ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೊಳಪಡಿಸುವುದು, ಒಂದೂವರೆ ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಕೂಲಿಯನ್ನು ಬಿಡುಗಡೆಗೊಳಿಸಿ ಕೂಲಿಕಾರರಿಗೆ ನಾಳೆಯಿಂದಲೇ ಕೆಲಸ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಂತ ಕೃಷಿ ಕೂಲಿಕಾರರು ಸೋಮವಾರ ಜಿಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು ಮೆರವಣಿಗೆ ಮೂಲಕ ಜಿಪಂ ಕಚೇರಿ ಬಳಿಗೆ ಆಗಮಿಸಿ ಧರಣಿ ಕುಳಿತರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ವಲ್ಪ ಸಮಯದ ಬಳಿಕ ಜಿಪಂ ಕಚೇರಿ ಒಳ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಬಳಿಕ ಸಿಇಒಗೆ ಮನವಿ ಸಲ್ಲಿಸಿದರು.
ಜಿಪಂ ನೂತನ ಸಿಇಒ ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಆದರೆ, ಜಿಲ್ಲೆಯ ಕೂಲಿಕಾರರ ಬಗ್ಗೆ ಕಾಳಜಿ ಇಲ್ಲದೆ ಅವರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಕೂಲಿ ಹಣ ಕೈಗೆ ಸಿಗದೆ ಅರೆಹೊಟ್ಟೆ ಕಟ್ಟಿಕೊಂಡು ಜೀವನ ನಡೆಸುವಂತಾಗಿದೆ ಎಂದು ದೂರಿದರು.ತಳಗವಾದಿ, ಹುಸ್ಕೂರು, ಬಂಡೂರು, ದುಗ್ಗನಹಳ್ಳಿ, ಹಿಟ್ಟನಹಳ್ಳಿಕೊಪ್ಪಲು, ಮಿಕ್ಕರೆ, ಸುಜ್ಜಲೂರು, ಆರ್.ಬಿ.ಹಳ್ಳಿ, ಪಂಡಿತಹಳ್ಳಿ, ಕುಂದೂರು, ಹಲಗೂರು, ಬ್ಯಾಡರಹಳ್ಳಿ, ನಾಗೇಗೌಡನದೊಡ್ಡಿ, ಲಿಂಗಪಟ್ಟಣ, ಶೆಟ್ಟಹಳ್ಳಿ, ಬೆಂಡರವಾಡಿ, ನಿಡಘಟ್ಟ, ಹಾಡ್ಲಿ, ಹಲಹಳ್ಳಿ, ಮದ್ದೂರು ತಾಲೂಕಿನ ಬಿದರಹಳ್ಳಿ, ಕಾಡುಕೊತ್ತನಹಳ್ಳಿ ಸೇರಿದಂತೆ ಇತರೆ ಗ್ರಾಮಗಳು, ಮಂಡ್ಯ ತಾಲೂಕು, ನಾಗಮಂಗಲ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಕಳೆದ ವರ್ಷ ಏ.೧ರಿಂದ ಇಲ್ಲಿಯವರೆಗೆ ಸರಾಸರಿ ೪೦ರಿಂದ ೬೦ ಮಾನವ ದಿನಗಳ ಕೆಲಸ ನೀಡಿದ್ದು, ನಾಳೆಯಿಂದಲೇ ಕೆಲಸ ಕೊಡಬೇಕು ಎಂದು ಒತ್ತಾಯಿಸಿದರು.
ಒಂದೂವರೆ ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಕೂಲಿಯನ್ನು ಇಂದೇ ಬಿಡುಗಡೆ ಮಾಡಬೇಕು. ಕಾಯಕ ಬಂಧುಗಳಿಗೆ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ನಾಮಫಲಕದ ಹಣ ತಕ್ಷಣ ಅವರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.ಜಲಜೀವನ್ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ನಡೆದಿರುವ ಮತ್ತು ನಡೆಯುತ್ತಿರುವ ಕಾಮಗಾರಿಗಳ ಕೆಲಸ ಕಳಪೆ ಕೆಲಸವಾಗಿದ್ದು, ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಯೋಜನೆಯಡಿ ಕೋಟ್ಯಂತರ ರು. ದುರ್ಬಳಕೆಯಾಗಿದೆ. ಎಲ್ಲಿಯೂ ವ್ಯವಸ್ಥಿತವಾಗಿ ವಾಟರ್‌ಟ್ಯಾಂಕ್ ನಿರ್ಮಿಸಿಲ್ಲ. ಪೈಪ್‌ಲೈನ್ ಕಾಮಗಾರಿ ನಡೆಸಿಲ್ಲ, ಹಳೇ ಪೈಪ್‌ಲೈನ್‌ಗಳಿಗೆ ಸಂಪರ್ಕ ಕಲ್ಪಿಸಿ ಜಲಜೀವನ್ ಹೆಸರಿನಲ್ಲಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಪಿಡಿಒ ಮತ್ತು ಇತರೆ ಪ್ರಮುಖ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿಯೇ ವಾಸವಿರಬೇಕೆಂದು ಆದೇಶವಿದ್ದರೂ, ವಾಸ ಮಾಡುತ್ತಿಲ್ಲ. ೧೦ ವರ್ಷಗಳಾದರೂ ಒಂದೇ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ತುರ್ತು ವರ್ಗಾಯಿಸಬೇಕು. ಎಂದು ಒತ್ತಾಯಿಸಿದರು.ಮುಖಂಡರಾದ ಎಂ.ಪುಟ್ಟಮಾದು, ಬಿ.ಎಂ.ಶಿವಮಲ್ಲಯ್ಯ, ಬಿ.ಹನುಮೇಶ್, ಟಿ.ಪಿ.ಅರುಣ್‌ಕುಮಾರ್, ಎನ್.ಸುರೇಂದ್ರ, ಕೆ. ಬಸವರಾಜು, ಆರ್.ರಾಜು, ಟಿ.ಎಚ್.ಆನಂದ, ಅಬ್ದುಲ್ಲಾ, ಶಾಂತಮ್ಮ ಸೇರಿದಂತೆ ಇತರರಿದ್ದರು.