ಕಾರ್ಕಳ, ಹೆಬ್ರಿ: ಕೃಷಿ ಪೂರ್ವ ತಯಾರಿ ಸಡಗರ

| Published : May 28 2024, 01:13 AM IST

ಸಾರಾಂಶ

ಕಾರ್ಕಳ, ಹೆಬ್ರಿ ತಾಲೂಕು ಭೌಗೋಳಿಕವಾಗಿ 107586 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. 28227 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಯಿದೆ. 7000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲು ಪೂರ್ವ ತಯಾರಿಗಳು ನಡೆಯುತ್ತಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ, ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಯ ಪೂರ್ವ ತಯಾರಿಗಳು ಪ್ರಗತಿಯಲ್ಲಿದೆ.

ಕಾರ್ಕಳ, ಹೆಬ್ರಿ ತಾಲೂಕು ಭೌಗೋಳಿಕವಾಗಿ 107586 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. 28227 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಯಿದೆ. 7000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲು ಪೂರ್ವ ತಯಾರಿಗಳು ನಡೆಯುತ್ತಿದೆ.

* ಗದ್ದೆಗಳಿಗೆ ಹಟ್ಟಿ ಗೊಬ್ಬರ ಪೂರೈಕೆ:

ಹಳ್ಳಿ ಗದ್ದೆಗಳಲ್ಲಿ ರೈತರು ಕೃಷಿ ಮಾಡಲು ಉಳುಮೆಗಾಗಿ ಹಟ್ಟಿ ಗೊಬ್ಬರಗಳನ್ನು ಪೂರೈಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಉಳುಮೆ ಗಿ ರೈತರು ಗದ್ದೆಗಳನ್ನು ಹದಮಾಡುತ್ತಿದ್ದಾರೆ.

ಈಗಾಗಲೇ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಳುಮೆಗಾಗಿ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಶಿವಮೊಗ್ಗ, ದಾವಣಗೆರೆ, ಹಾಸನ, ಮಂಡ್ಯ ಕಡೆಗಳಿಂದ ಟ್ರಾಕ್ಟರ್‌ಗಳು ಕಾರ್ಕಳ, ಹೆಬ್ರಿ ತಾಲೂಕುಗಳಿಗೆ ಆಗಮಿಸಲು ಆರಂಭಿಸಿವೆ.* ಬಿತ್ತನೆ ಬೀಜ ಲಭ್ಯ:

ಕಾರ್ಕಳ ಹೆಬ್ರಿ ತಾಲೂಕು ವ್ಯಾಪ್ತಿಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲಲ್ಲಿ ಎಂ4, ಸತ್ಯ ಕೆಂಪು ಮುಕ್ತಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಶಿವಪುರ, ಕೆರುವಾಶೆ, ವರಂಗ, ಮರ್ಣೆ ಗ್ರಾಮಗಳನ್ನೊಳಗೊಂಡ ಅಜೆಕಾರು ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ 60 ಕ್ವಿಂಟಾಲ್ ಎಂ4, 10 ಕ್ವಿಂಟಾಲ್ ಕೆಂಪು ಮುಕ್ತಿ ಬಿತ್ತನೆ ಬೀಜಗಳನ್ನು ರೈತರಿಗೆ ಹಂಚಲಾಗುತ್ತಿದೆ. ಈಗಾಗಲೇ 4.5 ಕ್ವಿಂಟಾಲ್ ಭತ್ತ ದ ಬೀಜಗಳನ್ನು ಶಿವಪುರ, ಕೆರುವಾಶೆ, ವರಂಗ, ಮರ್ಣೆ ಗ್ರಾಮದ ರೈತರಿಗೆ ಪ್ರಾತ್ಯಕ್ಷಿಕೆಗಾಗಿ ನೀಡಲಾಗಿದೆ.

* ರಸಗೊಬ್ಬರ ದಾಸ್ತಾನು:

ಇತ್ತೀಚಿನ ವರ್ಷಗಳಲ್ಲಿ ರೈತರು ಹೆಚ್ಚಾಗಿ ಸಾವಯವ ಕೃಷಿಗೆ ಒತ್ತು ನೀಡುತ್ತಿದ್ದು ಹಟ್ಟಿಗೊಬ್ಬರಗಳನ್ನೇ ಬಳಸುತಿದ್ದಾರೆ. ಆದರೆ ಎಲ್ಲ ಕೃಷಿ ಪತ್ತಿನ ಸೊಸೈಟಿಗಳಲ್ಲಿ ಯೂರಿಯಾ ಸೇರಿದಂತೆ ಎಲ್ಲ ರಸಗೊಬ್ಬರಗಳನ್ನು ದಾಸ್ತಾನು ಇರಿಸಲಾಗಿದೆ.

------

ಅಜೆಕಾರು ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ 60 ಕ್ವಿಂಟಾಲ್ ಎಂ4 ಭತ್ತದ ತಳಿ, 10 ಕ್ವಿಂಟಾಲ್ ಕೆಂಪು ಮುಕ್ತಿ ಭತ್ತದ ಬಿತ್ತನೆ ಬೀಜಗಳನ್ನು ರೈತರಿಗೆ ಹಂಚಲಾಗುತ್ತಿದೆ. ಈಗಾಗಲೇ 4.5 ಕ್ವಿಂಟಾಲ್ ಭತ್ತ ದ ಬೀಜಗಳನ್ನು ಶಿವಪುರ, ಕೆರುವಾಶೆ, ವರಂಗ, ಮರ್ಣೆ ಗ್ರಾಮದ ರೈತರಿಗೆ ಪ್ರಾತ್ಯಕ್ಷಿಕೆಗಾಗಿ ನೀಡಲಾಗುತ್ತಿದೆ. ರೈತರಿಗೆ ಸಹಾಯಧನದ ಅಡಿಯಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿದೆ. ಶೇ.90ರಷ್ಟು ರೈತರಿಗೆ ಫಾರ್ಮರ್ ಐಡಿಗಳನ್ನು ವಿತರಿಸಲಾಗಿದೆ. ಹೆಬ್ರಿ ತಾಲೂಕಿಗೆ ತಾತ್ಕಾಲಿಕವಾಗಿ ಆರ್‌ಟಿಸಿ ಲಭ್ಯತೆ ಇಲ್ಲದಿರುವುದರಿಂದ ಬಿತ್ತನೆ ಬೀಜವನ್ನು ಪಡೆಯಲು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಫಾರ್ಮರ್ ಐಡಿಗಳಿಂದಲೇ ರೈತರಿಗೆ ಭತ್ತದ ಬೀಜಗಳ ಪೂರೈಕೆ ಮಾಡಲಾಗುತ್ತಿದೆ.

। ಸಿದ್ದಪ್ಪ, ಕೃಷಿ ಅಧಿಕಾರಿ ಅಜೆಕಾರು ರೈತ ಸಂಪರ್ಕ ಕೇಂದ್ರ