ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಕನ್ನಡ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಯುತ್ತಿರುವ ಹೊತ್ತಿನಲ್ಲಿ ಮಂಡ್ಯ ಜಿಲ್ಲೆಯ ಅಮೃತ ಮಹೋತ್ಸವದ ಅಂಗವಾಗಿ ನಿರ್ಮಿಸಲು ಉದ್ದೇಶಿಸಿದ್ದ ಅಮೃತ ಭವನ ನಿರ್ಮಾಣಕ್ಕೆ ಇದುವರೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸದಿರುವುದು ಅಚ್ಚರಿ ಮೂಡಿಸಿದೆ.೨೦೧೫ರಲ್ಲಿ ಮಂಡ್ಯ ಜಿಲ್ಲೆಯ ಅಮೃತ ಮಹೋತ್ಸವ ಕಾರ್ಯಕ್ರಮ ನಡೆದಿದ್ದು, ೨೨.೧೨.೨೦೧೫ ರಂದು ಮಂಡ್ಯ ನಗರಸಭೆ ವ್ಯಾಪ್ತಿಯ ಗ್ರಾಮಠಾಣಾ ಆಸ್ತಿ ಸಂಖ್ಯೆ ೬೧೪/೬೨೫ರಲ್ಲಿ ೬ ಗುಂಟೆ ಜಾಗವನ್ನು ಗುರುತಿಸಿ ಪ್ರಸ್ತಾವನೆ ಸ್ವೀಕೃತವಾಗಿತ್ತು.
ಅದರಂತೆ ಅಮೃತ ಭವನ ನಿರ್ಮಾಣಕ್ಕೆ ೪ ಕೋಟಿ ರು. ಹಣವನ್ನೂ ಬಿಡುಗಡೆಗೆ ಅನುಮೋದನೆಯನ್ನೂ ನೀಡಲಾಗಿತ್ತು.ತದನಂತರ ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಚೇರಿ ನಡೆಸುತ್ತಿರುವ ಎಲ್ಲಾ ಇಲಾಖಾ ಕಚೇರಿಗಳು ಹಾಗೂ ವಿಧಾನಸಭೆ, ವಿಧಾನ ಪರಿಷತ್ತಿನ ಶಾಸಕರ ಕೊಠಡಿಗಳಿಗೆ ಜಾಗದ ಅವಶ್ಯಕತೆ ಇತ್ತು. ಹಾಲಿ ಗುರುತಿಸಲಾಗಿದ್ದ ಜಾಗದಲ್ಲಿ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗದ ಕಾರಣ ವಿಶಾಲವಾದ ಬೇರೆ ಜಾಗವನ್ನು ಗುರುತಿಸಲು ನಿರ್ಧರಿಸಲಾಗಿತ್ತು.
ಆ ನಂತರ ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ಸರ್ವೆ ನಂ. ೧೪ರಲ್ಲಿ ೧.೦೮ ಎಕರೆ ಹಳೇ ತಾಲೂಕು ಕಚೇರಿ ಜಾಗವನ್ನು ಗುರುತಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯವರಿಗೆ ಡಿಪಿಆರ್ ಲೈನ್ ಎಸ್ಟಿಮೇಟ್ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುವುದಾಗಿ ವರದಿ ಮಾಡಿದ್ದರು. ಆದರೆ, ಈವರೆಗೂ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸ್ವೀಕೃತವಾಗಿರುವುದಿಲ್ಲವೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಉತ್ತರಿಸಿದ್ದಾರೆ.ನಗರದ ಹೃದಯಭಾಗದಲ್ಲಿರುವ ಈ ಜಾಗ ಅಮೃತ ಭವನ ನಿರ್ಮಾಣಕ್ಕೆ ಸೂಕ್ತವಾಗಿರುವ ಜಾಗವಾಗಿದ್ದರೂ ಹತ್ತು ವರ್ಷಗಳಿಂದ ಡಿಪಿಆರ್ ಕಳುಹಿಸದಿರುವ ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜನರು ನಗರಸಭೆ ಆವರಣದಲ್ಲಿ ನಿರ್ಮಿಸಿರುವ ಅಮೃತ ಭವನವೇ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಿದ ಭವನವೆಂದು ಭಾವಿಸಿದ್ದಾರೆ. ವಾಸ್ತವದಲ್ಲಿ ಅದು ನಿಜವಲ್ಲ. ಅಮೃತ ಮಹೋತ್ಸವ ನೆನಪಿಗಾಗಿ ನಿರ್ಮಾಣವಾಗಬೇಕಿರುವ ಭವನದ ಡಿಪಿಆರ್, ನೀಲಿ ನಕಾಶೆಯೇ ಇನ್ನೂ ಸಿದ್ಧವಾಗಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.ಅಮೃತ ಭವನವನ್ನೇ ನಿರ್ಮಾಣ ಮಾಡಲು ಸಾಧ್ಯವಾಗದಿರುವಾಗ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿದಿರುವ ಹಣದಿಂದ ಕನ್ನಡ ಭವನವನ್ನು ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಅದಕ್ಕೂ ಸ್ಥಳ ಪರಿಶೀಲನೆಯ ಪ್ರಕ್ರಿಯೆಗಳು ನಡೆದಿವೆ. ಆದರೆ, ಇದುವರೆಗೂ ಸ್ಥಳವನ್ನು ಅಂತಿಮಗೊಳಿಸಲಾಗಿಲ್ಲ. ಅಮೃತ ಭವನಕ್ಕೆ ಸ್ಥಳ ನಿಗದಿಯಾಗಿದ್ದರೂ ಡಿಪಿಆರ್ ತಯಾರಾಗಿಲ್ಲ. ಹೀಗೆ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ತಲೆಎತ್ತಬೇಕಾದ ಅಮೃತಭವನ ಕನಸಾಗಿಯೇ ಉಳಿದಿದೆ. ಕನ್ನಡ ಭವನದ ಕತೆ ಏನಾಗುವುದೋ ಕಾದುನೋಡಬೇಕಿದೆ.
ಅಮೃತ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಮೊದಲಿಗೆ ಆಸಕ್ತಿ ತೋರಬೇಕು. ಶೀಘ್ರವೇ ಲೋಕೋಪಯೋಗಿ ಇಲಾಖೆಯಿಂದ ಡಿಪಿಆರ್‌ನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಅಮೃತ ಮಹೋತ್ಸವದ ಸವಿನೆನಪಿಗೆ ಭವನವೊಂದು ತಲೆಎತ್ತಿದರೆ ಅದರ ಆಶ್ರಯದಲ್ಲಿ ಸರ್ಕಾರಿ ಕಚೇರಿಗಳು, ವಿಧಾನಸಭೆ, ವಿಧಾನಪರಿಷತ್ ಸದಸ್ಯರಿಗೂ ಸ್ಥಳಾವಕಾಶ ದೊರೆತು ಸಾರ್ವಜನಿಕರಿಗೆ ಅನುಕೂಲವಾಗಲಿದೆ.- ಮಧು ಜಿ.ಮಾದೇಗೌಡ, ಶಾಸಕರು, ವಿಧಾನಪರಿಷತ್ತು