ಆಳಂದ ಚುನಾವಣಾ ಅಕ್ರಮ: ಎಸ್‌ಐಟಿ ತನಿಖೆ

| Published : Sep 21 2025, 02:00 AM IST

ಸಾರಾಂಶ

ಕಲಬುರಗಿ ಜಿಲ್ಲೆ ಅಳಂದ ವಿಧಾನಸಭಾ ಕ್ಷೇತ್ರದ ಮತಗಳವು ಪ್ರಕರಣ ಕುರಿತು ತನಿಖೆಗೆ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಶನಿವಾರ ಆದೇಶಿಸಿದೆ.

- ಎಡಿಜಿಪಿ ಬಿ.ಕೆ.ಸಿಂಗ್‌ ನೇತೃತ್ವದ ತನಿಖೆ । ರಾಗಾ, ಖರ್ಗೆ ಆರೋಪದ ಬೆನ್ನಲ್ಲೇ ಆದೇಶ

- -

ಏನಿದು ಪ್ರಕರಣ?

- 2023ರಲ್ಲಿ ಆಳಂದದಲ್ಲಿ 6018 ಮತದಾರರ ಹೆಸರು ಅಳಿಸಲು ಯತ್ನ ನಡೆದಿತ್ತು ಎಂಬ ಪ್ರಕರಣ

- ಮೊದಲು ತನಿಖೆ ನಡೆಸಿದ್ದ ಸಿಐಡಿಗೆ ಚು.ಆಯೋಗದ ಅಸಹಕಾರ: ಖರ್ಗೆ, ರಾಗಾ ಆರೋಪ

- ಆದರೆ ಅಸಹಕಾರ ತೋರಿಲ್ಲ. ಎಲ್ಲ ಮಾಹಿತಿ ನೀಡಿದ್ದೆವು ಎಂದಿದ್ದ ಚುನಾವಣಾ ಆಯೋಗ

- ಇದರ ಬೆನ್ನಲ್ಲೇ ಸಿಐಡಿ ಎಡಿಜಿಪಿ ನೇತೃತ್ವದಲ್ಲಿ ತನಿಖೆಗೆ ರಾಜ್ಯ ಸರ್ಕಾರದ ಮಹತ್ವದ ಆದೇಶ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಲಬುರಗಿ ಜಿಲ್ಲೆ ಅಳಂದ ವಿಧಾನಸಭಾ ಕ್ಷೇತ್ರದ ಮತಗಳವು ಪ್ರಕರಣ ಕುರಿತು ತನಿಖೆಗೆ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಶನಿವಾರ ಆದೇಶಿಸಿದೆ.

ಈ ತಂಡಕ್ಕೆ ಸಿಐಡಿ ಎಸ್ಪಿಗಳಾದ ಸೈದುಲು ಅದಾವತ್‌ ಹಾಗೂ ಶು‍ಭಾನಿತ್ವ ಸದಸ್ಯರಾಗಿದ್ದು, ಉಳಿದಂತೆ ಅಗತ್ಯ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಹಾಗೂ ಮೂಲ ಸೌಲಭ್ಯ ಒದಗಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ಸರ್ಕಾರ ಸೂಚಿಸಿದೆ. ಆಳಂದ ಕ್ಷೇತ್ರದ ಮತಗಳವು ಕುರಿತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದನಿ ಎತ್ತಿದ ಬೆನ್ನಲ್ಲೇ ಮತಗಳವು ಜಾಲ ಭೇದಿಸಲು ಸರ್ಕಾರ ಎಸ್‌ಐಟಿ ರಚಿಸಿದೆ.

ಏನಿದು ಪ್ರಕರಣ?:

2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಮತ ಕ್ಷೇತ್ರದಲ್ಲಿ 6 ಸಾವಿರ ಮತಗಳನ್ನು ಅಳಿಸಿ ಹಾಕುವ ಯತ್ನ ನಡೆದಿತ್ತು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಚುನಾವಣಾಧಿಕಾರಿ ನೀಡಿದ ದೂರಿನನ್ವಯ ಆಳಂದ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಬಳಿಕ ಮತಗಳವು ಕೃತ್ಯದ ಬಗ್ಗೆ ಸಿಐಡಿ ತನಿಖೆಗೆ ಆದೇಶವಾಗಿತ್ತು. ತನ್ನ ಬೆಂಬಲಿಗರ ಮತಗಳನ್ನು ತೆಗೆದು ಹಾಕಲು ಬಿಜೆಪಿ ಯತ್ನಿಸಿತ್ತು ಎಂದು ಕಾಂಗ್ರೆಸ್ ಶಾಸಕ ಬಿ.ಆರ್‌.ಪಾಟೀಲ್ ದೂರಿದ್ದರು.

ರಾಷ್ಟ್ರವ್ಯಾಪಿ ಮತಗಳವು ನಡೆದಿದೆ ಎಂದು ಆರೋಪಿಸಿ ಹೋರಾಟಕ್ಕಿಳಿದಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಶಾಸಕ ಬಿ.ಆರ್.ಪಾಟೀಲ್ ಅವರನ್ನು ಕರೆಸಿಕೊಂಡು ಸುದ್ದಿಗೋಷ್ಠಿ ನಡೆಸಿ ಆಳಂದ ಕ್ಷೇತ್ರದ ಮತಗಳ್ಳತನ ಯತ್ನ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ, ಈ ಪ್ರಕರಣದ ಸಮಗ್ರ ತನಿಖೆಗೂ ಒತ್ತಾಯಿಸಿದ್ದರು. ಇದಕ್ಕೂ ಮೊದಲು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಬಗ್ಗೆ ಆರೋಪ ಮಾಡಿದ್ದರು.

ಗೃಹ ಸಚಿವ ಚರ್ಚೆ ಬಳಿ ಸಿಎಂ ತೀರ್ಮಾನ:

ಮತಗಳವು ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ತುಷಾರ್ ಗಿರಿನಾಥ್ ಹಾಗೂ ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಅವರೊಂದಿಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚಿಸಿದ್ದರು. ಈ ಉನ್ನತಮಟ್ಟದ ಸಭೆ ಬಳಿಕ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಶನಿವಾರ ಸಂಜೆ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಈಗಾಗಲೇ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣ, ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣಗಳ ತನಿಖೆಗೆ ಬಿ.ಕೆ.ಸಿಂಗ್ ನೇತೃತ್ವದಲ್ಲೇ ಎಸ್‌ಐಟಿಗಳು ರಚನೆಯಾಗಿದ್ದವು. ಈಗ ಮತ್ತೊಂದು ಪ್ರಕರಣದ ಪತ್ತೆದಾರಿಕೆ ಹೊಣೆ ಸಹ ಅವರ ಹೆಗಲಿಗೆ ಬಿದ್ದಿದೆ.

-ಬಾಕ್ಸ್‌-

ಮತ್ತಷ್ಟು ಪ್ರಕರಣ ದಾಖಲು ಸಾಧ್ಯತೆ?

ಎಸ್‌ಐಟಿ ರಚನೆ ಆದೇಶದಲ್ಲಿ ರಾಜ್ಯದ ಇತರೆ ಠಾಣೆಗಳಲ್ಲಿ ಮತಗಳವು ಸಂಬಂಧ ದಾಖಲಾಗುವ ಪ್ರಕರಣಗಳ ಕುರಿತು ತನಿಖೆ ಎಸ್‌ಐಟಿಗೆ ವರ್ಗಾಯಿಸುವಂತೆ ಡಿಜಿಪಿಗೆ ಸೂಚಿಸಲಾಗಿದೆ. ಈ ಉಲ್ಲೇಖ ಹಿನ್ನೆಲೆಯಲ್ಲಿ ಮತಗಳವು ಬಗ್ಗೆ ಮತ್ತಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಮತಗಳವು ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.

ಎಸ್‌ಐಟಿ ರಚನೆ ಯಾಕೆ?:

ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿತ್ತು. ಈಗ ಅದೇ ಸಿಐಡಿ ಎಡಿಜಿಪಿ ಹಾಗೂ ಎಸ್ಪಿಗಳನ್ನೊಳಗೊಂಡ ಎಸ್‌ಐಟಿ ರಚನೆಯಾಗಿದೆ. ಒಂದು ಪ್ರಕರಣಕ್ಕೆ ಪ್ರತ್ಯೇಕ ತನಿಖಾ ತಂಡ ರಚನೆಯಾದರೆ ಸಮಗ್ರ ತನಿಖೆಗೆ ಅನುಕೂಲವಾಗಲಿದೆ ಎಂಬುದು ಕಾರಣ ಎನ್ನಲಾಗಿದೆ.

ಪ್ರಣವ್‌ ಮೊಹಂತಿ ಅವರಿಗೆ ಹಿನ್ನಡೆ?:

ಆಳಂದ ಮತಗಳವು ಪ್ರಕರಣ ಸೈಬರ್ ಡಿಜಿಪಿ ಪ್ರಣವ್‌ ಮೊಹಂತಿ ಅವರ ಮೇಲುಸ್ತುವಾರಿಯಲ್ಲಿ ಸಿಐಡಿ ಸೈಬರ್‌ ವಿಭಾಗದ ಅಧಿಕಾರಿಗಳು ನಡೆಸುತ್ತಿದ್ದರು. ಅಲ್ಲದೆ, ಧರ್ಮಸ್ಥಳದಲ್ಲಿ ಅನಧಿಕೃತವಾಗಿ ಮೃತದೇಹಗಳ ಹೂತ ಪ್ರಕರಣದ ಕುರಿತ ಎಸ್ಐಟಿ ಮುಖ್ಯಸ್ಥರೂ ಅವರಾಗಿದ್ದರು. ಈಗ ದಿಢೀರನೇ ಮೊಹಂತಿ ಅವರಿಂದ ಪ್ರಕರಣ ಹಿಂಪಡೆದು ಬಿ.ಕೆ.ಸಿಂಗ್ ಅವರಿಗೆ ವಹಿಸಿದ ಸರ್ಕಾರದ ತೀರ್ಮಾನ ಇಲಾಖೆಯಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

---

ಸದ್ಯದಲ್ಲೇ ಹೈಡ್ರೋಜನ್‌

ಬಾಂಬ್‌: ರಾಹುಲ್‌ ಗುಡುಗು

ವಯನಾಡ್‌: ಕರ್ನಾಟಕದ ಆಳಂದ ಚುನಾವಣಾ ವೇಳೆಯ ಮತಗಳವು ಯತ್ನದ ಕುರಿತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಲೋಕಸಭೆಯ ವಿಪಕ್ಷ ರಾಹುಲ್‌ ಗಾಂಧಿ, ‘ಕರ್ನಾಟಕ ಸಿಐಡಿ ಕೇಳಿದ ಮಾಹಿತಿಗಳನ್ನು ಒದಗಿಸಲು ಆಯೋಗ ನಿರಾಕರಿಸುತ್ತಿದೆ’ ಎಂದು ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ‘ಮೊದಿ ಮ ತಗಳ್ಳತನ ಮಾಡಿ ಚುನಾವಣೆ ಗೆದ್ದರು ಎಂಬುದರ ಬಗ್ಗೆ ಯಾರಿಗೂ ಯಾವುದೇ ಸಂಶಯ ಉಳಿಯದಂತೆ ಕಾಂಗ್ರೆಸ್‌ ಸಾಕ್ಷ್ಯಗಳನ್ನು ತೋರಿಸಲಿದೆ. ನನ್ನ ಈ ಹಿಂದಿನ 2 ಪತ್ರಿಕಾಗೋಷ್ಠಿಗಳಲ್ಲಿ ತಿಳಿಸಿದಂತೆ, ನಾವು ಹೈಡ್ರೋಜನ್‌ ಬಾಂಬ್‌ ಅನ್ನು ಬಹಿರಂಗಪಡಿಸಲು ಹೊರಟಿದ್ದೇವೆ. ಅದು ಪರಿಸ್ಥಿತಿಯ ವಾಸ್ತವವನ್ನು ಸಂಪೂರ್ಣ ಧ್ವಂಸಗೊಳಿಸಲಿದೆ’ ಎಂದರು.