ಸಾರಾಂಶ
ಕಾಗಿನೆಲೆ ಪೀಠ ಆರಂಭಿಸಲು ನಾನು ಮೂರು ವರ್ಷ ಮನೆ ಮತ್ತು ಕುಟುಂಬವನ್ನು ತೊರೆದು ಅವಿರತವಾಗಿ ಕೆಲಸ ಮಾಡಿದ್ದು, ಮೂಲ ಮಠದ ಜತೆಗೆ ನಾಲ್ಕು ವಿಭಾಗೀಯ ಪೀಠಗಳನ್ನು ಆರಂಭಿಸಿದ್ದು, ಅದನ್ನು ಈಗಿನವರು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ನಾಡಿನ ವಿಭೂತಿ ಪುರುಷರು ತಮ್ಮ ಮಾತು ಮತ್ತು ಕೃತಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದು, ಅಂತಹ ಉತ್ತಮ ಕೆಲಸವನ್ನು 500 ವರ್ಷಗಳ ಹಿಂದೆಯೇ ಭಕ್ತ ಕನಕದಾಸರು ಮಾಡಿ ಹೋಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.ತಾಲೂಕು ಆಡಳಿತ ಮತ್ತು ತಾಲೂಕು ಕುರುಬರ ಸಂಘದ ವತಿಯಿಂದ ಪಟ್ಟಣದ ಕಾಗಿನೆಲೆ ಮಠದ ಆವರಣದಲ್ಲಿ ನಡೆದ ಭಕ್ತ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶತಮಾನಗಳ ಹಿಂದೆಯೇ ಸಮಾನತೆಯ ಸಮಾಜದ ನಿರ್ಮಾಣಕ್ಕೆ ದುಡಿದ ಆ ಮಹನೀಯ ಅಜರಾಮರ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಕಾಲವು ಜನರದೆ ಹೊರತು ಮತ್ಯಾರದೂ ಅಲ್ಲಾ ಎಂದ ಅವರು, ನನ್ನನ್ನು ಸೇರಿದಂತೆ ಇಂದಿನ ಚುನಾಯಿತ ಜನ ಪ್ರತಿನಿಧಿಗಳು ಬಸವಣ್ಣನ ಕಾಯಕ ತತ್ವವನ್ನು ಎಷ್ಟು ಮಂದಿ ಅನುಸರಿಸುತ್ತಿದ್ದೇವೆ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ವರ್ಷಕ್ಕೆ 35 ಜಯಂತಿಗಳ ಜತೆಗೆ 230 ವಿವಿಧ ರಜೆಗಳಿದ್ದು, ಸರ್ಕಾರ 120 ದಿನಗಳಿಗೆ ತನ್ನ ನೌಕರರಿಗೆ ವರ್ಷಕ್ಕೆ 1.10 ಲಕ್ಷ ಕೋಟಿ ಸಂಬಳ ಹಾಗೂ ಸಾರಿಗೆಯ ಹಣ ನೀಡುತ್ತಿದ್ದು, ಇದರಿಂದ ದೇಶದ ಅಭಿವೃದ್ಧಿ ಸಾಧ್ಯವೇ ಎಂದು ಕೇಳಿದರು.
ನನ್ನ ಈ ಮನವಿ ಮತ್ತು ಸಲಹೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಲ್ಲರೊಂದಿಗೆ ಚರ್ಚಿಸಿ ಎಲ್ಲ ಮಹನೀಯರ ಜಯಂತಿಗಳನ್ನು ಒಂದೇ ದಿನ ಆಚರಿಸಿ ಅನಗತ್ಯ ರಜೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.ಕಾಗಿನೆಲೆ ಪೀಠ ಆರಂಭಿಸಲು ನಾನು ಮೂರು ವರ್ಷ ಮನೆ ಮತ್ತು ಕುಟುಂಬವನ್ನು ತೊರೆದು ಅವಿರತವಾಗಿ ಕೆಲಸ ಮಾಡಿದ್ದು, ಮೂಲ ಮಠದ ಜತೆಗೆ ನಾಲ್ಕು ವಿಭಾಗೀಯ ಪೀಠಗಳನ್ನು ಆರಂಭಿಸಿದ್ದು, ಅದನ್ನು ಈಗಿನವರು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ಕನಕದಾಸರ ಜಯಂತಿಯನ್ನು ಒಂದು ಜಾತಿಗೆ ಸೀಮಿತ ಮಾಡಬಾರದು ಎಂದ ಅವರು, ಮುಂದಿನ ವರ್ಷದಿಂದ ಪಟ್ಟಣದ ಪುರಸಭೆಯ ಡಾ. ರಾಜಕುಮಾರ್ ಸಾಂಸ್ಕೃತಿಕ ಬಾನಂಗಳದಲ್ಲಿ ಸರ್ವ ಜನಾಂಗದವರ ಸಮ್ಮುಖದಲ್ಲಿ ಆಚರಣೆ ಮಾಡಬೇಕೆಂದು ಸಲಹೆ ನೀಡಿದರು.