ಶಾಲೆಗೆ ಬಂದು ಪಾಠ ಕಲಿಯುವ ಮೊದಲು ಮಕ್ಕಳಿಗೆ ಸೆಗಣಿ ತೆಗೆಯುವ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕಾದ ಅನಿವಾರ್ಯತೆ ಅವರೆಗುಂದ ಹಾಡಿ ಶಾಲೆಯಲ್ಲಿ ಎದುರಾಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಶಾಲೆಗೆ ಬಂದು ಪಾಠ ಕಲಿಯುವ ಮೊದಲು ಮಕ್ಕಳಿಗೆ ಸೆಗಣಿ ತೆಗೆಯುವ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕಾದ ಅನಿವಾರ್ಯತೆ ಅವರೆಗುಂದ ಹಾಡಿ ಶಾಲೆಯಲ್ಲಿ ಎದುರಾಗಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಅವರೆಗುಂದ ಗ್ರಾಮದಲ್ಲಿ ಸಾಕಾನೆ ಶಿಬಿರವಿದ್ದು, ಇಲ್ಲಿ ಸುಮಾರು 40ಕ್ಕೂ ಅಧಿಕ ಜೇನುಕುರುಬ ಸಮುದಾಯದ ಕುಟುಂಬಗಳು ವಾಸವಿವೆ. ಅಲ್ಲದೆ ಆನೆ ಶಿಬಿರದ ಮಾವುತರು ಹಾಗೂ ಕಾವಾಡಿಗರ ಕುಟುಂಬಗಳೂ ಇಲ್ಲಿ ನೆಲೆಸಿವೆ. ದುಬಾರೆಯ ಕಾವೇರಿ ನದಿಯ ದಡದಲ್ಲಿರುವ ಅವರೆಗುಂದ ಹಾಡಿಯ ಮಕ್ಕಳಿಗೆ ಶಾಲೆಗೆ ತೆರಳಲು ಹಲವು ಅಡಚಣೆಗಳಿದ್ದು, ಸಿದ್ದಾಪುರಕ್ಕೆ ಹೋಗಬೇಕಾದರೆ ಸಾರಿಗೆ ಸೌಲಭ್ಯಗಳ ಕೊರತೆ, ನದಿ ದಾಟಿ ನಂಜರಾಯಪಟ್ಟಣಕ್ಕೆ ಹೋಗಬೇಕಾದರೆ ಬೋಟ್ ಸಮಸ್ಯೆ.

ಈ ಹಿನ್ನೆಲೆಯಲ್ಲಿ ಆನೆ ಶಿಬಿರದ ಸಮೀಪದಲ್ಲೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು 2005–06ರಲ್ಲಿ ಆರಂಭಿಸಲಾಗಿತ್ತು. ಇಲ್ಲಿ 1ರಿಂದ 5ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದ್ದು, ಸ್ಥಳೀಯ ಹಾಡಿಯ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಶಾಲೆ ಆರಂಭವಾಗಿ ವರ್ಷಗಳು ಕಳೆದರೂ ಅಗತ್ಯ ಮೂಲ ಸೌಕರ್ಯಗಳು ದೊರಕದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಿನ ನಿತ್ಯ ತೀವ್ರ ಸಮಸ್ಯೆ ಎದುರಿಸುವಂತಾಗಿದೆ.ಶಾಲೆಗೆ ಸೂಕ್ತ ತಡೆಗೋಡೆ ಇಲ್ಲದ ಕಾರಣ ಪ್ರತಿ ದಿನ ಬೀಡಾಡಿ ದನಗಳು ಹಾಗೂ ಸಾಕು ಮೇಕೆಗಳು ಶಾಲಾ ಆವರಣದಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ. ತರಗತಿ ಕೊಠಡಿಗಳ ಆವರಣದಲ್ಲೇ ಮಲಗಿ ಸೆಗಣಿ ಹಾಕುತ್ತಿವೆ. ಬೆಳಗ್ಗೆ ಶಾಲೆಗೆ ಆಗಮಿಸುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಧ್ಯಾಹ್ನದವರೆಗೆ ಶಾಲಾ ಆವರಣದಲ್ಲಿ ರಾಶಿಯಾಗಿ ಬಿದ್ದ ಸೆಗಣಿ ತೆರವುಗೊಳಿಸುವುದಕ್ಕೇ ವ್ಯಯಿಸಬೇಕಾಗಿದೆ.

ಈ ಕಾರಣದಿಂದ ಪ್ರತಿ ದಿನವೂ ತರಗತಿ ಆರಂಭಗೊಳ್ಳುವಾಗ ತಡವಾಗುತ್ತಿದೆ.ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ.ಗಳು ಅವರೆಗುಂದ ಹಾಡಿ ಶಾಲೆಯನ್ನು ನಿರ್ಲಕ್ಷಿಸಿರುವುದೇ ಈ ಸಮಸ್ಯೆಗಳ ಮೂಲ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಶಾಲೆಗೆ ತಡೆಗೋಡೆ, ಸ್ವಚ್ಛತೆ ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದನಗಳ ಸಮಸ್ಯೆ ಮತ್ತು ಮೂಲ ಸೌಕರ್ಯ ಒದಗಿಸುವ ಬಗ್ಗೆ ಗ್ರಾಪಂ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ನಡೆದ ಸಭೆಯಲ್ಲಿ ಕೂಡ ವಿಷಯ ಪ್ರಸ್ತಾಪಿಸಿದ ಸಂದರ್ಭ ಮೂಲ ಸೌಕರ್ಯ ಕಲ್ಪಿಸಲು ಹಣ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾದರಲ್ಲದೆ ಈವರೆಗೂ ಯಾವುದೇ ಕೆಲಸ ಪ್ರಾರಂಭಿಸಿಲ್ಲ.

-ಎಲಿಜಬೆತ್ ಆರಾನ್ನ

ಮುಖ್ಯ ಶಿಕ್ಷಕಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ದುಬಾರೆ ಹಾಡಿ