ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದೇಶದ ಅತ್ಯಂತ ದೊಡ್ಡ ಹಬ್ಬ ಗಣೇಶ ಚತುರ್ಥಿಗೆ ಕೆಲವೇ ದಿನ ಬಾಕಿಯಿದ್ದು, ರಾಜ್ಯದಲ್ಲಿ ವಿಘ್ನ ವಿನಾಯಕನಿಗೇ ವಿಘ್ನ ಎದುರಾಗಿದೆ. ಗಣೇಶ ಹಬ್ಬ ಆಚರಣೆ ನಿಲ್ಲಿಸಬೇಕು ಎನ್ನುವ ವ್ಯವಸ್ಥಿತ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದ ಅನೇಕ ಕಡೆ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಲು ಹೋಗುವ ಆಯೋಜಕರಿಗೆ- ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ನೀಡಬೇಕು. ಭಾಗವಹಿಸುವ ಟ್ಯಾಬ್ಲೋಗಳ ತಂಡ ಯಾವುದು, ಯಾವ ವಾಹನದಲ್ಲಿ ಬರುತ್ತಾರೆ, ಅದರ ದಾಖಲೆ ನೀಡಬೇಕು, ಲೈಸೆನ್ಸ್ ನೀಡಬೇಕು ಎಂಬಿತ್ಯಾದಿ ಅರ್ಥವಿಲ್ಲದ ನಿಯಮಗಳನ್ನು ಹೇರುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ. ವೈಯಕ್ತಿಕ, ಸಾರ್ವಜನಿಕ, ಸರ್ಕಾರ ಹೀಗೆ ಯಾವುದೇ ಶುಭ ಕಾರ್ಯಗಳಲ್ಲೂ ಗಣೇಶನಿಗೇ ಮೊದಲ ಪೂಜೆ. ಅಂತಹ ಪೂಜೆಗೆ ಇನ್ನಿಲ್ಲದ ಅಡೆತಡೆಗಳನ್ನು ಒಡ್ದುವ ಪ್ರಯತ್ನವೇಕೆ? ಹಿಂದೂ ಧಾರ್ಮಿಕ ಭಾವನೆಗಳಿಗೆ ಸರ್ಕಾರ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.ಸಂಚಾರ ಬದಲಾವಣೆ- ಪರದಾಟ: ಯಾವುದೇ ಮಾಹಿತಿ ನೀಡದೆ ನಗರದಲ್ಲಿ ಧಿಡೀರ್ ಸಂಚಾರ ಬದಲಾವಣೆ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಬಸ್ಸುಗಳು ಸ್ಟೇಟ್ ಬ್ಯಾಂಕ್‌ನಿಂದ ಹಂಪನಕಟ್ಟೆಯವರೆಗೆ ಎಲ್ಲೂ ನಿಲ್ಲಿಸದೆ ಬಲ ಬದಿಯಲ್ಲಿಯೇ ಹೋಗಬೇಕು ಎಂದು ಸೂಚನೆ ನೀಡಿ ಉದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರಯಾಣಿಕರು ಅಪಾಯಕಾರಿಯಾಗಿ ರಸ್ತೆ ದಾಟಿ ಓಡಿ ಬಂದು ಬ್ಯಾರಿಕೇಡ್ ಸರಿಸಿ ಬಸ್ ಹತ್ತುತ್ತಿರುವ ದೃಶ್ಯ ವರದಿಯಾಗುತ್ತಿದೆ. ಇಲ್ಲಿ ಜೀವ ಹಾನಿಯಾದರೆ ನೇರ ಹೊಣೆಯನ್ನು ಅವೈಜ್ಞಾನಿಕ ನಿಯಮ ರೂಪಿಸಿದವರೇ ಹೊರಬೇಕು ಎಂದರು.
ಬಸ್ ನಿಲ್ದಾಣ ತೆರವು:ಹಂಪನಕಟ್ಟೆಯ ವಿವಿ ಕಾಲೇಜು ಮುಂಭಾಗದಲ್ಲಿದ್ದ ಬಸ್ ನಿಲ್ದಾಣವನ್ನು ಕೇವಲ ಒಂದು ಅಂಗಡಿಯ ವ್ಯಾಪಾರದ ಉದ್ದೇಶಕ್ಕಾಗಿ ಯಾರಿಗೂ ಮಾಹಿತಿ ನೀಡದೆ ರಾತೋರಾತ್ರಿ ತೆರವು ಮಾಡಿದ ಪರಿಣಾಮ ಕಾಲೇಜು ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವವರು ಬಿಸಿಲು, ಮಳೆಯಲ್ಲಿ ನಿಲ್ಲುವಂತಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೆ ಜನಾಭಿಪ್ರಾಯದಂತೆ ಅದೇ ಜಾಗದಲ್ಲಿ ಮತ್ತೆ ಬಸ್ ನಿಲ್ದಾಣ ಮರು ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.ಲೀಸ್, ಬಾಡಿಗೆ ದರ ಇಳಿಸಿ: ರಾಜ್ಯದ ಬಂದರು ಇಲಾಖೆಯಲ್ಲಿನ ಸರ್ಕಾರಿ ಜಾಗವನ್ನು ಹಲವಾರು ವರ್ಷಗಳಿಂದ ನಿಗದಿತ ದರದಲ್ಲಿ ಬಾಡಿಗೆಗೆ ಹಾಗೂ ಲೀಸ್‌ಗೆ ನೀಡಲಾಗಿದೆ. ಇದೀಗ ಆ ದರ ಏರಿಕೆಯಾಗಿದ್ದು, ಕೂಡಲೇ ಕಡಿಮೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಪ್ರಮುಖರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್ ಇದ್ದರು.