ಸಂಖ್ಯೆ

ತಾಲೂಕು ವಿದ್ಯಾರ್ಥಿಗಳು

ಚನ್ನಪಟ್ಟಣ 3113

ಕನಕಪುರ 4152

ಮಾಗಡಿ 2792

ರಾಮನಗರ 3767

-------------------

ಒಟ್ಟು 13814

------------------

28ಕೆಆರ್ ಎಂಎನ್ 3,4.ಜೆಪಿಜಿ

ವಿಷಯವಾರು ಯಶಸ್ಸು ಕೈಪಿಡಿ