ವಿದ್ಯಾರ್ಥಿಗಳು ಕಲೆ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು: ಮಲ್ಲಿಕಾರ್ಜುನ್

| Published : May 28 2024, 01:14 AM IST

ವಿದ್ಯಾರ್ಥಿಗಳು ಕಲೆ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು: ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದಲ್ಲಿ ಪ್ರತಿ ವರ್ಷದಂತೆ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಲೋಕಾಯನ ಸಂಸ್ಥೆ ಮಕ್ಕಳಿಗೆ ಜನಪದ ಕಲೆಗಳು, ಚಿತ್ರಕಲೆ, ಕರಕುಶಲ ಕಲೆ, ನಾಟಕದಲ್ಲಿ ಅಭಿನಯ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ವ್ಯರ್ಥ ಮಾಡದೆ ಈ ರೀತಿಯ ಶಿಬಿರಗಳಲ್ಲಿ ಸೇರಿಕೊಂಡು ನಮ್ಮ ಜನಪದ ಕಲೆಗಳನ್ನು ಉಳಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ವ್ಯರ್ಥ ಮಾಡದೆ ಶಿಬಿರಗಳಲ್ಲಿ ಪಾಲ್ಗೊಂಡು ಕಲೆ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಧ್ಯಯನ ಮಾಡಿ ಜಾನಪದ ಕಲೆ ಉಳಿಸಬೇಕು ಎಂದು ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಕರೆ ನೀಡಿದರು.

ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ರಂಗ ಮಂದಿರದಲ್ಲಿ ಬೆಂಗಳೂರಿನ ಲೋಕಾಯನ ಕಲ್ಚರಲ್ ಫೌಂಡೇಶನ್ ಆಯೋಜಿಸಿದ 14ನೇ ವರ್ಷದ ಲೋಕಾಯನ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗ್ರಾಮದಲ್ಲಿ ಪ್ರತಿ ವರ್ಷದಂತೆ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಲೋಕಾಯನ ಸಂಸ್ಥೆ ಮಕ್ಕಳಿಗೆ ಜನಪದ ಕಲೆಗಳು, ಚಿತ್ರಕಲೆ, ಕರಕುಶಲ ಕಲೆ, ನಾಟಕದಲ್ಲಿ ಅಭಿನಯ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದರು.

ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ವ್ಯರ್ಥ ಮಾಡದೆ ಈ ರೀತಿಯ ಶಿಬಿರಗಳಲ್ಲಿ ಸೇರಿಕೊಂಡು ನಮ್ಮ ಜನಪದ ಕಲೆಗಳನ್ನು ಉಳಿಸಬೇಕು. ಮೊಬೈಲ್ ಎಂಬ ಭೂತದಿಂದ ದೂರವಿದ್ದು ಹೊಸ ಹೊಸ ಕಲೆಗಳನ್ನು ಅಭ್ಯಾಸ ಮಾಡಿ ಯಶಸ್ಸಿನ ದಾರಿಯನ್ನು ಹಿಡಿಯಬೇಕು ಎಂದು ಸಲಹೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಇರುವ ಸುಸಜ್ಜಿತ ರಂಗಮಂದಿರದಂತೆ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲ. ರಂಗಾಸಕ್ತರು ಗ್ರಾಮೀಣ ಕಲೆಗಳನ್ನು ಕಲಿತು ಉಳಿಸಬೇಕು. ಮುಂದಿನ ಪೀಳಿಗೆಗಳಿಗೂ ಕಲೆ ಮತ್ತು ಸಂಸ್ಕೃತಿಯ ವಿಷಯಗಳು ತಲುಪಬೇಕೆಂದು ಹೇಳಿದರು.

ನಂತರ ರಂಗೀಲಾಲನ ನಿಲುವಂಗಿ ಮತ್ತು ಹ್ಯಾಪಿ ಬರ್ತ್ಡೇ ಟು ಯು ಎಂಬ ನಾಟಕಗಳನ್ನು ವಿದ್ಯಾರ್ಥಿಗಳು ಅಭಿನಯಿಸಿದರು. ಸಾಮೂಹಿಕ ಗಾಯನ ಸೇರಿದಂತೆ ರಂಗಸಜ್ಜಿಕೆಯಲ್ಲಿ ಪ್ರದರ್ಶಿಸಲ್ಪಟ್ಟ ನಾಟಕಗಳು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದವು.

ಕಾರ್ಯಕ್ರಮದಲ್ಲಿ ಲೋಕಾಯನ ಸಂಸ್ಥೆ ಮುಖ್ಯಸ್ಥ ಶಶಿಧರ್ ಭಾರಿಘಾಟ್, ಸಿನಿಮಾ ನಿರ್ದೇಶಕರಾದ ಉಮಾಶಂಕರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸು ಆರ್, ಶ್ರೀನಿವಾಸ್, ಮುಖ್ಯ ಶಿಕ್ಷಕರಾದ ಅಮಿತ್, ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು.