ಸಾರಾಂಶ
ಸಮೀಕ್ಷೆ ಮುಗಿಯುವ ವರೆಗೆ ಮನೆ ಬಾಗಿಲಿಗೆ ಅಂಟಿಸಿರುವ ಸ್ಟಿಕರ್ ತೆಗೆಯಬಾರದು. ಸಮೀಕ್ಷೆದಾರರು ಮನೆಗೆ ಬಂದಾಗ ಕುಟುಂಬದ ಎಲ್ಲ ಸದಸ್ಯರು ಶಿಕ್ಷಣ, ಉದ್ಯೋಗ, ಸೌಲಭ್ಯ ಪಡೆದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಜರುಗುವಂತೆ ಸಹಕರಿಸಬೇಕು.
ಧಾರವಾಡ: ನವರಾತ್ರಿ ಆರಂಭದ ದಿನ ಸೆ. 22 ರಿಂದಲೇ ಆರಂಭವಾಗಲಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಸಮೀಕ್ಷೆಯಲ್ಲಿ ಪ್ರತಿಯೊಂದು ಕುಟುಂಬ ಭಾಗವಹಿಸಿ ಅಗತ್ಯ ಮಾಹಿತಿ ನೀಡಿ ಸಹಕರಿಸಲು ಜಿಲ್ಲಾಡಳಿತವು ಜಿಲ್ಲೆಯ ಜನತೆಗೆ ಮನವಿ ಮಾಡಿದೆ.
ಸಮೀಕ್ಷೆ ಮುಗಿಯುವ ವರೆಗೆ ಮನೆ ಬಾಗಿಲಿಗೆ ಅಂಟಿಸಿರುವ ಸ್ಟಿಕರ್ ತೆಗೆಯಬಾರದು. ಸಮೀಕ್ಷೆದಾರರು ಮನೆಗೆ ಬಂದಾಗ ಕುಟುಂಬದ ಎಲ್ಲ ಸದಸ್ಯರು ಶಿಕ್ಷಣ, ಉದ್ಯೋಗ, ಸೌಲಭ್ಯ ಪಡೆದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಜರುಗುವಂತೆ ಸಹಕರಿಸಬೇಕು. ಈಗಾಗಲೇ ಸಮೀಕ್ಷೆ ಮಾಡುವ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವಿಕೆ ಹಾಗೂ ಗಣತಿದಾರರಿಗೆ ಯಾವ ಮನೆಗಳ ಸಮೀಕ್ಷೆ ಮಾಡಬೇಕೆಂಬ ಹೊಣೆಗಾರಿಕೆ ನಿಗದಿ ಮಾಡಲಾಗಿದೆ. ಅವರಿಗೆ ತರಬೇತಿಯನ್ನೂ ಸಹ ನೀಡಲಾಗಿದೆ.ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದ್ದಲ್ಲಿ, ಪಡಿತರ ಚೀಟಿವಾರು ಪ್ರತ್ಯೇಕ ಕುಟುಂಬವೆಂದು ಪರಿಗಣಿಸಿ ಸಮೀಕ್ಷೆ ನಡೆಸಲಾಗುವುದು. ಜಿಲ್ಲೆಯಲ್ಲಿ ಅಂದಾಜು 5,46,012 ಕುಟುಂಬಗಳ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು.
ಒಬ್ಬ ಸಮೀಕ್ಷೆದಾರ ಗರಿಷ್ಠ 150 ಕುಟುಂಬಗಳಿಗೆ ಭೇಟಿ ನೀಡಿ, ಮಾಹಿತಿ ದಾಖಲಿಸಲಿದ್ದಾರೆ. 4880 ಗಣತಿದಾರರು ಸೆ. 22 ರಿಂದ ಅ.7ರ ವರೆಗೆ ಎಲ್ಲ ಕುಟುಂಬಗಳ ಸಮೀಕ್ಷೆ ಮಾಡಲಿದ್ದಾರೆ ಎಂದರು.