ಸಾರಾಂಶ
ಹುಕ್ಕೇರಿ ತಾಲೂಕಿನ ಹರಗಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ, ಬಂದೂಕು ತೋರಿಸಿ ಹಣ ದರೋಡೆ ಮಾಡಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಮಾತ್ರವಲ್ಲ, ಈ ಪ್ರಕರಣ ಸಂಬಂಧ ದೂರುದಾರ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹುಕ್ಕೇರಿ ತಾಲೂಕಿನ ಹರಗಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ, ಬಂದೂಕು ತೋರಿಸಿ ಹಣ ದರೋಡೆ ಮಾಡಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಮಾತ್ರವಲ್ಲ, ಈ ಪ್ರಕರಣ ಸಂಬಂಧ ದೂರುದಾರ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರೋಡೆ ಪ್ರಕರಣ ಕುರಿತು ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಒಂದು ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಕೊಲ್ಲಾಪುರದಿಂದ ಬರುತ್ತಿದ್ದ ಕಾರನ್ನು ನ.15ರಂದು ಹರಗಾಪುರ ಬಳಿ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಸೂರಜ್ ಹೊನಮಾನೆ ದೂರು ನೀಡಿದ್ದರು. ಕಾರು ನೇರ್ಲಿ ಬಳಿ ಪತ್ತೆಯಾಗಿದೆ. ದೂರು ಕೊಟ್ಟವರ ಮೇಲೆ ಸಂಶಯ ಬಂದು ಕಾರು ಚಾಲಕ ಆರೀಫ್ ಶೇಖ್ ಮತ್ತು ಕಾರೊಳಗೆ ಪ್ರಯಾಣಿಸುತ್ತಿದ್ದ ಸೂರಜ್ ಮತ್ತು ಅಜಯ ಸರಗಾರ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.
ದೂರಿನಲ್ಲಿ ₹ 75 ಲಕ್ಷ ಕಳುವಾಗಿದೆ ಎಂದು ತಿಳಿಸಲಾಗಿತ್ತು. ಆದರೆ, ಕಾರಿನಲ್ಲಿ ₹1.01 ಕೋಟಿ ಸಿಕ್ಕಿದೆ. ಈ ಕುರಿತು ದೂರುದಾರರನ್ನು ವಿಚಾರಿಸಿದಾಗ, ವ್ಯಾಪಾರಿಯೊಬ್ಬರು ಕೊಟ್ಟ ಹಣ ಎಣಿಸದೇ ತೆಗೆದುಕೊಂಡು ಬರುತ್ತಿದ್ದೇವೆ. ₹75 ಲಕ್ಷ ಇರಬಹುದೆಂದು ಭಾವಿಸಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ತನಿಖೆ ನಡೆಯುತ್ತಿದೆ. ಕಾರಿನ ಮುಂದಿನ ಎರಡು ಸೀಟುಗಳ ನಡುವೆ ಇರುವ ಗೇರ್ ಬಾಕ್ಸ್ ಮತ್ತು ಹ್ಯಾಂಡ್‌ಬ್ರೇಕ್ ಕೆಳಗಿನ ಮೂಲ ವಿನ್ಯಾಸ ಮಾರ್ಪಾಡು ಮಾಡಿ, ಅದರಲ್ಲೇ ಹಣ ಇಟ್ಟಿರುವುದು ಗೊತ್ತಾಗಿದೆ. ಮೋಟಾರು ವಾಹನಗಳ ಕಾಯ್ದೆಯಡಿ ಕಾರಿನ ಮಾಲೀಕರ ವಿರುದ್ಧ ಕೂಡ ದೂರು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಮಹಾರಾಷ್ಟ್ರದ ಸಾಂಗ್ಲಿಯ ಭರತ ಮಾರಗುಡೆ ಎಂಬ ವ್ಯಾಪಾರಿ ಕೇರಳದಲ್ಲಿ ಹಳೆಯ ಚಿನ್ನ ಮಾರಾಟದ ವ್ಯಾಪಾರ ಮಾಡುತ್ತಾರೆ. ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹಳೇ ಚಿನ್ನ ಕಳುಹಿಸುತ್ತಿದ್ದರು. ಇಲ್ಲಿಂದ ಕೇರಳಕ್ಕೆ ಹಣ ಹೋಗುತ್ತಿತ್ತು. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆಯಿದೆ ಎಂದವರು ತಿಳಿಸಿದರು.