ವಿಜ್ಞಾನಕ್ಕೂ ಮೀರಿದ ಶಕ್ತಿ ಆಧ್ಯಾತ್ಮದ ಮೌನಾನುಷ್ಠಾನಕ್ಕಿದೆ: ನಿರಂಜನಪ್ರಭು ಶ್ರೀ

| Published : May 28 2024, 01:14 AM IST

ವಿಜ್ಞಾನಕ್ಕೂ ಮೀರಿದ ಶಕ್ತಿ ಆಧ್ಯಾತ್ಮದ ಮೌನಾನುಷ್ಠಾನಕ್ಕಿದೆ: ನಿರಂಜನಪ್ರಭು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮೌನಾನುಷ್ಠಾನವನ್ನು ನಾನು ಸಂತೋಷದಿಂದ, ಶ್ರದ್ಧಾಭಕ್ತಿಯಿಂದ ಆಚರಿಸಿದ್ದೇನೆ. ಈ ವರ್ಷ ಗುರು ಒಪ್ಪತ್ತೇಶ್ವರಸ್ವಾಮಿ ಮಳೆ ಬೆಳೆ ಚೆನ್ನಾಗಿ ಆಗಲಿ.

ಮರಿಯಮ್ಮನಹಳ್ಳಿ: ವಿಜ್ಞಾನಕ್ಕೂ ಮೀರಿದ ಶಕ್ತಿ ಆಧ್ಯಾತ್ಮಿಕ ಮೌನಾನುಷ್ಠಾನಕ್ಕೆ ಇದೆ ಎನ್ನುವುದನ್ನು ಈ ಹಿಂದೆ ಹಲವರು ತೋರಿಸಿಕೊಟ್ಟಿದ್ದಾರೆ. ಹಿಂದಿನ ಸ್ವಾಮಿಗಳ ಹಿರಿದಾಸೆಯಂತೆ ತಪಸ್ಸಿನ ಶಕ್ತಿ ಬೆಳೆಸಿಕೊಳ್ಳಲು ಮತ್ತು ಲೋಕಕಲ್ಯಾಣಕ್ಕಾಗಿ 48 ದಿನಗಳ ಮೌನಾನುಷ್ಠಾನ ವೃತ ಆಚರಣೆ ಸಂತೋಷದಿಂದ ನಡೆಸಲಾಗಿದೆ ಎಂದು ಗರಗ ನಾಗಲಾಪುರ ಶ್ರೀಗುರು ಒಪ್ಪತ್ತೇಶ್ವರ ಸ್ವಾಮಿ ವಿರಕ್ತಮಠದ ಪೂಜ್ಯಶ್ರೀ ಮ.ನಿ.ಪ. ನಿರಂಜನಪ್ರಭು ಶ್ರೀ ಹೇಳಿದರು.

ಗರಗ ನಾಗಲಾಪುರ ಗ್ರಾಮದ ಶ್ರೀಗುರು ಒಪ್ಪತ್ತೇಶ್ವರ ಮಠದ ಆವರಣದ ಸಭಾಮಂಟಪದಲ್ಲಿ ಸೋಮವಾರ ನಡೆದ ಶ್ರೀಮಠದ ನಿರಂಜನಪ್ರಭು ಶ್ರೀಗಳು 48 ದಿನಗಳ ಮೌನಾನುಷ್ಠಾನ ಮಂಗಲಮಹೋತ್ಸವದಲ್ಲಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೌನಾನುಷ್ಠಾನವನ್ನು ನಾನು ಸಂತೋಷದಿಂದ, ಶ್ರದ್ಧಾಭಕ್ತಿಯಿಂದ ಆಚರಿಸಿದ್ದೇನೆ. ಈ ವರ್ಷ ಗುರು ಒಪ್ಪತ್ತೇಶ್ವರಸ್ವಾಮಿ ಮಳೆ ಬೆಳೆ ಚೆನ್ನಾಗಿ ಆಗಲಿ. ದೇಶದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಉತ್ತಮ ಬೆಳೆ ಬಂದು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿ ಎಂದು ಪ್ರಾರ್ಥಿಸಿರುವೆ ಎಂದು ಹೇಳಿದರು.

ಬರೀ ಪ್ರವಚನ ಹೇಳಿ ಭಕ್ತರಿಂದ ಚಪ್ಪಾಳೆ ಗಿಟಿಸಿಕೊಳ್ಳುವುದರ ಬದಲಾಗಿ ಭಕ್ತರ ಕಲ್ಯಾಣಕ್ಕಾಗಿ ಅನುಷ್ಠಾನ ಶಕ್ತಿ ಪಡೆದು ಜನಕಲ್ಯಾಣಕ್ಕಾಗಿ ಮತ್ತು ಸಮಾಜದ ಉನ್ನತಿಗಾಗಿ ಜನರ ಕಷ್ಟ, ದುಖಃ ಪರಿಹಾರಕ್ಕೆ ಮುಂದಾಗಬೇಕು ಎನ್ನುವ ಆಲೋಚನೆಯಿಂದ 48 ದಿನಗಳ ಮೌನಾನುಷ್ಠಾನಗೊಳಿಸಲಾಗಿದೆ ಎಂದು ಅವರು ಹೇಳಿದರು.

ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದ ಕೊಟ್ಟೂರು ಬಸವಲಿಂಗ ಶ್ರೀ ಮಾತನಾಡಿ, ಜಪ-ತಪಗಳಿಂದ ಮನಸ್ಸು ಶಾಂತವಾಗಿರುತ್ತದೆ. ಮೌನ ಅನುಷ್ಠಾನದ ಬಲದಿಂದ ಗಳಿಸಿದ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಬಳಸಿ, ಸಮಾಜ ಸುಧಾರಣೆಗಾಗಿ ಬಳಸಬೇಕು ಎನ್ನುವುದು ಗರಗ ನಾಗಲಾಪುರದ ಒಪ್ಪತ್ತೇಶ್ವಸ್ವಾಮಿ ಮಠದ ನಿರಂಜನಪ್ರಭು ಶ್ರೀ ಜೀವನದ ಪರಮ ಗುರಿಯಾಗಿದೆ ಎಂದರು.

ಸರ್ವೇ ಜನ ಸುಖೀನೋ ಭವಂತು ಎಂಬಂತೆ ನಿರಂಜನಪ್ರಭು ಶ್ರೀ ಜಾತಿ ಭೇದವಿಲ್ಲದೇ ಎಲ್ಲರ ಜೊತೆಗೂಡಿ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದಾರೆ. ಭಕ್ತರ ಕಲ್ಯಾಣಕ್ಕಾಗಿ ಮೌನಾನುಷ್ಠಾನ ವೃತ ಆಚರಣೆ ನಡೆಸಿ ಭಕ್ತರಿಗೆ ಶಕ್ತಿ, ಭಕ್ತಿ ಕುರಣಿಸಲು ಮುಂದಾಗಿದ್ದು ಶ್ಲಾಘನೀಯ ಎಂದರು.

ಗರಗ ನಾಗಲಾಪುರ ಗ್ರಾಮದಲ್ಲಿ ಮದ್ಯ ಮಾರಾಟ ಬಂದ್‌ ಮಾಡಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಮಹಿಳೆಯರು ಗ್ರಾಮದಲ್ಲಿ ಮದ್ಯ ಮಾರಾಟ ಮಾಡಬಾರದು ಎನ್ನುವ ನಿರ್ಧಾರಕ್ಕೆ ಬರಬೇಕು. ಈಗ ಗರಗ ನಾಗಲಾಪುರ ಗ್ರಾಮದಲ್ಲಿ ಮೊದಲು ಮದ್ಯ ಮಾರಾಟ ಬಂದ್‌ ಆದರೆ ನಂತರ ಉಳಿದ ಅಕ್ಕಪಕ್ಕದ ಗ್ರಾಮಗಳಲ್ಲಿ ಬಂದ್‌ ಮಾಡಲು ಅಲ್ಲಿನ ಜನರು ಮುಂದಾಗುತ್ತಾರೆ. ಮದ್ಯಪಾನ ಸೇರಿದಂತೆ ಇತರೆ ಕೆಟ್ಟ ಹವ್ಯಾಸಗಳಿಂದ ದೂರವಿದ್ದು, ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಶ್ರೀ ಹೇಳಿದರು. ಮರಿಯಮ್ಮನಹಳ್ಳಿಯ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಸಭೆಯಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಿರಂಜನಪ್ರಭು ಶ್ರೀಗಳನ್ನು ಭಕ್ತರು ಸನ್ಮಾನಿಸಿ, ಗೌರವಿಸಿದರು.

ಸಂಗೀತ ಶಿಕ್ಷಕರಾದ ವಿಜಯಕುಮಾರ್‌ ಬಡಿಗೇರ್‌ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಲ್ಲಿಕಾರ್ಜುನ ಬಡಿಗೇರ್‌, ಪ್ರಕಾಶ್‌ ಬಡಿಗೇರ್‌ ತಬಲವಾದನ ನುಡಿಸಿದರು. ಕಲಾವಿದ ವಿರೂಪಾಕ್ಷಯ್ಯಸ್ವಾಮಿ ನಿರೂಪಿಸಿದರು. ಕಾರ್ಯಕ್ರಮದ ನಂತರ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.