ಸಾರಾಂಶ
ಶಿವಮೊಗ್ಗ : ನ್ಯಾಯಾಲಯದಲ್ಲಿ ತೀರ್ಪು ಬಂದ ನಂತರ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಪರಿಸ್ಥಿತಿ ನೂರಕ್ಕೆ ನೂರರಷ್ಟು ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು.ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಾಡಿರುವ ಎಲ್ಲಾ ಹಗರಣಗಳು ಸಾಬೀತಾಗಿರುವುದರಿಂದ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತೀರ್ಪಿಗಿಂತ ಮುಂಚೆಯೇ ಗೌರವಯುತವಾಗಿ ರಾಜೀನಾಮೆ ಕೊಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಕಾಂಗ್ರೆಸ್‌ನವರು ಲೋಕಸಭಾ ಚುನಾವಣೆಯಲ್ಲಿ 99 ಸೀಟು ತೆಗೆದುಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಅವರು 99 ತೆಗೆದುಕೊಂಡಿದ್ದು ನೂರಕ್ಕೆ ಅಲ್ಲ 543ಕ್ಕೆ 17 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಒಂದು ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದಕ್ಕೆ ಆಗಲಿಲ್ಲ. ಕರ್ನಾಟಕ ಹಾಗೂ ಕೇರಳ ಮತ್ತಿತರ ರಾಜ್ಯಗಳಲ್ಲಿ ಬಿಟ್ಟರೆ ಮತ್ತೆ ಎಲ್ಲಿ ಇದೆ. ಕರ್ನಾಟಕದಲ್ಲಿ ನಮ್ಮ ಕೆಲವು ತಪ್ಪಿನಿಂದ ಹಾಗೂ ಅವರ ಬೇರೆ ಬೇರೆ ಆಶ್ವಾಸನೆಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಎಂದು ಜನ ಈಗ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಮುಖಾಂತರ ಜೀವನ ನಡೆಸುವುದಕ್ಕೆ ಆಗುವುದಿಲ್ಲ. ಬೇರೆ ಬೇರೆ ಕಾರಣಗಳನ್ನು ಕೊಟ್ಟು ಹಣವನ್ನು ಕಟ್ಟು ಮಾಡು ತ್ತಿದ್ದಾರೆ. ರಾಜ್ಯದಲ್ಲಿ ಹಗರಣಗಳು ಹೆಚ್ಚಾಗಿ ನಡೆಯುತ್ತಿದೆ. ಮುಡಾ ಹಗರಣದಲ್ಲಿ ಸೇರಿದಂತೆ ಹಲವು ಹಗರಣಗಳಲ್ಲಿ ಕಾಂಗ್ರೆಸ್ ತನ್ನ ಸಾಧನೆ ತೋರಿಸಿದೆ. ಮುಡಾ ಹಗರಣದಲ್ಲಿ ವೈಟ್‌ನರ್ ಹಾಕಿದ್ದ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಇನ್ನು, ಮಲ್ಲಿ ಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ ಖರ್ಗೆಗೆ ಸೇರಿದ ಸಿದ್ಧಾರ್ಥ್ ಟ್ರಸ್ಟ್ ಬಗ್ಗೆ ಡೀಟೇಲ್ಸ್ ಅನ್ನು ಕೇಳಲಾಗಿದೆ ಎಂದು ತಿಳಿಸಿದರು.ಈಗ ಸಿಎಂ ವಿರುದ್ಧ ನಾವು ಯಾವುದೇ ಹೋರಾಟ ಮಾಡುವುದಿಲ್ಲ. ನ್ಯಾಯಾಲಯದಲ್ಲಿನ ತೀರ್ಪು ಅಂತಿಮ ಹಂತಕ್ಕೆ ಬಂದಿರುವುದರಿಂದ ಸಹಜವಾಗಿ ಸಿಎಂ ಅವರೇ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬಿಜೆಪಿಯವರ ವಿರುದ್ಧ ಮೊಕದ್ದಮೆಗೆ ಹುನ್ನಾರ
ಇನ್ನು, ಕೋವಿಡ್ ಹಗರಣ ಸಂಬಂಧ ಬಿಜೆಪಿ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಇದರಲ್ಲಿ ಅರ್ಥ ಇಲ್ಲ. ಸರ್ಕಾರ ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಲು ಸರ್ವ ಸ್ವತಂತ್ರವಾಗಿದೆ. ಅವರು ಏನು ಬೇಕಾದರೂ ಕ್ರಮ ಕೈಗೊಳ್ಳಲಿ ಎಂದು ಯಡಿಯೂರಪ್ಪ ಸವಾಲೆಸೆದರು.ಹುಚ್ಚುರಾಯನ ದೇವಳಕ್ಕೆ ತೆರಳಿ ದೇವರ ದರ್ಶನ
ಶಿಕಾರಿಪುರ: ಸ್ವಕ್ಷೇತ್ರ ಶಿಕಾರಿಪುರಕ್ಕೆ ಬುಧವಾರ ಸಂಜೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.ನಂತರದಲ್ಲಿ ಸಮೀಪದಲ್ಲಿನ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಗುರುಸಾರ್ವಭೌಮರ ಬೃಂದಾವನದ ದರ್ಶನ ಪಡೆದು ಫಲಮಂತ್ರಾಕ್ಷತೆ ಸ್ವೀಕರಿಸಿದರು. ಈ ಸಂದರ್ಬದಲ್ಲಿ ಪುತ್ರಿ ಅರುಣಾದೇವಿ, ಸೊಸೆ ತೇಜಸ್ವಿನಿ, ಪುರಸಭಾಧ್ಯಕ್ಷೆ ಶೈಲಾ ಮಡ್ಡಿ, ಗುರುಮೂರ್ತಿ ಮತ್ತಿತರರಿದ್ದರು.