ಧಾರವಾಡ:

ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರು ಕಾರ್ಯಾಚರಣೆಯಲ್ಲಿ ವಿಫಲವಾಗಿರುವ ಎಲ್ ಆ್ಯಂಡ್ ಟಿ ವಿರುದ್ಧ ಈಗಾಗಲೇ ಹಲವು ರೀತಿಯ ಅಪಸ್ವರ ಕೇಳಿ ಬಂದಿದ್ದು, ಶುಕ್ರವಾರ ಕಂಪನಿ ಕಾರ್ಯವೈಖರಿ ಬೇಸತ್ತು ಪಾಲಿಕೆ ಸದಸ್ಯರು 3ನೇ ವಲಯ ಕಚೇರಿಯಲ್ಲಿರುವ ಎಲ್ ಆ್ಯಂಡ್ ಟಿ ಕಚೇರಿಗೆ ಸಿಬ್ಬಂದಿ ಒಳಗಿರುವಾಗಲೇ ಬೀಗ ಜಡೆದು ಪ್ರತಿಭಟನೆ ನಡೆಸಿದರು.

ಧಾರವಾಡ ಜ್ಯುಬಲಿ ಸರ್ಕಲ್ ಬಳಿಯ ಕಚೇರಿಗೆ ಕಾಲಿ ಕೊಡ ಹಿಡಿದುಕೊಂಡು ಬಂದ ಸದಸ್ಯರು ಕಂಪನಿ ವಿರುದ್ಧ ಧಿಕ್ಕಾರ ಕೂಗಿದರು. ಶುಕ್ರವಾರ ಬೆಳಗ್ಗೆಯಿಂದಲೇ ಪುರಪಿತೃಗಳು ನಡೆಸುತ್ತಿದ್ದ ಪ್ರತಿಭಟನೆಗೆ ಸ್ಪಂದನೆ ಸಿಗದಿದ್ದರಿಂದ ಸಿಬ್ಬಂದಿ ಒಳಗಡೆ ಇರುವಾಗಲೇ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಬೇಕಾದ ಪ್ರಸಂಗವೂ ಬಂದೊದಗಿತು.

ಅವಳಿ ನಗರಕ್ಕೆ 3-4 ದಿನಕ್ಕೊಮ್ಮೆ ಸಿಗುತ್ತಿದ್ದ ನೀರು ಇದೀಗ 15 ದಿನಕ್ಕೆ ಹೋಗಿದೆ. ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಬೇಸಿಗೆ ಸಂದರ್ಭ ಜನರ ಸಮಸ್ಯೆಗೆ ಕಂಪನಿ ಪ್ರತಿನಿಧಿಗಳು ಸ್ಪಂದಿಸುತ್ತಲೇ ಇಲ್ಲ. ಇವರ ಬೇಜವಾಬ್ದಾರಿ ಜನರ ಬದುಕಿಗೆ ಭಾರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು.

ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆಯೇ ಪ್ರತಿಭಟನಾ ಸ್ಥಳಕ್ಕೆ ಎಲ್ ಆ್ಯಂಡ್ ಟಿ ಯೋಜನಾ ಮುಖ್ಯಸ್ಥ ಹರಿಪ್ರಸಾದ್ ಅವರನ್ನೇ ಕರೆ ತರಲಾಯಿತು. ಈ ವೇಳೆ ಹರಿಪ್ರಸಾದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಭಟನಾಕಾರರು, ನೀವೇನು ಜನರ ಬದುಕಿನೊಂದಿಗೆ ಆಟವಾಡುತ್ತಿದ್ದೀರಾ? ಪಾಲಿಕೆ ಆಯುಕ್ತರ ಮಾತನ್ನೂ ನೀವು ಕೇಳುತ್ತಿಲ್ಲ. ನಿಮ್ಮ ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ. ಇದು ಹೀಗೆ ಮುಂದುವರಿದರೆ ಎಲ್ಲ ಜನರನ್ನು ಕರೆತಂದು ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.


ಹರಿಪ್ರಸಾದ್‌, ಮಾ. 31ರಿಂದ ಅವಳಿ ನಗರಕ್ಕೆ 3-4 ದಿನಕ್ಕೊಮ್ಮೆ ನೀರು ಬರಲಿದೆ ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಅಲ್ಲಿಯ ವರೆಗೆ 8ರಿಂದ 10 ಜನ ಸಿಬ್ಬಂದಿ ಕಚೇರಿಯೊಳಗಡೆಯೇ ಪ್ರತಿಭಟನಾಕಾರರಿಂದ ಬಂಧನಕ್ಕೊಳಗಾಗಿದ್ದರು.

ಈ ವೇಳೆ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಚಂದ್ರಕಲಾ ಕೊಟಬಾಗಿ, ಸುರೇಶ ಬೇದ್ರೆ, ತುಳಜಪ್ಪ ಪೂಜಾರ, ಕವಿತಾ ಕಬ್ಬೇರ, ವಿಜಯಾನಂದ ಶೆಟ್ಟಿ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.