ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡುವ ಅಧಿಕಾರವೇ ಇಲ್ಲ: ಸಂಸದ ಬಸವರಾಜ ಬೊಮ್ಮಾಯಿ

| Published : Sep 18 2025, 01:10 AM IST

ಸಾರಾಂಶ

ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡುವ ಅಧಿಕಾರನೇ ಇಲ್ಲ. ಸ್ಯಾಂಪಲ್ ಸರ್ವೆ ಮಾಡುವ ಅಧಿಕಾರ ಇದೆ. ಕೇಂದ್ರ ಸಮೀಕ್ಷಾ ಕಾಯಿದೆ ಪ್ರಕಾರ ರಾಜ್ಯ ಸರ್ಕಾರಕ್ಕೆ ಮನೆ ಮನೆಗೆ ಹೋಗಿ ಸರ್ವೆ ಮಾಡುವ ಅಧಿಕಾರ ಇಲ್ಲ.

ಹಾವೇರಿ: ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿ ಗಣತಿ ಮಾಡುವುದಾಗಿ ಹೇಳಿದೆ. ಅಲ್ಲಿಯವರೆಗೆ ಸಿಎಂ ಸಿದ್ದರಾಮಯ್ಯ ಕಾಯಬೇಕು. ಯಾರನ್ನೋ ಮೆಚ್ಚಿಸಲು ಸಿಎಂ ಸಮೀಕ್ಷೆ ಮಾಡಬಾರದು. ಅಷ್ಟಕ್ಕೂ ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡುವ ಅಧಿಕಾರನೇ ಇಲ್ಲ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡುವ ಅಧಿಕಾರನೇ ಇಲ್ಲ. ಸ್ಯಾಂಪಲ್ ಸರ್ವೆ ಮಾಡುವ ಅಧಿಕಾರ ಇದೆ. ಕೇಂದ್ರ ಸಮೀಕ್ಷಾ ಕಾಯಿದೆ ಪ್ರಕಾರ ರಾಜ್ಯ ಸರ್ಕಾರಕ್ಕೆ ಮನೆ ಮನೆಗೆ ಹೋಗಿ ಸರ್ವೆ ಮಾಡುವ ಅಧಿಕಾರ ಇಲ್ಲ. ಇವರು ಸಮೀಕ್ಷೆ ಹೆಸರಿನಲ್ಲಿ ಹಲವಾರು ಗೊಂದಲ ಸೃಷ್ಟಸಿದ್ದಾರೆ. ವೀರಶೈವ ಲಿಂಗಾಯತ ಅಂತ ಒಂದು ಜಾತಿ ಸೃಷ್ಟಿ ಮಾಡಿದಾರೆ. ಲಿಂಗಾಯತ ವೀರಶೈವ ಅಂತ ಒಂದು ಸೃಷ್ಟಿ ಮಾಡಿದ್ದಾರೆ. ಪ್ರತಿ ಸಮುದಾಯದಲ್ಲಿ ಇಪ್ಪತ್ತೈದರಿಂದ ಮೂವತ್ತು ಹೊಸ ಉಪ ಪಂಗಡಗಳನ್ನು ಸೃಷ್ಟಿ ಮಾಡಿದ್ದಾರೆ ಎಂದರು.ಮತಾಂತರಿಗಳಿಗೆ ಪ್ರತ್ಯೇಕ ಕಾಲಂ: ಕನ್ವರ್ಟೆಡ್ ಕ್ರಿಶ್ಚಿಯನ್ ಅಂತ ಒಂದು ಪ್ರತ್ಯೇಕ ಕಾಲಂ ಮಾಡಿದ್ದಾರೆ. ಎಲ್ಲ ಸಮಾಜದಲ್ಲಿ ಕನ್ವರ್ಟೆಡ್ ಕ್ರಿಶ್ಚಿಯನ್ ಇರುವ ರೀತಿಯಲ್ಲಿ ಮಾಡಿದ್ದಾರೆ. ಸಂವಿಧಾನದಲ್ಲಿ ಕನ್ವರ್ಟೆಡ್‌ಗೆ ಯಾವುದೇ ಕಾಲಂ ಇಲ್ಲ. ಇವರು ಸಮಾಜ ಒಡೆಯುವುದಲ್ಲ, ಸಮಾಜ ಚೂರು ಚೂರು ಮಾಡಿದ್ದಾರೆ. ಇದು ಸದುದ್ದೇಶದಿಂದ ಕೂಡಿಲ್ಲ, ರಾಜಕೀಯ ಉದ್ದೇಶದಿಂದ ಕೂಡಿದೆ ಇದರ ಬದಲಾವಣೆ ಆಗಬೇಕು. ಕೇಂದ್ರ ಸರ್ಕಾರ ಈಗಾಗಲೇ ಸಮೀಕ್ಷೆ ಮಾಡುವುದಾಗಿ ಹೇಳಿದೆ. ಅಲ್ಲಿಯವರೆಗೆ ಕಾಯಬೇಕು, ಯಾರನ್ನೋ ಮೆಚ್ಚಿಸಲು ಸಿಎಂ ಸಮೀಕ್ಷೆ ಮಾಡಬಾರದು. ಮತಾಂತರ ನಿಷೇಧ ಕಾನೂನು ಕರ್ನಾಟಕದಲ್ಲಿದೆ, ನಮ್ಮ ಸರ್ಕಾರದಲ್ಲೇ ಕಾಯ್ದೆ ತಿದ್ದುಪಡಿ ಮಾಡಿದ್ದೇವೆ. ಒತ್ತಾಯಪೂರ್ವಕವಾಗಿ ಮತಾಂತರ, ಆಮಿಷ ಪೂರ್ವಕ ಮತಾಂತರಕ್ಕೆ ಯಾವಾಗಲೂ ನಿಷೇಧ ಇದ್ದೇ ಇದೆ. ಕಣ್ಣು ಮುಚ್ಚಿಕೊಂಡು ದಾರಿ ತಪ್ಪಿಸುವ ಕೆಲಸ ಇವರು ಮಾಡುತ್ತಿದಾರೆ ಎಂದು ಆರೋಪಿಸಿದರು. ಕುರುಬ ಸಮಾಜವನ್ನು ಎಸ್‌ಟಿ ಸೇರಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಎಲ್ಲ ಸಮುದಾಯಗಳ ವಿಶ್ವಾಸ ತೆಗೆದುಕೊಳ್ಳಬೇಕು. ನಾನು ಸಿಎಂ ಆಗಿದ್ದಾಗ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಹೆಚ್ಚಳ ಮಾಡಿದೆ. ಎಸ್‌ಸಿಗೆ ಶೇ. 15ರಿಂದ ಶೇ. 17ಕ್ಕೆ ಹೆಚ್ಚಳ ಮಾಡಿದ್ದೇನೆ. ಈಗ ಅದರ ಪ್ರಕಾರ ನಡೆದಿದೆ. ಮುಂದೆ ಕೇಂದ್ರ ಸರ್ಕಾರ ಸಮೀಕ್ಷೆ ಮಾಡಲಿದೆ. ಅದರ ಆಧಾರದ ಮೇಲೆ ಜನಸಂಖ್ಯೆ ಗೊತ್ತಾಗುತ್ತದೆ. ಅದರ ಆಧಾರದ ಮೇಲೆ ಮುಂದೆ ನಿರ್ಧಾರ ಆಗುತ್ತದೆ ಎಂದರು.ಡಿಜೆ ಕೇಸ್ ವಾಪಸ್ ಪಡೆಯಲಿ: ಗಣೇಶೋತ್ಸವದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ಡಿಜೆ ನಿಷೇಧ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಧಾರವಾಡದಲ್ಲಿ ಡಿಜೆ ಬಳಸಲು ಅವಕಾಶ ಕಲ್ಪಿಸಿದ್ದಾರೆ. ಬೆಳಗಾವಿ ವಿಭಾಗದಲ್ಲಿ ಡಿಜೆ ಬಳಕೆಗೆ ಅವಕಾಶ ನೀಡಿದ್ದಾರೆ. ಆದರೆ ಹಾವೇರಿ ಜಿಲ್ಲೆಗೆ ಅವಕಾಶ ನೀಡಿಲ್ಲ. ಡಿಜೆ ಡೆಸಿಬಲ್ ಕಡಿಮೆ ಮಾಡಲು ಕೋರ್ಟ್ ನಿಯಮ ಇದೆ. ಅದನ್ನು ಪಾಲಿಸುವಂತೆ ನೋಡಿಕೊಂಡರೆ ಆಯಿತು. ಇವರು ಗಣೇಶ ಹಬ್ಬದ ಹುರುಪು ಹಾಳು ಮಾಡಿದ್ದಾರೆ. ಡಿಜೆ ವಿಚಾರದಲ್ಲಿ ಸರ್ಕಾರ ಕಾರ್ಯಕರ್ತರ ಮೇಲೆ ಹಾಕಿರುವ ಎಫ್‌ಐಆರ್ ತೆಗೆಯಬೇಕು ಎಂದು ಆಗ್ರಹಿಸಿದರು.