ಕಾರಟಗಿ: ಶ್ರೀರಾಮನವಮಿ ಅಂಗವಾಗಿ ಮರ್ಲಾನಹಳ್ಳಿಯಲ್ಲಿ ಶ್ರೀಕೋದಂಡರಾಮ ದೇವಸ್ಥಾನ ಸಮಿತಿಯಿಂದ ಶ್ರ ಸೀತಾರಾಮ ಕಲ್ಯಾಣ ಮಹೋತ್ಸವ ಭಕ್ತಿಭಾವ ಹಾಗೂ ಸಂಪ್ರದಾಯಬದ್ಧವಾಗಿ ವೈಭವದಿಂದ ಶುಕ್ರವಾರ ಆಚರಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮಸ್ಥರು ಸೇರಿ ಧಾರ್ಮಿಕ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ಆರಂಭಗೊಂಡು, ಶ್ರೀಸೀತಾ–ರಾಮ–ಲಕ್ಷ್ಮಣರ ಮೂರ್ತಿಗಳಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಅರ್ಚಕರ ವೇದಮಂತ್ರಗಳ ಘೋಷದೊಂದಿಗೆ ಅಭಿಷೇಕ,ಅಲಂಕಾರ ಹಾಗೂ ವಿವಿಧ ಪೂಜಾ ವಿಧಿ ವಿಧಾನ ನೆರವೇರಿದವು. ದೇವಸ್ಥಾನದ ಅರ್ಚಕ ಜಿ. ಪ್ರಸಾದ್ ಶ್ರೀರಾಮನ ಮಹಿಮೆ ಹಾಗೂ ರಾಮನವಮಿಯ ಆಧ್ಯಾತ್ಮಿಕ ಮಹತ್ವ ವಿವರಿಸಿದರು.

ಶ್ರೀರಾಘವಂದಶರಥಾತ್ಮಜಮಪ್ರಮೇಯಂ…ರಾಮಂ ನಿಶಾಚರ ವಿನಾಶಕರಂ ನಮಾಮಿ ಎಂಬ ಶ್ರೀರಾಮ ಸ್ತೋತ್ರ ಪಠಿಸಿದರು.ರಾಮನವಮಿ ಹಬ್ಬವು ಶ್ರೀರಾಮಚಂದ್ರನ ಅವತಾರ ದಿನವಾಗಿದ್ದು, ಸತ್ಯ, ಧರ್ಮ,ನಿಷ್ಠೆ ಹಾಗೂ ಆದರ್ಶ ಜೀವನ ಮೌಲ್ಯ ಸಾರುವ ಹಬ್ಬವಾಗಿದೆ. ಶ್ರೀರಾಮನ ಆದರ್ಶ ಜೀವನವು ಸಮಾಜದಲ್ಲಿ ಸೌಹಾರ್ದತೆ, ನೀತಿ ಮತ್ತು ಕುಟುಂಬ ಮೌಲ್ಯಗಳ ಮಹತ್ವ ತಿಳಿಸಿದರು. ಈ ದಿನ ರಾಮನಾಮ ಸ್ಮರಣೆ, ಪೂಜೆ ಹಾಗೂ ಕಲ್ಯಾಣೋತ್ಸವದಲ್ಲಿ ಭಾಗವಹಿಸುವುದರಿಂದ ಶಾಂತಿ, ಸಮೃದ್ಧಿ ಹಾಗೂ ಐಶ್ವರ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ ಎಂದರು.

ಇದಕ್ಕೂ ಮುನ್ನ ಸುಜಾತ ಹಾಗೂ ಶ್ರೀವೀರಾಜು ದಂಪತಿಯಿಂದ ಶ್ರೀಸೀತಾರಾಮ ಕಲ್ಯಾಣ ಮಹೋತ್ಸವ ನೆರವೇರಿಸಲಾಯಿತು. ಕಲ್ಯಾಣೋತ್ಸವದ ವೇಳೆ ಭಕ್ತರು ಶ್ರೀರಾಮ ಜಯ ರಾಮ ಘೋಷಣೆಗಳೊಂದಿಗೆ ಭಕ್ತಿಭಾವದಿಂದ ಪಾಲ್ಗೊಂಡರು.


ಕಾರ್ಯಕ್ರಮದಲ್ಲಿ ರಾಮ್ ಬಾಬು,ವೆಂಕಣ್ಣ, ಶ್ರೀನಿವಾಸರಾವ್, ಕೃಷ್ಣ ಸುರಡ್ಡಿ, ಎಂ ಸುಬ್ಬರಾವ್, ಟಿ. ಸುಧೀರ್, ಈ.ರವಿಪ್ರಸಾದ್, ಜಿ.ರಮೇಶ್, ಸುಬ್ರಹ್ಮಣ್ಯಂ, ಸಿ.ಎಚ್. ರಾಘವೇಂದ್ರ, ಎ.ಸತ್ಯನಾರಾಯಣ, ಎನ್.ಪ್ರತಾಪ್,ಎಂ. ಉಮಾಕಿರಣ್, ಕೆ.ರವೀಂದ್ರ, ಎಸ್. ವೆಂಕಟೇಶ, ಎಸ್.ನಾಗರಾಜ್, ಎಸ್. ವೆಂಕಟಕೃಷ್ಣ, ವಿ.ಹರಿಬಾಬು, ವಿ. ಸುರೇಶ್ ಸೇರಿದಂತೆ ಶ್ರೀ ಸೀತಾರಾಮ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ವಿವಿಧ ಯುವಕರ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಬೆಳಿಗ್ಗೆಯಿಂದಲೇ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.