ಎನ್‌ ಐಟಿಕೆ ಸಂಸ್ಥೆಯ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಇಬ್ಬರು ಅಸೋಸಿಯೇಟ್‌ ಪ್ರೊಫೆಸರ್‌ ಗಳು ಜಿ.ಪಂ. ಇಂಜಿನಿಯರುಗಳು ಹಾಗೂ ಮಂಜನಾಡಿ ಗ್ರಾ.ಪಂ ಸಿಬ್ಬಂದಿಯೊಂದಿಗೆ ಮಂಜನಾಡಿ ಸಮೀಪದ ಗುಡ್ಡ ಕುಸಿತ ದುರಂತ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ವರದಿ ಪಡೆದುಕೊಂಡಿದ್ದಾರೆ.

ಎನ್‌ಐಟಿಕೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ । ಗ್ರಾ.ಪಂ.ನಿಂದ ವರದಿ ಸಂಗ್ರಹ

ಉಳ್ಳಾಲ: ಮಂಜನಾಡಿ ಕೊಪ್ಪಲಕೋಡಿಯಲ್ಲಿ ಗುಡ್ಡ ಕುಸಿದು ಮಕ್ಕಳು , ಅಜ್ಜಿ ಸಾವನ್ನಪ್ಪಿ ಎರಡು ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಪ್ರಕರಣಕ್ಕೆ ಸಂಬಂಧಿಸಿ ಅಶ್ವಿನಿ ಹಾಗೂ ಮನೆಮಂದಿ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದ ಭಾಗವಾಗಿ ಎನ್‌ಐಟಿಕೆ ಅಧಿಕಾರಿಗಳ ತಂಡದಿಂದ ತಾಂತ್ರಿಕ ತನಿಖೆ ಮಂಗಳವಾರ ಆರಂಭವಾಗಿದೆ. ಎನ್‌ ಐಟಿಕೆ ಸಂಸ್ಥೆಯ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಇಬ್ಬರು ಅಸೋಸಿಯೇಟ್‌ ಪ್ರೊಫೆಸರ್‌ ಗಳು ಜಿ.ಪಂ. ಇಂಜಿನಿಯರುಗಳು ಹಾಗೂ ಮಂಜನಾಡಿ ಗ್ರಾ.ಪಂ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ವರದಿ ಪಡೆದುಕೊಂಡಿದ್ದಾರೆ.ಎನ್‌ಐಟಿಕೆ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಪ್ರೊಫೆಸರ್‌ಗಳಾದ ಡಾ.ಪಳನಿಸಾಮಿ ಟಿ., ಡಾ. ಶ್ರೀವಲ್ಸಾ ಕೊಳಥಾಯರ್‌ ವರದಿ ಪಡೆದುಕೊಂಡಿದ್ದಾರೆ.ಮಂಜನಾಡಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದ ದುರಂತವು ಕೇವಲ ಪ್ರಕೃತಿ ವಿಕೋಪವಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳ ಆಡಳಿತ ವೈಫಲ್ಯದಿಂದ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಅಮಾಯಕ ಮಕ್ಕಳು ಹಾಗೂ ಅವರ ಅಜ್ಜಿ ಸಾವನ್ನಪ್ಪಿದ್ದು, ತಾಯಿ ಎರಡು ಕಾಲುಗಳನ್ನು ಮತ್ತು ಅಜ್ಜ ಒಂದು ಕಾಲನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಪ್ರಕರಣ ಸಂಬಂಧಿಸಿ ಅಪಾಯಕಾರಿ ಪ್ರದೇಶವೆಂದು ಗುರುತಿಸಲ್ಪಟ್ಟ 70 ಫೀಟ್ ಗುಡ್ಡದ ಬಳಿ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದವರು ಯಾರು? ಭೂಉಪಯೋಗ ನಿಯಮಗಳನ್ನು ಉಲ್ಲಂಘಿಸಿ ನಡೆದ ಚರಂಡಿ, ಮಣ್ಣು ತೆಗೆಯುವ ಹಾಗೂ ಭೂಮಿಯ ಸ್ವರೂಪ ಬದಲಾವಣೆ ಕಾರ್ಯಗಳ ಮೇಲೆ ಗ್ರಾಮ ಪಂಚಾಯಿತಿ ಏಕೆ ಕ್ರಮ ಕೈಗೊಂಡಿಲ್ಲ? ಮಣ್ಣು ಪರೀಕ್ಷೆ ಮಾಡದೆ 70 ಫೀಟ್ ಗುಡ್ಡ ಕಡಿದು ರಸ್ತೆ ನಿರ್ಮಾಣ ಹೇಗೆ ಸ್ಥಳೀಯ ಇಂಜಿನಿಯರಿಂಗ್ ವಿಭಾಗದ ಅನುಮತಿ ನೀಡಿದೆ ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಕರ್ನಾಟಕ ಸರ್ಕಾರವು ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಎನ್‌ ಐಟಿಕೆಯನ್ನು ತನಿಖೆಗೆ ನಿಯೋಜಿಸಿದೆ. ಇಂಜಿನಿಯರ್‌ ವಿರುದ್ಧ ಅಸಮಾಧಾನ: ಅಶ್ವಿನಿ ಮನೆಮಂದಿ ನ್ಯಾಯಕ್ಕಾಗಿ ಹೋರಾಡುತ್ತಿದ್ದರೂ, ಎನ್‌ ಐಟಿಕೆ ಅಧಿಕಾರಿಗಳ ಜೊತೆಗೆ ಸ್ಥಳ ಪರಿಶೀಲನೆಗೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ ನಿತಿನ್‌ ಅವರು ಮತ್ತೆ ಮನೆಮಂದಿಯನ್ನು ಸಂಶಯ ವ್ಯಕ್ತಪಡಿಸಿ ಮಾತುಗಳನ್ನಾಡಿದರು. ಮನೆಯವರೆಗೂ ರಸ್ತೆಯನ್ನು ಮಾಡಿಕೊಡಲಾಗಿದೆ, ಸದ್ಯ ನೀವು ಬೇರೆ ಆರೋಪಗಳನ್ನು ಮಾಡುತ್ತಿರುವಿರಿ ಎಂದು ಹೇಳುತ್ತಿದ್ದಂತೆ, ಮನೆಮಂದಿ ದುರ್ಘಟನೆ ಸಂದರ್ಭ ಜೆಸಿಬಿ ಬರಲು ಸಾಧ್ಯವಾಗುತ್ತಿದ್ದರೂ ಮಕ್ಕಳ ಜೀವ ಉಳಿಯುತಿತ್ತು. ಇದೀಗ ಸುಳ್ಳು ಆಪಾದನೆಗಳನ್ನು ಮಾಡಿ ತನಿಖೆಯ ಹಾದಿ ತಪ್ಪಿಸದಿರಿ ಎಂದು ಮನೆಮಂದಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆರೋಪ ಪ್ರತ್ಯಾರೋಪಗಳು ನಡೆಯಿತು. ತನಿಖಾ ತಂಡ ಸ್ಥಳದಲ್ಲಿನ ವರದಿಗಳೆಲ್ಲವನ್ನು ಸಂಗ್ರಹಿಸಿದೆ. ಜಿ.ಪಂ. ಇಂಜಿನಿಯರ್‌ ನಿತಿನ್‌ ಹಾಗೂ ಲಾಯ್ಡ್‌ , ಅಶ್ವಿನಿಯವರ ಪತಿ ಸೀತಾರಾಮ , ಸಹೋದರ ತೇಜು ಕುಮಾರ್‌, ಸಂಬಂಧಿ ಸುಮಲತಾ ಕೊಣಾಜೆ , ಮಂಜನಾಡಿ ಗ್ರಾ.ಪಂ ಸಾಹುಲ್‌ ಹಮೀದ್‌ ಮತ್ತಿತರರಿದ್ದರು.